SRH vs LSG ಪಂದ್ಯದಲ್ಲಿ ಆದ ಘಟನೆ  
ಕ್ರಿಕೆಟ್

ಇಂಥವರನ್ನು ಮೊದಲು ಬ್ಯಾನ್​ ಮಾಡಿ! ಆವೇಶ್​ ಖಾನ್ ಮಾಡಿದ ಬಿಗ್ ಮಿಸ್ಟೇಕ್​ಗೆ ಕ್ರಿಕೆಟ್​ ಪ್ರೇಮಿಗಳ ಆವೇಶ

SRH vs LSG: ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಮೆಂಟ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ (LSG) ತನ್ನ ಮೊದಲ ಗೆಲುವು ದಾಖಲಿಸಿದೆ. ಆರಂಭಿಕ ಪಂದ್ಯದಲ್ಲಿ ಸೋಲುಂಡಿದ್ದ ಲಖನೌ, ನಿನ್ನೆ (ಏಪ್ರಿಲ್​ 05) ಹೈದರಾಬಾದ್​ನ ಉಪ್ಪಲ್‌ ಕ್ರೀಡಾಂಗಣದಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಿತು. ಇದು ರಿಷಭ್ ಪಂತ್​ ತಂಡದ ಮಾಲೀಕರಿಗೆ ಭಾರೀ ಖುಷಿ ನೀಡಿತು. ಮತ್ತೊಂದೆಡೆ, ಆವೇಶ್​ ಖಾನ್​ ಮಾಡಿದ ಮಿಸ್ಟೇಕ್​ವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್​ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.
ಸನ್​ರೈಸರ್ಸ್​ ಎದುರು ಐದು ವಿಕೆಟ್​ಗಳ ರೋಚಕ ಜಯ ಸಾಧಿಸಿದ ಲಖನೌ ಸೂಪರ್​ ಜೈಂಟ್ಸ್​ ಪರ ನಾಯಕ ಪಂತ್ ಅಮೋಘ ಇನ್ನಿಂಗ್ಸ್ ಆಡಿದರು. 68 ರನ್​ಗಳನ್ನು ಸಿಡಿಸುವ ಮೂಲಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದಿದ್ದು ಎಲ್​ಎಸ್​ಜಿ ಕ್ಯಾಪ್ಟನ್​. ಎಸ್​ಆರ್​ಎಚ್​ ನೀಡಿದ ಗುರಿಯನ್ನು ಬೆನ್ನತ್ತಿದ ಪಂತ್​, ಫಿನಿಶಿಂಗ್ ಶಾಟ್​ ಅನ್ನು ಬೌಂಡರಿ ಲೈನ್​ನತ್ತ ಬಾರಿಸಿದರು. ಈ ಬಾಲ್​ ಬೌಂಡರಿಯನ್ನು ಮುಟ್ಟುವ ಮೊದಲೇ ತಂಡದ ಆವೇಶ್​ ಖಾನ್​, ತಮ್ಮ ಕೈಯಲ್ಲಿದ್ದ ಬ್ಯಾಟ್​ನಿಂದ ಅದನ್ನು ಹೊಡೆದರು. ಇದೇ ಅನೇಕರ ಸಿಡಿನುಡಿಗೆ ಕಾರಣವಾಗಿದೆ.
ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಅನೇಕರು, ಐಸಿಸಿ ನಿಯಮಗಳನ್ನು ಪ್ರಸ್ತಾಪಿಸಿದ್ದಾರೆ. ಬಾಲ್​ ಬೌಂಡರಿ ಲೈನ್​ ಮುಟ್ಟುವ ಮುನ್ನ ಬ್ಯಾಟ್​ನಿಂದ ಹೊಡೆಯುವುದು ಅಥವಾ ತಡೆಯುವುದು ಎಷ್ಟು ಸರಿ? ಇದಕ್ಕೆ ಯಾಕೆ ಯಾರೊಬ್ಬರು ಪ್ರತಿಕ್ರಿಯಿಸಲಿಲ್ಲ? ಆನ್​ಫೀಲ್ಡ್​ ಅಂಪೈರ್​ಗಳು ಮಧ್ಯಪ್ರವೇಶಿಸದೆ ಸುಮ್ಮನೆ ಕುಳಿತಿದ್ದೇಕೆ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.
ಅನೇಕರು, ಎಲ್​ಎಸ್​ಜಿ ಆಟಗಾರ ಆವೇಶ್​ ಖಾನ್​ಗೆ ದಂಡ ವಿಧಿಸಬೇಕು ಮತ್ತು ಇತರರಿಗೂ ಎಚ್ಚರಿಕೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕೆಲವರು, ಐಸಿಸಿ ಕಾನೂನು 20.1 (ಡೆಡ್ ಬಾಲ್) ಮತ್ತು ಕಾನೂನು 41 (ಅನ್ಯಾಯದ ಆಟ) ಅನ್ನು ಉಲ್ಲೇಖಿಸಿದ್ದಾರೆ. ರೂಲ್ಸ್​ ಅನ್ವಯಿಸಿದ್ದರೆ, ಎಲ್​ಎಸ್​ಜಿ ತಂಡಕ್ಕೆ ರನ್​ಗಳ ಅಗತ್ಯತೆ ಎದುರಾಗುತ್ತಿತ್ತು ಎಂದೆಲ್ಲ ಕಮೆಂಟ್​ ಮಾಡಿ ತಿಳಿಸಿದ್ದಾರೆ,(ಏಜೆನ್ಸೀಸ್).