ಎಸ್. ಶ್ರೀಶಾಂತ್, ಗೌತಮ್ ಗಂಭೀರ್
- ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ಧ ಶ್ರೀಶಾಂತ್ ಕಿಡಿ
- ಫಿಕ್ಸರ್ ಮತ್ತು ದೇಶದ್ರೋಹಿ ಎಂದು ಕರೆದಿದ್ದ ಗಂಭೀರ್
Sreesanth: ಟೀಮ್ ಇಂಡಿಯಾ ಮಾಜಿ ವೇಗಿ ಎಸ್. ಶ್ರೀಶಾಂತ್, ತಮ್ಮ ಸಹ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರೊಟ್ಟಿಗಿನ ಹಳೆಯ ವಿವಾದವನ್ನು ಇಂದಿಗೂ ಕ್ರಿಕೆಟ್ ಪ್ರೇಮಿಗಳಿಗೆ ಪದೇ ಪದೇ ನೆನಪಿಸುತ್ತಿರುವುದು ಸದ್ಯ ಮುಗಿಯದ ಅಧ್ಯಾಯ ಎನ್ನುವಂತೆ ಮಾಡಿದೆ. ಇತ್ತೀಚೆಗಷ್ಟೇ, ಸಂದರ್ಶನವೊಂದರಲ್ಲಿ ಬಜ್ಜಿಗೆ ನೇರ ಸವಾಲು ಹಾಕಿದ ಶ್ರೀಶಾಂತ್, ಅಲ್ಲೆಲ್ಲೋ ಮಾತಾಡೋದು ಬೇಡ. ನೇರವಾಗಿ ಮೈದಾನಕ್ಕೆ ಬನ್ನಿ, ಫೇಸ್ ಟು ಫೇಸ್ ಇಳಿಯೋಣ ಎಂದು ಓಪನ್ ಚಾಲೆಂಜ್ ಹಾಕಿದರು. ಇದಕ್ಕೆ ಇನ್ನೂ ಹರ್ಭಜನ್ರಿಂದ ಯಾವುದೇ ಉತ್ತರ ಬಂದಿಲ್ಲ. ಈ ಮಧ್ಯೆಯೇ, ಹೆಡ್ ಕೋಚ್ ಗೌತಮ್ ಗಂಭೀರ್ ಹೊರಿಸಿದ್ದ ಆರೋಪಕ್ಕೆ ಕಿಡಿಕಾರಿದ್ದಾರೆ.
2023ರ ಡಿಸೆಂಬರ್ಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್ಸಿ) ಪಂದ್ಯದ ಸಂದರ್ಭದಲ್ಲಿ ಇಬ್ಬರ ನಡುವಿನ ಬಿಸಿ ವಾಗ್ವಾದ ಆ ಸಮಯದಲ್ಲಿ ಕ್ರಿಕೆಟ್ ಲೋಕದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಯಿತು. 'ದಿ ಲಲ್ಲಂಟಾಪ್' ಸಂದರ್ಶನದಲ್ಲಿ, ಗಂಭೀರ್ ನಡೆದುಕೊಂಡ ರೀತಿಯನ್ನು, ಆಡಿದ ಮಾತುಗಳನ್ನು ನೆನಪಿಸಿಕೊಂಡ ಶ್ರೀಶಾಂತ್, ನನ್ನನ್ನು ಒಬ್ಬ ಫಿಕ್ಸರ್ ಮತ್ತು ದೇಶದ್ರೋಹಿ ಎಂದು ಕರೆದಿದ್ದರು. ಜೊತೆಗೆ F* ಪದವನ್ನು ಬಳಸಲು ಮುಂದಾದರು. ಆ ಲೀಗ್ನ ಪಂದ್ಯದಲ್ಲಿ ನನ್ನ ಮತ್ತು ಗಂಭೀರ್ ನಡುವೆ ಒಂದು ಬೌನ್ಸರ್ ಎಸೆದ ಕಾರಣಕ್ಕೆ ಜಗಳ ಶುರುವಾಯಿತು. ಆಗ ಎಫ್ ಪದವನ್ನು ಹೇಳಲು ಮುಂದಾದ ಅವರು, ಅದರ ಬದಲಿಗೆ ತಕ್ಷಣವೇ ಫಿಕ್ಸರ್ ಹೇಳಿ, ದೇಶದ್ರೋಹಿ ಎಂದರು.
ಗಂಭೀರ್ ಒಬ್ಬ ಒಳ್ಳೆಯ ಕ್ರಿಕೆಟಿಗ. ಆದರೆ, ಮೆಂಟರ್ ಆಗಿ ಅಥವಾ ಕೋಚ್ ಆಗಿ ನನಗೆ ಗೊತ್ತಿಲ್ಲ. ಆ ಸಮಯದಲ್ಲಿ ನನ್ನನ್ನು ದೇಶದ್ರೋಹಿ ಎಂದು ಗೌತಮ್ ಹೇಳಿದಾಗ, 'ಆರ್ ಯು ಓಕೆ ಭಾಯ್'? ಅಂತ ನಾನು ಕೇಳಿದೆ ಅಷ್ಟೇ ಎಂದರು. 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಕೇಸ್ನಲ್ಲಿ ಶ್ರೀಶಾಂತ್ ಬ್ಯಾನ್ ಆದ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಗಂಭೀರ್ ಈ ರೀತಿ ಸಿಟ್ಟಿನಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ತಮ್ಮ ವಿರುದ್ಧ ಕೆಟ್ಟ ಪದಗಳನ್ನು ಬಳಸಿದ್ದನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ಮೂಲಕ ಬೂದಿ ಮುಚ್ಚಿದ ಕೆಂಡದಂತಿದ್ದ ವಿವಾದಕ್ಕೆ ಶ್ರೀಶಾಂತ್ ಕಿಚ್ಚು ಹಚ್ಚಿರುವುದಂತು ಇಲ್ಲಿ ಸ್ಪಷ್ಟ,(ಏಜೆನ್ಸೀಸ್).