SRHvsKKR  
ಕ್ರಿಕೆಟ್

SRH vs KKR: ಅಭಿಷೇಕ್, ಕ್ಲಾಸೆನ್ ಬ್ಯಾಟಿಂಗ್ ಅಬ್ಬರಕ್ಕೆ ಕೋಲ್ಕತ್ತಾ ತತ್ತರ; ಕೆಕೆಆರ್ ಗೆಲ್ಲಲು ಬೇಕು 227 ರನ್!

ಕೋಲ್ಕತ್ತಾ: ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಬ್ಯಾಟರ್‌ಗಳು ಅಕ್ಷರಶಃ ಅಬ್ಬರಿಸಿದ್ದಾರೆ. ಹೆನ್ರಿಚ್ ಕ್ಲಾಸೆನ್ ಅವರ ಸಿಡಿಲಬ್ಬರದ ಅರ್ಧಶತಕ ಮತ್ತು ಅಭಿಷೇಕ್ ಶರ್ಮಾ ಅವರ ಸಮಯೋಚಿತ ಆಟದ ನೆರವಿನಿಂದ ಹೈದರಾಬಾದ್ ನಿಗದಿತ ಓವರ್‌ಗಳಲ್ಲಿ 226 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಎಚ್‌ಗೆ ಟ್ರಾವಿಸ್ ಹೆಡ್ (46 ರನ್, 21 ಎಸೆತ) ಮತ್ತು ಅಭಿಷೇಕ್ ಶರ್ಮಾ (48 ರನ್) ಬಿರುಸಿನ ಆರಂಭ ನೀಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡು 118 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕ್ರೀಸ್‌ಗಿಳಿದ ಹೆನ್ರಿಚ್ ಕ್ಲಾಸೆನ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಕೆಕೆಆರ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕ್ಲಾಸೆನ್ ಅವರ ಸಿಕ್ಸರ್‌ಗಳ ಸುರಿಮಳೆ ಹೈದರಾಬಾದ್ ಮೊತ್ತವನ್ನು 220ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿತು.

ಮುಜರಬಾನಿ ಎರಡು ವಿಕೆಟ್ ಕಿತ್ತು ಮಿಂಚು

ಕೋಲ್ಕತ್ತಾ ಪರ ಬ್ಲೆಸಿಂಗ್ ಮುಜರಬಾನಿ ಒಂದೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರ ವಿಕೆಟ್ ಕಿತ್ತು ಶಾಕ್ ನೀಡಿದರು. ಇನ್ನು ಹೈದರಾಬಾದ್ ತಂಡದಲ್ಲಿ ಹರ್ಷಲ್ ಪಟೇಲ್ ಬದಲಿಗೆ ಶಿವಂಗ್ ಕುಮಾರ್ ಅವರಿಗೆ ಅವಕಾಶ ನೀಡಲಾಗಿದೆ. ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್ ತಂಡ ಈಗ ಈ ಬೃಹತ್ ಮೊತ್ತವನ್ನು ಬೆನ್ನಟ್ಟಬೇಕಿದೆ,(ಏಜೆನ್ಸೀಸ್).