ಸೂರ್ಯಕುಮಾರ್ಗೆ ರೋಹಿತ್ ನೀಡಿದ ಆ ಒಂದು "ಟಿಪ್ಸೇ" ಭಾರತದ ರೋಚಕ ಗೆಲುವಿಗೆ ಕಾರಣವಾಯ್ತಾ? Rohit Sharma
- ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ
- ಮಾರ್ಚ್ 8 ರಂದು ನಡೆಯಲಿರುವ ಫೈನಲ್‌ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ
- ನಿನ್ನೆಯ ಪಂದ್ಯಲ್ಲಿ ಟೀಮ್ ಇಂಡಿಯಾದ ಗೆಲುವಿಗೆ ಅನುಭವಿ ಆಟಗಾರನ ಸಲಹೆಯೂ ಕಾರಣ ಎನ್ನಲಾಗಿದೆ
Rohit Sharma : ಅನುಭವಕ್ಕೆ ಸೋಲನ್ನು ಗೆಲುವಾಗಿ ಪರಿವರ್ತಿಸುವ ಸಾಮರ್ಥ್ಯ ಇದೆ. ಅನುಭವಸ್ಥರ ಮಾತು ಕೇಳಿದವರು ಸರಿಯಾದ ಮಾರ್ಗದಲ್ಲಿ ನಡೆಯುತ್ತಾರೆ ಅನ್ನೋ ಮಾತಿದೆ. ಆ ಮಾತಿಗೆ ತಾಜಾ ಉದಾಹರಣೆ ನಿನ್ನೆ ಇಂಗ್ಲೆಂಡ್ ಮತ್ತು ಭಾರತ ನಡುವೆ ನಡೆದ ಟಿ20 ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ನಡೆದ ಒಂದು ಘಟನೆ.
ಹೌದು, ನಿನ್ನೆಯ ಪಂದ್ಯಲ್ಲಿ ಟೀಮ್ ಇಂಡಿಯಾದ ಗೆಲುವಿಗೆ ಅನುಭವಿ ಆಟಗಾರನ ಸಲಹೆಯೂ ಕಾರಣ. ಆ ಅನುಭವಿ ಆಟಗಾರ ಬೇರೆ ಯಾರೂ ಅಲ್ಲ, ಅವರೇ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ. ನಾಯಕ ಸೂರ್ಯಕುಮಾರ್ ಯಾದವ್ಗೆ ರೋಹಿತ್ ಶರ್ಮಾ ನೀಡಿದ ಆ ಒಂದು ಸಲಹೆಯೇ ನಿನ್ನೆ ಟೀಮ್ ಇಂಡಿಯಾದ ಗೆಲುವಿಗೆ ಕಾರಣವಾಯ್ತು ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅವರು ಹೇಳಿದ್ದಾರೆ ಎನ್ನಲಾದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಿನ್ನೆ ಪಂದ್ಯ ಶುರುವಾಗುವ ಮುನ್ನ ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ ಬಳಿ ತೆರಳಿದರು. ಈ ವೇಳೆ ನೀವೇನಾದರೂ ಮೊದಲು ಬ್ಯಾಟಿಂಗ್ ಮಾಡಿದರೆ, ಕೊನೆಯ ಓವರ್ಗಳಲ್ಲಿ ತುಂಬಾ ಜಾಗೂರೂಕರಾಗಿರಿ ಮತ್ತು ಬೌಲಿಂಗ್ ಮಾಡುವಾಗ ಆ ಓವರ್ಗಳನ್ನು ಮುಖ್ಯ ಬೌಲರ್ಗಳಿಗೆ ನೀಡು ಎಂದು ಸಲಹೆ ನೀಡಿದರು. ಅದೇ ರೀತಿ ಸೂರ್ಯ, ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯಾಗೆ ಓವರ್ ನೀಡಿದರು. ಇದರಿಂದ ನಾವು ಗೆದ್ದೆವು ಎಂದು ವೈರಲ್ ಪೋಸ್ಟ್ನಲ್ಲಿ ಬರೆಯಲಾಗಿದೆ.
ವೈರಲ್ ಪೋಸ್ಟ್ನಲ್ಲಿ ಸುನೀಲ್ ಗವಾಸ್ಕರ್ ಎಲ್ಲಿ? ಯಾವಾಗ? ಹೇಳಿದರು ಎಂದು ಉಲ್ಲೇಖಿಸಿಲ್ಲ. ಆದರೂ, ಈ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ನಿನ್ನೆ ನಡೆದ ಪಂದ್ಯದಲ್ಲಿ ರೋಹಿತ್ ಕೂಡ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈ ವೇಳೆ ಅವರು ತಂಡದ ಆಟಗಾರರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಅನುಭವ ಮಾತು ಎಷ್ಟು ಮುಖ್ಯ ನೋಡಿ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್, ಭಾರತಕ್ಕೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ ಸಂಜು ಸ್ಯಾಮ್ಸನ್ (42 ಎಸೆತ 89 ರನ್) ಇಶಾನ್ ಕಿಶನ್ (39), ಶಿವಂ ದುಬೆ (43) ಮತ್ತು ಹಾರ್ದಿಕ್ ಪಾಂಡ್ಯ (27) ಅವರ ಸ್ಪೋಟಕ ಇನ್ನಿಂಗ್ಸ್ ತಂಡದ ಮೊತ್ತವನ್ನು 250ರ ಗಡಿದಾಟಿಸಿತು. 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ ಭಾರತ 253 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ಗೆ ಆರಂಭದಲ್ಲೇ ಫಿಲ್ ಸಾಲ್ಟ್ ಅವರ ವಿಕೆಟ್ ದೊಡ್ಡ ಸಂಕಷ್ಟಕ್ಕೆ ದೂಡಿತು. ಅವರ ನಂತರದಲ್ಲಿ, ಜಾಸ್ ಬಟ್ಲರ್ ಮತ್ತು ನಾಯಕ ಹ್ಯಾರಿ ಬ್ರೂಕ್ ವಿಕೆಟ್ಗಳು ಆಂಗ್ಲರಿಗೆ ಸೋಲಿನ ಭೀತಿ ತಂದಿಟ್ಟಿತು. ಇಲ್ಲಿಗೆ ಭಾರತ ಗೆಲ್ಲುವುದು ಬಹುತೇಕ ಖಚಿತ ಎಂದು ಕ್ರಿಕೆಟ್ ಪ್ರಿಯರು ಖುಷಿಯಾಗಿದ್ದರು. ಆದರೆ, ಟೀಮ್ ಇಂಡಿಯಾ ಅಭಿಮಾನಿಗಳಿಗೆ ಜಾಕೆಬ್ ಬೆಥಲ್ ಮತ್ತು ವಿಲ್ ಜ್ಯಾಕ್ಸ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಬಿಗ್ ಶಾಕ್ ನೀಡಿದರು. ಆದರೆ, ಅಂತಿಮ ಘಟ್ಟದಲ್ಲಿ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಬೌಲಿಂಗ್ ದಾಳಿ ಆಂಗ್ಲರ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸಿತು.
ಕೊನೆಯ ಓವರ್ವರೆಗೂ ಹೋದ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದ್ದು, ಕ್ರೀಡಾಂಗಣದಲ್ಲಿ ತುಂಬಿದ್ದ ಕ್ರಿಕೆಟ್ ಪ್ರೇಮಿಗಳು ಮತ್ತು ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮ ಸೇರಿದಂತೆ ಕ್ರಿಕೆಟ್ ದಿಗ್ಗಜರ ಸಂಭ್ರಮಕ್ಕೆ ಸಾಕ್ಷಿಯಾಯಿತು. ಈ ಪಂದ್ಯವನ್ನು ಕೇವಲ 7 ರನ್ಗಳಿಂದ ಗೆದ್ದ ಭಾರತ ಈಗ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20 ವಿಶ್ವಕಪ್ ಪಟ್ಟಕ್ಕಾಗಿ ಸೆಣಸಲಿದೆ, (ಏಜೆನ್ಸೀಸ್).