ಮೊದಲ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ ಆಡಲಿರುವ ಆರ್‌ಸಿಬಿ
- ಇಂದಿನಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿ
- ಮೊದಲ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ ಆಡಲಿರುವ ಆರ್‌ಸಿಬಿ
- ಕಳೆದ ವರ್ಷ ಸಂಭ್ರಮದಲ್ಲಿ ಮಡಿದ 11 ಜನ ಅಭಿಮಾನಿಗಳಿಗೆ ಗೌರವ ಸೂಚಿಸಲು ತೋಳಿಗೆ ಕಪ್ಪು ಪಟ್ಟಿ ಧರಿಸಲಿರುವ ಪ್ಲೇಯರ್ಸ
ಬೆಂಗಳೂರು: ಇಡೀ ಭಾರತವೇ ಹಬ್ಬದಂತೆ ಆಚರಿಸುವ ಐಪಿಎಲ್ ಇಂದು (ಮಾರ್ಚ್ 28) ಅದ್ದೂರಿಯಾಗಿ ಶುರುವಾಗುತ್ತಿದೆ. ಆದರೆ, ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB players) ತಂಡಕ್ಕೆ ಮಾತ್ರ ಈ ಬಾರಿಯ ಆರಂಭ ಸಂಭ್ರಮಕ್ಕಿಂತ ಹೆಚ್ಚಾಗಿ ಭಾವುಕತೆಯಿಂದ ಕೂಡಿರಲಿದೆ.
ಸನ್ರೈಸರ್ಸ ವಿರುದ್ಧದ ಮೊದಲ ಪಂದ್ಯಕ್ಕೆ ಮೈದಾನಕ್ಕಿಳಿಯುವ ಆರ್‌ಸಿಬಿ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಲಿದ್ದು, ಇದು ಕಳೆದ ವರ್ಷದ ಸಂಭ್ರಮದ ನಡುವೆ ಪ್ರಾಣ ಬಿಟ್ಟ 11 ಜೀವಗಳಿಗೆ ಸಲ್ಲಿಸುತ್ತಿರುವ ಗೌರವ ಎಂದು ಫ್ರಾಂಚೈಸಿ ತಿಳಿಸಿದೆ.
ಬೆಂಗಳೂರು ಮಂದಿಗೆ ಆರ್‌ಸಿಬಿ ಅಂದ್ರೆ ಕೇವಲ ಕ್ರಿಕೆಟ್ ಟೀಮ್ ಅಲ್ಲ, ಅದೊಂದು ಎಮೋಷನ್. ಕಳೆದ ಸೀಸನ್‌ನಲ್ಲಿ ಆರ್‌ಸಿಬಿ ಮೊದಲ ಬಾರಿಗೆ ಕಪ್ ಗೆದ್ದಾಗ ಇಡೀ ಬೆಂಗಳೂರೇ ಹಬ್ಬದಂತೆ ಕುಣಿದಿತ್ತು. ಆದರೆ ಅದೇ ಸಂಭ್ರಮದ ನಡುವೆ ನಡೆದ ಒಂದು ದುರಂತ ಇವತ್ತಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಕರಾಳ ನೆನಪಾಗಿ ಉಳಿದಿದೆ.
ಜೂನ್ 4 ರ ಆ ಕರಾಳ ರಾತ್ರಿ ಏನಾಗಿತ್ತು?
ಕಳೆದ ಸೀಸನ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗುತ್ತಿದ್ದಂತೆ ನಗರದಾದ್ಯಂತ ವಿಜಯೋತ್ಸವ ಮುಗಿಲು ಮುಟ್ಟಿತ್ತು. ಆದರೆ ಕ್ರೀಡಾಂಗಣದ ಹೊರಗೆ ಅಭಿಮಾನಿಗಳು ಮುಗಿಬಿದ್ದಾಗ ಉಂಟಾದ ಕಾಲ್ತುಳಿತದಲ್ಲಿ ಆರ್‌ಸಿಬಿ ತಂಡದ ಕಟ್ಟಾ ಅಭಿಮಾನಿಗಳಾಗಿದ್ದ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಗೆಲುವಿನ ನಗು ಇರಬೇಕಾದ ಮನೆಯಲ್ಲಿ ಸಾವಿನ ಚೀರಾಟ ಕೇಳಿಬಂದಿತ್ತು. ಈ ಘಟನೆ ಆರ್‌ಸಿಬಿ ಫ್ರಾಂಚೈಸಿ ಮತ್ತು ಮ್ಯಾನೇಜ್‌ಮೆಂಟ್‌ಗೆ ಅತೀವ ನೋವು ತಂದಿತ್ತು.
11 ಅಭಿಮಾನಿಗಳ ನೆನಪಿನಲ್ಲಿ ಆರ್‌ಸಿಬಿ ವಿಶೇಷ ಗೌರವ
ಈ ಬಾರಿ ಐಪಿಎಲ್ ಅಭಿಯಾನ ಶುರು ಮಾಡುವ ಮುನ್ನ ತಂಡವು ಆ 11 ಜೀವಗಳನ್ನು ಮರೆತಿಲ್ಲ. ತಂಡದ ಅಧಿಕೃತ ಪ್ರಕಟಣೆಯಂತೆ, ಅಭ್ಯಾಸದ ಸಮಯದಲ್ಲಿ ಆಟಗಾರರು 11 ಸಂಖ್ಯೆ ಇರುವ ವಿಶೇಷ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದರು. ಇಂದಿನ ಪಂದ್ಯದಲ್ಲಿ ಆಟಗಾರರು ಕಪ್ಪು ತೋಳುಪಟ್ಟಿ ಧರಿಸಿ ಆ 11 ಅಭಿಮಾನಿಗಳ ಆತ್ಮಕ್ಕೆ ಶಾಂತಿ ಕೋರಲಿದ್ದಾರೆ.
ಅತ್ಯಂತ ಭಾವುಕ ನಿರ್ಧಾರವೆಂದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಸೀಟುಗಳನ್ನು ಸಾಂಕೇತಿಕವಾಗಿ ಖಾಲಿ ಬಿಡಲಾಗಿದೆ. ಆ 11 ಅಭಿಮಾನಿಗಳು ಇಂದಿಗೂ ನಮ್ಮ ಜೊತೆಗೇ ಪಂದ್ಯ ನೋಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಆರ್‌ಸಿಬಿ ಮತ್ತು ಕೆಎಸ್‌ಸಿಎ (KSCA) ಈ ಗೌರವ ಸಲ್ಲಿಸಿವೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆರ್‌ಸಿಬಿ ಪಂದ್ಯಗಳು!
ಬೆಂಗಳೂರಿನಲ್ಲಿ ಪಂದ್ಯ ನಡೆಯುತ್ತಾ ಇಲ್ಲವಾ ಎನ್ನುವ ಬಗ್ಗೆ ಸ್ವಲ್ಪ ಗೊಂದಲವಿತ್ತು. ಆದರೆ ಈಗ ಎಲ್ಲಾ ಅನಿಶ್ಚಿತತೆಗಳು ದೂರವಾಗಿವೆ. ಆರ್‌ಸಿಬಿ ತನ್ನ 5 ಹೋಮ್ ಮ್ಯಾಚ್‌ಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡಲಿದೆ. ಇನ್ನುಳಿದ ಎರಡು ಹೋಮ್ ಮ್ಯಾಚ್‌ಗಳು ರಾಯ್‌ಪುರದಲ್ಲಿ ನಡೆಯಲಿವೆ. ಕ್ರೀಡಾಂಗಣದ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಈಗ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಬೆಂಗಳೂರು ಫ್ಯಾನ್ಸ್ ತಮ್ಮ ನೆಚ್ಚಿನ ತಂಡವನ್ನು ಮನೆಯಂಗಳದಲ್ಲೇ ಕಣ್ತುಂಬಿಕೊಳ್ಳಬಹುದಾಗಿದೆ,(ಏಜನ್ಸೀಸ್).