ಟೀಮ್ ಇಂಡಿಯಾ ದಂತಕಥೆ ಸುನಿಲ್ ಗವಾಸ್ಕರ್
- ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಭರ್ಜರಿ ಗೆಲುವು
- ಟಿ20 ವಿಶ್ವಕಪ್ ಗೆಲ್ಲುವ ಮುನ್ನ ಮಾತು ಕೊಟ್ಟಿದ್ದ ಸುನಿಲ್ ಗವಾಸ್ಕರ್
- ಕೊಟ್ಟ ಮಾತನ್ನು ಕಡೆಗೂ ಉಳಿಸಿಕೊಂಡ ಕ್ರಿಕೆಟ್ ದಂತಕಥೆ
Team India: ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯನ್ನು ಗೆದ್ದು ಬೀಗಿದ ಟೀಮ್ ಇಂಡಿಯಾಗೆ ಸದ್ಯ ಮಾಜಿ ಕ್ರಿಕೆಟಿಗರಿಂದ ಹಿಡಿದು ಕ್ರಿಕೆಟ್ ಪ್ರೇಮಿಗಳಿಂದ ಮೆಚ್ಚುಗೆಗಳು ಹರಿದುಬರುತ್ತಿವೆ. ಅನೇಕರು ತಂಡದ ಆಟಗಾರರನ್ನು ಪ್ರತ್ಯೇಕವಾಗಿ ಹೊಗಳಿ, ಅಭಿನಂದಿಸುತ್ತಿದ್ದಾರೆ. ಈ ನಡುವೆ, ಟೀಮ್ ಇಂಡಿಯಾ ದಿಗ್ಗಜ ಸುನಿಲ್ ಗವಾಸ್ಕರ್, ಫೈನಲ್ಗೂ ಮುನ್ನ ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಂಡಿದ್ದಾರೆ.
ಸತತ ಮೂರು ಬಾರಿ ಟಿ20 ವಿಶ್ವಕಪ್ ಗೆದ್ದ ತಂಡ ಮತ್ತು ತವರಿನಲ್ಲಿ ಚುಟುಕು ವಿಶ್ವಕಪ್ ಗೆದ್ದ ಮೊದಲ ಟೀಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟೀಮ್ ಇಂಡಿಯಾಗೆ ಸುನಿಲ್ ಗವಾಸ್ಕರ್ ಅಭಿನಂದಿಸಿ, ಆಟಗಾರರ ಪರಿಶ್ರಮವನ್ನು ಕೊಂಡಾಡಿದ್ದಾರೆ. ಟಿ20 ವಿಶ್ವಕಪ್ ಫೈನಲ್ಗೂ ಮೊದಲು ಮಾತನಾಡಿದ್ದ ಗವಾಸ್ಕರ್, ಸೂರ್ಯಕುಮಾರ್ ಯಾದವ್ ಮತ್ತು ಅವರ ತಂಡವು ಏನಾದರೂ ಫೈನಲ್ ಗೆದ್ದರೆ, ಖಂಡಿತ ನಾನು ಮೈದಾನಕ್ಕಿಳಿದು ಅವರೊಟ್ಟಿಗೆ ಹೆಜ್ಜೆ ಹಾಕುವೆ ಎಂದಿದ್ದರು. ಅಂತೆಯೇ, ನ್ಯೂಜಿಲೆಂಡ್ ಎದುರು ವಿಶ್ವಕಪ್ ಎತ್ತಿಹಿಡಿದ ಖುಷಿಯಲ್ಲಿ ಗವಾಸ್ಕರ್, ಮನಬಿಚ್ಚಿ ಕುಣಿದಿದ್ದಾರೆ. ಈ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿವೆ.
ಇನ್ನು ರೋಹಿತ್ ಶರ್ಮರಂತೆಯೇ ಸೂರ್ಯ ಎಂದು ಟೀಮ್ ಇಂಡಿಯಾ ನಾಯಕನನ್ನು ಗುಣಗಾನ ಮಾಡಿದ ಗವಾಸ್ಕರ್, "ಸದಾ ಹರ್ಷಚಿತ್ತದಿಂದ, ಪಾಸಿಟಿವ್ ಮತ್ತು ಆತ್ಮವಿಶ್ವಾಸದಿಂದ ಇರ್ತಾರೆ ಸೂರ್ಯಕುಮಾರ್. ಅವರ ಅದ್ಭುತ 84 ರನ್‌ಗಳ ಕೊಡುಗೆಯಿಂದ ಭಾರತ ಯುಎಸ್‌ಎ ವಿರುದ್ಧ ಗೆಲುವು ಸಾಧಿಸಿತು. ಮತ್ತು ತಂಡದ ಸದ್ಯಸರೆಲ್ಲರೂ ಅವರನ್ನು ಗೌರವಿಸುತ್ತಾರೆ. ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ,(ಏಜೆನ್ಸೀಸ್).