15ನೇ ವಯಸ್ಸಿಗೆ ದುಬಾರಿ ಕಾರಿನ ಒಡೆಯ! ವೈಭವ್​ ಅಪ್ರತಿಮ ಸಾಧನೆಗೆ ವರ್ಷದ ಕೊನೆಯಲ್ಲಿ ಸಿಕ್ಕಿದ ಗೌರವ | Vaibhav Sooryavanshi  
ಕ್ರಿಕೆಟ್

15ನೇ ವಯಸ್ಸಿಗೆ ದುಬಾರಿ ಕಾರುಗಳ ಒಡೆಯ! ವೈಭವ್​ ಅಪ್ರತಿಮ ಸಾಧನೆಗೆ ವರ್ಷದ ಕೊನೆಯಲ್ಲಿ ಸಿಕ್ಕಿದ ಗೌರವ | Vaibhav Sooryavanshi

Vaibhav Sooryavanshi: ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಇಡೀ ವಿಶ್ವದ ಗಮನ ಸೆಳೆದಿರುವ ಈ 15 ವರ್ಷದ ಸ್ಟಾರ್​ ಆಟಗಾರನಿಗೆ ಕೊನೆಗೂ ಕೊಟ್ಟ ಮಾತು ಈಡೇರಿದೆ.

ಬಿಹಾರ ಮೂಲದ ವೈಭವ್ ಸೂರ್ಯವಂಶಿ, ಈ ವರ್ಷದ ಐಪಿಎಲ್​ನಲ್ಲಿ ತೋರಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಯಾವ ಕ್ರಿಕೆಟ್​ ಪ್ರೇಮಿ ತಾನೇ ಮರೆಯಲು ಸಾಧ್ಯ. 'ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್' ಪ್ರಶಸ್ತಿ ಗೆದ್ದ ಸೂರ್ಯವಂಶಿಗೆ ಈ ಕಾರನ್ನು ಬಹುಮಾನವಾಗಿ ನೀಡಿದ ಐಪಿಎಲ್​, ವರ್ಷದ ಕೊನೆಯಲ್ಲಿ ಹೊಸ ಕಾರನ್ನು ಕೊನೆಗೂ ವೈಭವ್​ಗೆ ಹಸ್ತಾಂತರಿಸಿದೆ. ತಮ್ಮ ಕುಟುಂಬ ಸಮೇತ ಬ್ರ್ಯಾಂಡೆಡ್​ ಕಾರನ್ನು ಕೊಳ್ಳಲು ಸೂರ್ಯವಂಶಿ ಶೋರೂಮ್​ಗೆ ಹೋಗಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಇದೇ ಮೊದಲ ಕಾರಲ್ಲ

ಫೋಟೋಗಳಲ್ಲಿ ವೈಭವ್ ತನ್ನ ಪೋಷಕರು ಹಾಗೂ ಸಹೋದರರೊಂದಿಗೆ ಹಳದಿ ಬಣ್ಣದ ಟಾಟಾ ಸಿಯಾರಾ ಕಾರಿನ ಮುಂದೆ ಪೋಸ್ ನೀಡಿದ್ದಾರೆ. ಅಂದಹಾಗೆ, ವೈಭವ್ ಪಾಲಿಗೆ ಇದೇ ಮೊದಲ ಕಾರಲ್ಲ. 2025ರ ಐಪಿಎಲ್‌ನಲ್ಲಿ 'ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್' ಪ್ರಶಸ್ತಿ ಗೆದ್ದಿದ್ದಕ್ಕಾಗಿ ಈ ಹಿಂದೆ ಟಾಟಾ ಕರ್ವ್ ಇವಿ ಕಾರನ್ನೂ ಉಡುಗೊರೆಯಾಗಿ ಪಡೆದಿದ್ದರು. ಇದೀಗ ಮತ್ತೊಂದು ದುಬಾರಿ ಎಸ್‌ಯುವಿ ಯುವ ಸೆನ್ಸೇಷನ್​ ಕಾರುಗಳ ಕಲೆಕ್ಷನ್​ಗೆ ನೂತನ ಸೇರ್ಪಡೆಯಾಗಿದೆ.

ಇನ್ನು ಐಪಿಎಲ್ 2026ರಲ್ಲಿ ವೈಭವ್ ಬ್ಯಾಟಿಂಗ್ ಅಬ್ಬರವೇ ವಿಶೇಷವಾಗಿತ್ತು. 16 ಪಂದ್ಯಗಳಲ್ಲಿ ಬರೋಬ್ಬರಿ 776 ರನ್ ಗಳಿಸುವ ಮೂಲಕ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಆಗಿ ಕ್ರಿಕೆಟ್​ ಪ್ರೇಮಿಗಳ ಹುಬ್ಬೇರಿಸಿದರು. ಐದು ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿದ್ದಲ್ಲದೆ, 63 ಬೌಂಡರಿ ಮತ್ತು 72 ಸಿಕ್ಸರ್‌ಗಳನ್ನು ಬಾರಿಸಿ ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನವಾದರು. ಈ ಅದ್ಭುತ ಪ್ರದರ್ಶನದ ಫಲವಾಗಿ ಆರೆಂಜ್ ಕ್ಯಾಪ್ ಕೂಡ ವೈಭವ್​ ಮುಡಿಗೇರಿತು.

2025ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಟಿ20 ಲೀಗ್​ಗೆ ಪದಾರ್ಪಣೆ ಮಾಡಿದ ವೈಭವ್, ಬಳಿಕ ತಮ್ಮ ಅಸಾಧಾರಣ ಪ್ರತಿಭೆಯ ಮೂಲಕ ಭಾರತ ಅಂತಾರಾಷ್ಟ್ರೀಯ ಹಿರಿಯ ತಂಡಕ್ಕೂ ಆಯ್ಕೆಯಾದರು. ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನೂ ಆಡಿದರು. ಈವರೆಗೆ 10 ಟಿ20 ಪಂದ್ಯಗಳಲ್ಲಿ 295 ರನ್ ಗಳಿಸಿದ್ದು, ಎರಡು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ 45 ರನ್ ಸಿಡಿಸಿ ಗಮನ ಸೆಳೆದರು. ಆದರೆ, ಹೆಚ್ಚಿನ ಅವಕಾಶಗಳು ಸಿಗದೆ, ಬೆಂಚ್​ನಲ್ಲಿ ಕೂರುವಂತಾಯಿತು.

ಈಗ ಮತ್ತೊಂದು ಮಹತ್ವದ ಜವಾಬ್ದಾರಿ ವೈಭವ್ ಹೆಗಲೇರಿದೆ. ಹಿರಿಯರ ಬಿಹಾರ ಪುರುಷರ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾಗಿರುವ ಸೂರ್ಯವಂಶಿ​, 2026ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲೆರೆಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಒಟ್ಟಾರೆ, ಅತ್ಯಂತ ಕಿರಿಯ ವಯಸ್ಸಿನಲ್ಲೇ ಕ್ರಿಕೆಟ್‌ನಲ್ಲಿ ಅಪಾರ ಸಾಧನೆ ಮಾಡುತ್ತಿರುವ ವೈಭವ್ ಸೂರ್ಯವಂಶಿ, ಮೈದಾನದ ಹೊರಗೂ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿರುವುದು ವಿಶೇಷ,(ಏಜೆನ್ಸೀಸ್).