ರಾಜಸ್ಥಾನ ರಾಯಲ್ಸ್ ತಂಡ ಮಾರಾಟಕ್ಕೆ ಕಾನೂನು ತೊಡಕು!
ನವದೆಹಲಿ: ರಾಜಸ್ಥಾನ ರಾಯಲ್ಸ್ (Rajasthan Royals) ತಂಡದ ಮಾರಾಟ ಪ್ರಕ್ರಿಯೆ ಈಗ ವಿವಾದಕ್ಕೀಡಾಗಿದೆ. ಆರ್ಆರ್ ಫ್ರಾಂಚೈಸಿಯನ್ನು ಭಾನುವಾರವಷ್ಟೇ ಉದ್ಯಮಿಗಳಾದ ಲಕ್ಷ್ಮೀ ಮಿತ್ತಲ್ ಮತ್ತು ಅದಾರ್ ಪೂನಾವಾಲಾ ಒಳಗೊಂಡ ಒಕ್ಕೂಟಕ್ಕೆ 15,660 ಕೋಟಿ ರೂ.ಗೆ ಮಾರಾಟ ಮಾಡಲಾಗಿತ್ತು. ಇದರ ಬೆನ್ನಲ್ಲೇ, ತಂಡವನ್ನು ಈ ಹಿಂದೆ 15,290 ಕೋಟಿ ರೂ.ಗೆ ಖರೀದಿಸಲು ಮುಂದಾಗಿದ್ದ ಅಮೆರಿಕದ ಉದ್ಯಮಿ ಕಲ್ ಸೋಮಾನಿ ಒಳಗೊಂಡ ಒಕ್ಕೂಟವು ಕಾನೂನು ಸಮರಕ್ಕೆ ಸಿದ್ಧವಾಗಿದೆ.
ಸೋಮಾನಿ ಒಕ್ಕೂಟದ ಜತೆಗಿನ ಮಾರಾಟ ಒಪ್ಪಂದ ವಿವಿಧ ಕಾರಣಗಳಿಂದಾಗಿ ಮುರಿದುಬಿದ್ದಿದೆ ಎಂದು ಆರ್ಆರ್ ಫ್ರಾಂಚೈಸಿ ತಿಳಿಸಿತ್ತು. ಆದರೆ ಇದನ್ನು ಒಪ್ಪದ ಸೋಮಾನಿ ಒಕ್ಕೂಟ, ಆರ್ಆರ್ ಫ್ರಾಂಚೈಸಿಗೆ ಕಾನೂನು ನೋಟಿಸ್ ಕಳುಹಿಸಿದೆ. ಇದರಿಂದಾಗಿ ಆರ್ಆರ್ ಫ್ರಾಂಚೈಸಿಯನ್ನು ಹೊಸ ಮಾಲೀಕರಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ತಡೆ ಬೀಳಬಹುದು ಎನ್ನಲಾಗಿದೆ.
ಸೋಮಾನಿ ಜತೆಗಿನ ಒಪ್ಪಂದ ಹಣದ ವಿಚಾರಕ್ಕೆ ಮುರಿದು ಬಿದ್ದಿಲ್ಲ. ಬದಲಾಗಿ ಹಾಲಿ ಮಾಲೀಕ ಮನೋಜ್ ಬದಾಲೆ ಹೊಸ ಮಾಲೀಕರ ಬಳಗದಲ್ಲೂ ಸ್ಥಾನ ಪಡೆಯಲು ಬಯಸಿದ್ದು ಕಾರಣ ಎನ್ನಲಾಗಿದೆ. ಇದಕ್ಕೆ ಸೋಮಾನಿ ಒಕ್ಕೂಟ ನಿರಾಕರಿಸಿತ್ತು. ಇದರಿಂದಾಗಿ ಮಿತ್ತಲ್-ಅದಾರ್ ಜತೆ ಬದಾಲೆ ಕೈಜೋಡಿಸಿದರು ಎನ್ನಲಾಗಿದೆ.