ಐಪಿಎಲ್​ನಲ್ಲಿ ಸಿಕ್ಸರ್​-ಬೌಂಡರಿ ಆರ್ಭಟ ಸಮರ್ಥಿಸಿದ ಮುರಳೀಧರನ್ 
ಕ್ರಿಕೆಟ್

ಐಪಿಎಲ್​ನಲ್ಲಿ ಸಿಕ್ಸರ್​-ಬೌಂಡರಿ ಆರ್ಭಟ ಸಮರ್ಥಿಸಿದ ಮುರಳೀಧರನ್​! ಹೀಗಿದೆ ಕಾರಣ...

ಮುಂಬೈ: ಐಪಿಎಲ್​ ಟೂರ್ನಿಯ ಬ್ಯಾಟಿಂಗ್​ ಸ್ನೇಹಿ ಪಿಚ್​ಗಳಲ್ಲಿ ಸಿಕ್ಸರ್​-ಬೌಂಡರಿಗಳ ಮಳೆ ಹರಿಯುತ್ತಿರುವುದನ್ನು ಶ್ರೀಲಂಕಾದ ಸ್ಪಿನ್​ ದಿಗ್ಗಜ ಮುತ್ತಯ್ಯ ಮುರಳೀಧರನ್​ (Muttiah Muralitharan) ಸಮರ್ಥಿಸಿಕೊಂಡಿದ್ದು, ಸ್ಪರ್ಧಾತ್ಮಕ ಪಿಚ್​ ನಿರ್ಮಿಸಿದರೆ ಪ್ರೇಕ್ಷಕರು ಬೇಸರವಾಗಬಹುದು ಎಂದಿದ್ದಾರೆ.

"ಐಪಿಎಲ್​ ಒಂದು ಮನರಂಜನೆಯ ಟೂರ್ನಿಯಾಗಿದೆ. ಇದೊಂದು ಉದ್ಯಮವಾಗಿದೆ. ಇಲ್ಲಿ ಕ್ರಿಕೆಟರ್​ ಆಗಿ ಬೆಳವಣಿಗೆ ನಿರೀಸುವಂತಿಲ್ಲ. ಟಿ20 ಕ್ರಿಕೆಟ್​ನ ಹಿಂಬಾಲಕರೂ ಸಿಕ್ಸರ್​-ಬೌಂಡರಿಗಳ ಪ್ರವಾಹವನ್ನು ಬಯಸುತ್ತಾರೆ. ಇದರಿಂದಾಗಿಯೇ ಈ ಟೂರ್ನಿಯಲ್ಲಿ ಓರ್ವ ಹೆಚ್ಚುವರಿ ಆಟಗಾರನಿಗೂ (ಇಂಪ್ಯಾಕ್ಟ್​ ಪ್ಲೇಯರ್​) ಆಡುವ ಅವಕಾಶ ಕಲ್ಪಿಸಲಾಗಿದೆ. ಇದು ತಂಡಗಳು ಕನಿಷ್ಠ ಮೊತ್ತಗಳಿಗೆ ಕುಸಿಯದಂತೆ ನೋಡಿಕೊಳ್ಳುತ್ತದೆ' ಎಂದು ಮುರಳೀಧರನ್​ ಹೇಳಿದ್ದಾರೆ.

ಅವರೊಬ್ಬ ಬೌಲರ್​ ಆಗಿದ್ದು, ಐಪಿಎಲ್​ನಲ್ಲಿ ಬ್ಯಾಟರ್​ಗಳ ಅಬ್ಬರವನ್ನು ಸಮರ್ಥಿಸಿರುವುದು ಹೆಚ್ಚಿನವರಿಗೆ ಅಚ್ಚರಿ ಮೂಡಿಸಿದೆ. ಇದೇ ವೇಳೆ ಅವರು, "ಐಪಿಎಲ್​ನಲ್ಲಿ ಸ್ಪಿನ್ನರ್​ಗಳು ಚೆಂಡನ್ನು ತಿರುಗಿಸಲು ಪ್ರಯತ್ನಿಸುತ್ತಿಲ್ಲ. ಸಣ್ಣ ವಯಸ್ಸಿನಿಂದಲೇ ಇದರ ಅಭ್ಯಾಸವಿದ್ದರಷ್ಟೇ ಸಾಧ್ಯ. ಟೂರ್ನಿಯ ನಡುವೆ ಸ್ಪಿನ್​ ಮಾಡಬೇಕೆಂದರೆ ಆಗದು. ಹೀಗಾಗಿ ಐಪಿಎಲ್​ನಲ್ಲಿ ಸ್ಪಿನ್ನರ್​ಗಳ ಎದುರು ಆಡುವುದೆಂದರೆ, ಥ್ರೋಡೌನ್​ ಸ್ಪೆಷಲಿಸ್ಟ್​ಗಳ ಎದುರು ಅಭ್ಯಾಸ ಮಾಡಿದಂತಾಗುತ್ತಿದೆ' ಎಂದಿದ್ದಾರೆ.