- 2026ರ ಟಿ20 ವಿಶ್ವಕಪ್‌ಗೂ ಮುನ್ನ ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಪ್ರಮುಖ ನಿರ್ಧಾರ
- ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿಕ್ರಮ್ ರಾಥೋಡ್ಗೆ ಶ್ರೀಲಂಕಾದ ಬ್ಯಾಟಿಂಗ್ ಕೋಚ್ ಸ್ಥಾನ
- ಸಲಹಾ ಆಧಾರದ ಮೇರೆಗೆ ನೇಮಕ
ಕೊಲೊಂಬೊ: ಫೆಬ್ರವರಿಯಿಂದ ಆರಂಭವಾಗಲಿರುವ 2026ರ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಮುಖ ನಿರ್ಧಾರವನ್ನೇ ಕೈಗೊಂಡಿದೆ. ಭಾರತದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ರನ್ನು ಸಲಹಾ ಆಧಾರದ ಮೇರೆಗೆ ಶ್ರೀಲಂಕಾ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿಕೊಂಡಿದೆ.
ರಾಥೋಡ್ ಇದೇ ಜ.18ರಂದು ಶ್ರೀಲಂಕಾ ತಂಡವನ್ನು ಸೇರಲಿದ್ದಾರೆ. ಅವರು ಶ್ರೀಲಂಕಾ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದೇ ಆದರೂ ಮಾರ್ಚ್ 10 ರವರೆಗೆ ಮಾತ್ರ ತಂಡದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ವಿಕ್ರಮ್ ರಾಥೋಡ್ ಸೆಪ್ಟೆಂಬರ್ 2019ರಿಂದ ಜುಲೈ 2024 ರವರೆಗೆ ಟೀಮ್ ಇಂಡಿಯಾ ಪುರುಷರ ತಂಡದ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ನ ಸಹಾಯಕ ಕೋಚ್ ಆಗಿದ್ದಾರೆ.
ಶ್ರೀಲಂಕಾ ತಂಡವು ಈಗಾಗಲೇ ಟೀಮ್ ಇಂಡಿಯಾದ ಮಾಜಿ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರನ್ನು ತಮ್ಮ ತಂಡದ ಫೀಲ್ಡಿಂಗ್ ಕೋಚ್ ಆಗಿ ನೇಮಕ ಮಾಡಿಕೊಂಡಿದೆ. ಟಿ20 ವಿಶ್ವಕಪ್ ಟೂರ್ನಿ ಇದೇ ಫೆಬ್ರವರಿ 7ರಿಂದ ಮಾರ್ಚ್ 8 ರವರೆಗೆ ನಡೆಯಲಿದೆ. ಭಾರತ ಮತ್ತು ಶ್ರೀಲಂಕಾ ಈ ಮೆಗಾ ಟೂರ್ನಮೆಂಟ್ ಅನ್ನು ಜಂಟಿಯಾಗಿ ಆಯೋಜಿಸಿವೆ.
ಇದೆಲ್ಲದರ ಮಧ್ಯೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೂ ಹೊಸ ತಕರಾರು ತೆಗೆದಿದ್ದು, ಭಾರತದೊಂದಿಗಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ತಮ್ಮ ಟಿ20 ಪಂದ್ಯಗಳನ್ನು ಭಾರತದಲ್ಲಿ ಆಡುವುದಿಲ್ಲ ಎಂದು ಹೇಳಿದೆ. ಈ ವಿಚಾರ ಐಸಿಸಿ ಅಂಗಳದಲ್ಲಿದ್ದು, ಮುಂದೇನು ಕಥೆ? ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).