ಐಸಿಸಿ ಟಿ20 ವಿಶ್ವಕಪ್​ ವಿವಾದ  
ಕ್ರಿಕೆಟ್

ಮೂಗು ತೂರಿಸಲು ಸಾಧ್ಯವಿಲ್ಲ! ಪಾಕ್​, ಬಾಂಗ್ಲಾ ಮತ್ತು ಭಾರತ ನಡುವಿನ ವಿವಾದಕ್ಕೆ ಶ್ರೀಲಂಕಾ ಜಾಣ್ಮೆಯ ಉತ್ತರ

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾದೇಶ ಮತ್ತು ಐಸಿಸಿ ನಡುವೆ ಟಿ20 ವಿಶ್ವಕಪ್​ ಪಂದ್ಯಗಳ ಸ್ಥಳಾಂತರ ವಿವಾದ
  • ಟಿ20 ವಿಶ್ವಕಪ್ ಟೂರ್ನಿ ಕುರಿತು ಶ್ರೀಲಂಕಾ ಕಾಮೆಂಟ್ಸ್​
  • ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ವಿವಾದಗಳಲ್ಲಿ ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ
ಕೊಲೊಂಬೊ: ಪ್ರಸ್ತುತ, ಫೆ.07ರಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್​ ಟೂರ್ನಿ ಬಗ್ಗೆ ಕ್ರಿಕೆಟ್​ ಪ್ರಿಯರಲ್ಲಿ ತೀರ ಕುತೂಹಲ ಮೂಡಿದ್ದೇ ಆದರೂ ಅತ್ತ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಭಾರತ ದೇಶಗಳ ನಡುವಿನ ಭಾರೀ ಗೊಂದಲ, ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಶ್ರೀಲಂಕಾ ಮೌನ ಮುರಿದಿದೆ.   
2026ರ ಟಿ20 ವಿಶ್ವಕಪ್ ಕುರಿತು ಬಾಂಗ್ಲಾದೇಶ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಡುವಿನ ವಿವಾದ ಮೂರು ವಾರಗಳಿಗೂ ಹೆಚ್ಚು ಕಾಲ ಮುಂದುವರೆದಿದ್ದು, ಬಾಂಗ್ಲಾ ಕ್ರಿಕೆಟ್​ ಸಲ್ಲಿಸಿದ್ದ ಮನವಿಯನ್ನು ಕಡೆಗೂ ಐಸಿಸಿ ತಿರಸ್ಕರಿಸುವ ಮೂಲಕ ಅವರನ್ನು ವಿಶ್ವಕಪ್​ ಟೂರ್ನಿಯಿಂದ ಅಂತಿಮವಾಗಿ ಕಿತ್ತುಬಿಸಾಡಿತು. ಅವರ ಸ್ಥಾನಕ್ಕೆ ಸ್ಕಾಟ್​ಲ್ಯಾಂಡ್​ಗೆ ಅವಕಾಶ ನೀಡಿತು. ಇದು ಬಿಸಿಬಿಗೆ ಅಸಮಾಧಾನಕ್ಕೆ ಕಾರಣವಾಗಿದ್ದು, ಪಾಕ್​ ಮಧ್ಯಪ್ರವೇಶಕ್ಕೆ ಪರೋಕ್ಷವಾಗಿ ಕಾರಣವಾಯಿತು.    

ಜಾಣ್ಮೆಯ ಉತ್ತರ...

ಈ ಬೆಳವಣಿಗೆಗಳೊಂದಿಗೆ, ಬಾಂಗ್ಲಾದೇಶವನ್ನು ಬೆಂಬಲಿಸಿ ಪಾಕಿಸ್ತಾನ ಕೂಡ ವಿಶ್ವಕಪ್​ ಅನ್ನು ಬಹಿಷ್ಕರಿಸುವ ಸಾಧ್ಯತೆಯಿದೆ ಎಂಬ ಸುದ್ದಿಗಳು ಸದ್ಯ ಜಾಲತಾಣಗಳನ್ನು ಸುತ್ತುವರೆದಿದೆ. ಇದೆಲ್ಲದರ ನಡುವೆ, ನರಿಬುದ್ಧಿ ತೋರುವ ಪಾಕ್​, ಫೆ.15ರಂದು ನಡೆಯಲಿರುವ ಭಾರತ ವಿರುದ್ಧದ ಪಂದ್ಯವನ್ನು ಆಡದಿರಲು ತೆರೆಮರೆಯಲ್ಲಿ ಪ್ಲ್ಯಾನ್​ ಮಾಡುತ್ತಿರುವುದಾಗಿಯೂ ವರದಿಯಾಗಿದೆ. ಆದರೀದು, ಎಷ್ಟರ ಮಟ್ಟಿಗೆ ಸತ್ಯ ಎಂಬುದು ಇಂದು (ಜ.30) ಮತ್ತು ಸೋಮವಾರ ಸ್ಪಷ್ಟವಾಗಲಿದೆ. 

ಸ್ನೇಹಪರ ರಾಷ್ಟ್ರಗಳೇ

ಶ್ರೀಲಂಕಾ ಪ್ರಾದೇಶಿಕ ವಿವಾದಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಕಾರ್ಯದರ್ಶಿ ಬಂಡುಲಾ ದಿಸಾನಾಯಕೆ ಹೇಳಿದ್ದಾರೆ. "ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಈ ವಿವಾದಗಳಲ್ಲಿ ನಾವು ತಟಸ್ಥರಾಗಿ ಉಳಿಯುತ್ತೇವೆ ವಿನಃ ಪ್ರತಿಕ್ರಿಯಿಸುವುದಿಲ್ಲ. ಈ ಎಲ್ಲಾ ದೇಶಗಳು ನಮ್ಮ ಸ್ನೇಹಪರ ರಾಷ್ಟ್ರಗಳೇ. ಅಗತ್ಯವಿದ್ದರೆ, ಭವಿಷ್ಯದಲ್ಲಿ ಯಾವುದೇ ದೇಶಕ್ಕಾಗಿ ಪಂದ್ಯಗಳನ್ನು ಆಯೋಜಿಸಲು ನಾವು ಸಿದ್ಧವಿದ್ದೇವೆ" ಎಂದು ಹೇಳುವ ಮೂಲಕ ವಿವಾದದಿಂದ ಜಾರಿಕೊಂಡಿರುವುದು ಜಾಣತನಕ್ಕೆ ಸಾಕ್ಷಿ ಎಂದೇ ಹೇಳಬಹುದು,(ಏಜೆನ್ಸೀಸ್).