ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್
- ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ ಆರ್‌ಆರ್‌ಗೆ ಆಘಾತ
- ಸನ್‌ರೈಸರ್ಸ್ ಎದುರು 57 ರನ್ಗಳ ಹೀನಾಯ ಸೋಲು
- ಸೋಲಿನ ಜವಾಬ್ದಾರಿ ಹೊತ್ತುಕೊಂಡ ನಾಯಕ ರಿಯಾನ್ ಪರಾಗ್
SRH vs RR: ಸತತ ಗೆಲುವುಗಳ ಮೂಲಕ ಭರ್ಜರಿ ಪ್ರದರ್ಶನ ನೀಡುತ್ತಿದ್ದ ರಾಜಸ್ಥಾನ್ ರಾಯಲ್ಸ್ ಸೋಮವಾರ (ಏ.13) ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ 57 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಈ ಮೂಲಕ ದೊಡ್ಡ ಹಿನ್ನಡೆ ಅನುಭವಿಸಿತು. ಬೌಲಿಂಗ್ನಲ್ಲಿಯೂ ಕಮಾಲ್ ಮಾಡದ ಆರ್ಆರ್, ಬ್ಯಾಟಿಂಗ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು ಸೋಲಿಗೆ ಬಹುಮುಖ್ಯ ಕಾರಣವಾಯಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್ ಪರ ಇಶಾನ್ ಕಿಶನ್ (91 ರನ್, 44 ಎಸೆತ, 8 ಬೌಂಡರಿ, 6 ಸಿಕ್ಸರ್) ವಿನಾಶಕಾರಿ ಇನ್ನಿಂಗ್ಸ್ ಆಡಿದರು. ಅವರ ನಂತರದಲ್ಲಿ, ಹೆನ್ರಿಕ್ ಕ್ಲಾಸೆನ್ (40, 26 ಎಸೆತ, 1 ಬೌಂಡರಿ, 3 ಸಿಕ್ಸರ್) ಮತ್ತು ನಿತೀಶ್ ಕುಮಾರ್ ರೆಡ್ಡಿ (26 , 13 ಎಸೆತ, 4 ಸಿಕ್ಸರ್) ಬಾರಿಸುವ ಮೂಲಕ ತಂಡದ ಒಟ್ಟು ಮೊತ್ತವನ್ನು 200ರ ಗಡಿದಾಟಿಸಿದರು. 20 ಓವರ್‌ಗಳಲ್ಲಿ ಸನ್‌ರೈಸರ್ಸ್ ಪಡೆ 6 ವಿಕೆಟ್‌ಗಳ ನಷ್ಟಕ್ಕೆ 216 ರನ್ ಗಳಿಸಿತು. ಬೌಲಿಂಗ್ನಲ್ಲಿ ರಾಜಸ್ಥಾನ ಪರ ಜೋಫ್ರಾ ಆರ್ಚರ್ ಎರಡು ವಿಕೆಟ್‌ಗಳನ್ನು ಪಡೆದರೆ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ ಮತ್ತು ರಿಯಾನ್ ಪರಾಗ್ ತಲಾ ಒಂದು ವಿಕೆಟ್ ಪಡೆದರು.
217 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ವೈಭವ್ ಸೂರ್ಯವಂಶಿ ಮೊದಲ ಬಾಲ್ಗೆ ಡಕ್ಔಟ್ ಆದರೆ, ಧ್ರುವ್ ಜುರೆಲ್ ಮತ್ತು ಪ್ರಿಟೋರಿಯಸ್ ಕೂಡ ಅವರ ಹಾದಿಯನ್ನೇ ಅನುಸರಿಸಿದರು. ಯಶಸ್ವಿ ಜೈಸ್ವಾಲ್ (1) ಮತ್ತು ನಾಯಕ ರಿಯಾನ್ ಪರಾಗ್ (4) ಒಂದಂಕಿಯ ರನ್ ಗಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರಶ್ನಿಸುವಂತೆ ಮಾಡಿದರು. 19 ಓವರ್‌ಗಳಲ್ಲಿ 159 ರನ್‌ಗೆ ಆಲೌಟ್ ಆಯಿತು. ಒಂದು ಹಂತದಲ್ಲಿ, ಕೇವಲ 9 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಆರ್‌ಆರ್‌ಗೆ ಡೊನೊವನ್ ಫೆರೇರಾ (69 ರನ್, 44 ಎಸೆತ 7 ಬೌಂಡರಿ, 3 ಸಿಕ್ಸರ್) ಮತ್ತು ರವೀಂದ್ರ ಜಡೇಜಾ (45 ರನ್, 32 ಎಸೆತ, 5 ಬೌಂಡರಿ) ಬಾರಿಸಿ, ಹೀನಾಯ ಸೋಲನ್ನು ತಪ್ಪಿಸಲು ಹೋರಾಟ ಮಾಡಿದರು. ಆದರೆ, ಅವರಿಬ್ಬರಿಂದ ಇದು ಸಾಧ್ಯವಾಗಲಿಲ್ಲ.
ಟಾಸ್ನಲ್ಲಿ ತಪ್ಪು ಮಾಡಿದೆ...
ಪಂದ್ಯ ಸೋತ ಬೆನ್ನಲ್ಲೇ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್, ಈ ಸೋಲು ತುಂಬಾ ಬೇಸರ ಮೂಡಿಸಿದೆ. ನಮ್ಮ ವಿರುದ್ಧದ ಸಂಪೂರ್ಣ ಗೆಲುವು ಖಂಡಿತವಾಗಿಯೂ ಸನ್‌ರೈಸರ್ಸ್ ಹೈದರಾಬಾದ್ ಬೌಲರ್‌ಗಳಿಗೆ ಸಲ್ಲುತ್ತದೆ. ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕರವಾಗಿತ್ತು. ನಾವು ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಳ್ಳುತ್ತಿರುವುದನ್ನು ನೋಡಿದಾಗ, ಟಾಸ್ ಗೆದ್ದಾಗ ನಾನು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು ಅನಿಸಿತು ಎಂದರು.
ನಾವೇ ಮೊದಲು ಬ್ಯಾಟಿಂಗ್ ಮಾಡಿ, ಆ ನಂತರ ಬೌಲಿಂಗ್ ಮಾಡಬೇಕಿತ್ತು. ಇದೆಲ್ಲವೂ ಈಗ ಆಗೋಗಿದೆ ಬಿಡಿ. ನಮ್ಮ ತಂಡದವರು ಇನ್ನೂ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕು ಎಂದರು. ಸನ್‌ರೈಸರ್ಸ್ ಹೈದರಾಬಾದ್ ಪರ ಬೌಲರ್ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ಆದಾಗ್ಯೂ, ಮೊದಲೆರೆಡು ಓವರ್‌ಗಳಲ್ಲಿ ವಿಕೆಟ್ ಕಬಳಿಸಿದ ಆ ಇಬ್ಬರನ್ನು ನಾನು ಹೆಚ್ಚಾಗಿ ನೋಡಿಲ್ಲ ಎಂದು ಹೇಳಿದರು,(ಏಜೆನ್ಸೀಸ್).