ಜಸ್ಪ್ರೀತ್ ಬುಮ್ರಾ (ಎಡ), ಸುನಿಲ್ ಗವಾಸ್ಕರ್ (ಬಲ)
- ರೋಹಿತ್ ಶರ್ಮ ಆಗಮನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ಗೆ ಗೆಲುವು
- 7ನೇ ಸೋಲಿನೊಂದಿಗೆ ನಿರ್ಗಮನ ಬಾಗಿಲಿನ ಬಳಿ ಎಲ್‌ಎಸ್‌ಜಿ
- ವೇಗಿ ಜಸ್ಪ್ರೀತ್ ಬುಮ್ರಾ ಮಾಡಿದ ತಪ್ಪಿಗೆ ಸುನಿಲ್ ಗವಾಸ್ಕರ್ ಕಿಡಿ
ಮುಂಬೈ: ನಿನ್ನೆ (ಮೇ.04) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 19ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಎಲ್‌ಎಸ್‌ಜಿ ಎದುರು ಮುಂಬೈ ಇಂಡಿಯನ್ಸ್ ಭರ್ಜರಿ ಚೇಸಿಂಗ್ ಮೂಲಕ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ ಗೆದ್ದಿದ್ದೇ ಆದರೂ ವೇಗಿ ಜಸ್ಪ್ರೀತ್ ಬುಮ್ರಾ ಮಾಡಿದ ಅದೊಂದು ತಪ್ಪಿಗೆ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಸಿಟ್ಟಾಗಿದ್ದಾರೆ.
ಎಲ್‌ಎಸ್‌ಜಿ ನೀಡಿದ 229 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮ (84 ರನ್, 44 ಎಸೆತ, 6 ಬೌಂಡರಿ, 8 ಸಿಕ್ಸರ್) ಮತ್ತು ರಿಕೆಲ್‌ಟನ್ (83 ರನ್, 32 ಎಸೆತ, 6 ಬೌಂಡರಿ, 8 ಸಿಕ್ಸರ್) ಜತೆಗೂಡಿ ಪ್ರದರ್ಶಿಸಿದ ಭರ್ಜರಿ ಬ್ಯಾಟಿಂಗ್ ನೆರವಿನಿಂದ ತಂಡ ತವರಿನಂಗಣದಲ್ಲಿ ದಾಖಲೆಯ ಯಶಸ್ವಿ ಚೇಸಿಂಗ್ ನಡೆಸಿತು. ಈ ಮೂಲಕ ಲಖನೌ ಸೂಪರ್‌ಜೈಂಟ್ಸ್ ಎದುರು 6 ವಿಕೆಟ್ಗಳ ಗೆಲುವು ಕಂಡು ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ಎಂಬ ಪಟ್ಟದಿಂದ ಜಾರಿಕೊಂಡಿತು. ಮತ್ತೊಂದೆಡೆ, ಟೂರ್ನಿಯಲ್ಲಿ ಏಳನೇ ಸೋಲು ನೋಡಿದ ಪಂತ್ ಪಡೆ ಸದ್ಯ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿ ಉಳಿಯುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದೆ.
ಬುಮ್ರಾಗೆ ಕ್ಲಾಸ್!
ಎಲ್‌ಎಸ್‌ಜಿ ಇನ್ನಿಂಗ್ಸ್‌ನ 14ನೇ ಓವರ್‌ನಲ್ಲಿ, ಬುಮ್ರಾ ಅವರ ಎಸೆತದಲ್ಲಿ ಹಿಮ್ಮತ್ ಸಿಂಗ್ ಔಟ್ ಆದರು. ಆದರೆ, ಈ ವೇಳೆ ಅಂಪೈರ್ನಿಂದ ನೋ-ಬಾಲ್ ಸೈರನ್ ಕೇಳಿದಾಗ ಒಂದು ನಿಮಿಷ ಮುಂಬೈ ಪಡೆಗೆ ಶಾಕ್ ಆಯಿತು. ಬಹಮುಖ್ಯ ಸಮಯದಲ್ಲೇ ಹೀಗೆ ಮಾಡಬೇಕಾ? ಎಂಬ ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆಯನ್ನು ಸುನಿಲ್ ಗವಾಸ್ಕರ್ ಕೋಪದಿಂದಲೇ ಕೇಳಿದರು. ವಿಶ್ವದ ಬೆಸ್ಟ್ ಬೌಲರ್ನಿಂದ ಇಂತಹ ಮಿಸ್ಟೇಕ್ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.
ಪಂದ್ಯದ ವೇಳೆ ಕಾಮೆಂಟ್ರಿ ಮಾಡುತ್ತಿದ್ದ ಗವಾಸ್ಕರ್, ಇದನ್ನೆಲ್ಲ ಒಪ್ಪಿಕೊಳ್ಳುವ ಮಾತೇ ಇಲ್ಲ. ಅದರಲ್ಲೂ ಒಬ್ಬ ಪ್ರೊಫೆಶನಲ್ ಕ್ರಿಕೆಟಿಗನಿಂದ. ವೈಡ್ಸ್ ಬಂದರೆ ಓಕೆ. ನನಗೂ ಅರ್ಥವಾಗುತ್ತೆ. ಆದರೆ, ನೋ-ಬಾಲ್? ಖಂಡಿತ ನಾಟ್ ಓಕೆ ಎಂದು ಹೇಳಿದರು. ಈ ಸೀಸನ್ ಆರಂಭದಿಂದಲೂ ತಂಡದ ಪರ ಕಮಾಲ್ ಮಾಡುವಲ್ಲಿ ಮುಗ್ಗರಿಸುತ್ತಿರುವ ಬುಮ್ರಾ, 1 ವಿಕೆಟ್ ಬಿಟ್ಟರೆ ಹೆಚ್ಚೇನು ಮಾಡದಿರುವುದು ಸದ್ಯ ಪ್ರಶ್ನಿಸುವಂತಿದೆ,(ಏಜೆನ್ಸೀಸ್).