ನವದೆಹಲಿ: ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ 24 ರನ್ಗಳ ಹೀನಾಯ ಸೋಲನ್ನು ಅನುಭವಿಸಿತು. ನುಂಗಲಾರದ ಸೋಲು ಒಂದೆಡೆಯಾದರೆ, ಟೀಮ್ ಇಂಡಿಯಾ ಬ್ಯಾಟ್ಸ್ಮನ್ ಅರ್ಷದೀಪ್ ಸಿಂಗ್ ಮೇಲೆ ವಿಂಡೀಸ್ ವೇಗಿ ತೋರಿದ ಪ್ರತಾಪಕ್ಕೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.
ವೆಸ್ಟ್ ಇಂಡೀಸ್ ನೀಡಿದ 248 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ಬಹುಬೇಗನೇ ವಿಕೆಟ್ಗಳ ಪತನಗೊಂಡು ಸ್ಟಾರ್ ಬ್ಯಾಟರ್ಗಳೇ ಪೆವಿಲಿಯನ್ ಸೇರಿದರು. ಭಾಗಶಃ ಗೆಲುವು ವಿಂಡೀಸ್ ಪಾಲಾಗಿದೆ ಎಂದು ತಿಳಿದಿದ್ದರೂ ಟೀಮ್ ಇಂಡಿಯಾ ಕೊನೆಯವರೆಗೂ ಆಡಲು ಮುಂದಾಯಿತು. ಈ ವೇಳೆ, ಕ್ರೀಸ್ನಲ್ಲಿದ್ದ ಅರ್ಷದೀಪ್ ಸಿಂಗ್ ಅವರ ಭುಜಕ್ಕೆ ತಗುಲುವಂತೆ ಬೌಲರ್ ಶಮಾರ್ ಜೋಸೆಫ್ ಎಸೆದ ಬಾಲ್ ಹಲವರನ್ನು ಕೆರಳಿಸಿತು.
ಬೌನ್ಸರ್ ಹಾಕಿದ ಜೋಸೆಫ್, ಬಾಲ್ ನೇರವಾಗಿ ಅರ್ಷದೀಪ್ ಭುಜಕ್ಕೆ ಹೊಡೆಯುವಂತೆ ಎಸೆದಿದ್ದು ಅಕ್ಷರಶಃ ಕೆರಳಿಸಿತು. ವಿಪರೀತ ನೋವಿನಿಂದ ಬಲ ಕೊಟ್ಟು ಬ್ಯಾಟ್ ಬೀಸಲು ಪರದಾಡುತ್ತಿದ್ದ ಸಿಂಗ್ರನ್ನು ನೋಡಿ ಸ್ವತಃ ಟೀಮ್ ಇಂಡಿಯಾ ಕ್ಯಾಪ್ಟನ್ ಡಗ್ಔಟ್ನಿಂದಲೇ ಹೊರಬರುವಂತೆ ಹೇಳಿದರು. ಪಂದ್ಯವನ್ನು ಅವರಿಗೆ ಬಿಟ್ಟುಕೊಡೋಣ ನೀವು ಬನ್ನಿ ಎಂದು ಸೂಚನೆ ನೀಡಿದರು. ಈ ದೃಶ್ಯವನ್ನು ಕಮೆಂಟರಿ ಬಾಕ್ಸ್ನಲ್ಲಿ ಕುಳಿತು ಇದನ್ನು ಲೈವ್ ನೋಡಿದ ಸುನಿಲ್ ಗವಾಸ್ಕರ್ ಸಿಡಿಮಿಡಿಗೊಂಡಿದ್ದಾರೆ.
ಆತ ಅರ್ಷದೀಪ್ಗೆ ಗುರಿಯಿಟ್ಟು ಬಾಲ್ ಎಸೆಯುತ್ತಿದ್ದಾನೆ. ಅಲ್ಲ, ವಿಕೆಟ್ ಇರೋದು ಎಲ್ಲಿ, ಚೆಂಡು ಹಾಕ್ತಿರೋದು ಎಲ್ಲಿಗೆ ಎಂದು ಸಿಟ್ಟಿನಿಂದ ಪ್ರಶ್ನಿಸಿದರು. ಮತ್ತೊಂದೆಡೆ, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಂದು ತಂಡದ ಕ್ಯಾಪ್ಟನ್ ಓವರ್ಗಳು ಇನ್ನೂ ಇರುವಾಗಲೇ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿರುವುದು ಎಂಬುದು ಅಚ್ಚರಿಯ ಸಂಗತಿ. ಡಗ್ಔಟ್ನಲ್ಲಿ ನಿಂತು ಶ್ರೇಯಸ್ ಅಯ್ಯರ್ ಕೈಬೀಸಿ ಕರೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೈದರಾಬಾದ್ನ ಉಪ್ಪಾಲ್ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭಾರತವನ್ನು 24 ರನ್ಗಳಿಂದ ಮಣಿಸಿ ಇದೀಗ ಸರಣಿಯನ್ನು 2-2 ಅಂತರದಲ್ಲಿ ಸಮಬಲಗೊಳಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಕೇವಲ 3 ವಿಕೆಟ್ ನಷ್ಟಕ್ಕೆ 247 ರನ್ಗಳ ಬೃಹತ್ ಸ್ಕೋರ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ, ಪೈಪೋಟಿ ನೀಡುವಲ್ಲಿ ಸಂಪೂರ್ಣವಾಗಿ ಮುಗ್ಗರಿಸಿತು. ಸಂಜು ಸ್ಯಾಮ್ಸನ್ (56 ರನ್, 23 ಎಸೆತ), ತಿಲಕ್ ವರ್ಮಾ (43 ರನ್, 25 ಎಸೆತ) ಬಿಟ್ಟರೆ ಉಳಿದ್ಯಾವ ಬ್ಯಾಟರ್ ಕೂಡ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಈಗ ಕೊನೆಯ ಪಂದ್ಯ ಬಾಕಿ ಉಳಿದಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಯಾರು ರೋಚಕ ಜಯ ಸಾಧಿಸಿ, ಸರಣಿ ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).