ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ
- ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ
- ಮದುವೆ ಸಮಾರಂಭದ ನಡುವೆ ತಂದೆಗೆ ಹೃದಯಾಘಾತ ಹಿನ್ನೆಲೆ ವಿವಾಹ ಮುಂದಕ್ಕೆ
- ಭಾವಿ ಪತಿ ಹಾಗೂ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಕೂಡ ಆಸ್ಪತ್ರೆಗೆ ದಾಖಲು
ಮುಂಬೈ: ಮದುವೆಯ ದಿನವೇ ತಂದೆಗೆ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ( Smriti Manthana ) ಅವರ ವಿವಾಹವನ್ನು ಮುಂದೂಡಲಾಗಿದೆ. ತಂದೆ ಶ್ರೀನಿವಾಸ್ ಮಂಧಾನ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಸ್ಮೃತಿ ಅವರ ಭಾವಿ ಪತಿ ಹಾಗೂ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೈರಲ್ ಸೋಂಕು ಮತ್ತು ಹೆಚ್ಚಿನ ಆಡಿಡಿಟಿಯಿಂದಾಗಿ ಪಲಾಶ್ ಮುಚ್ಚಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಅನಾರೋಗ್ಯ ಗಂಭೀರವಾಗಿಲ್ಲದ ಕಾರಣ ಚಿಕಿತ್ಸೆ ಪಡೆದ ಬಳಿಕ ಪಲಾಶ್ ಅವರು ತಮ್ಮ ನಿವಾಸಕ್ಕೆ ಮರಳಿದ್ದಾರೆ ಎಂದು ವರದಿಯಾಗಿದೆ. ಸದ್ಯ ಪಲಾಶ್ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಎಲ್ಲವು ಅಂದುಕೊಂಡಂತೆ ನಡೆದಿದ್ದರೆ ನಿನ್ನೆ (ನ.23) ಸ್ಮೃತಿ ಅವರು ಬಹುಕಾಲದ ಗೆಳೆಯ ಹಾಗೂ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ, ಸ್ಮೃತಿ ಅವರ ತಂದೆಗೆ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಎಲ್ಲವು ಬದಲಾಯಿತು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಮ್ದೋಲ್ನಲ್ಲಿರುವ ಸ್ಮೃತಿ ಒಡೆತನದ ಫಾರ್ಮ್ ಹೌಸ್ನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆಯಬೇಕಿತ್ತು. ಆದರೆ, ಇದೀಗ ಮದುವೆಯನ್ನು ಮುಂದೂಡಲಾಗಿದೆ ಎಂದು ಸ್ಮೃತಿ ಅವರ ಬಿಜಿನೆಸ್ ಮ್ಯಾನೇಜರ್ ತುಹಿನ್ ಮಿಶ್ರಾ ಖಚಿತಪಡಿಸಿದ್ದಾರೆ.
ನಿನ್ನೆ ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ ಅವರನ್ನು ತಕ್ಷಣವೇ ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದು, ತೀವ್ರ ನಿಗಾದಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ. ಅವರ ರಕ್ತದೊತ್ತಡವೂ ಹೆಚ್ಚಾಗಿದ್ದು, ಹೀಗೆ ಮುಂದುವರಿದರೆ, ಆಂಜಿಯೋಗ್ರಾಮ್ ಮಾಡುವ ಬಗ್ಗೆ ಯೋಚಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಶ್ರೀನಿವಾಸ್ ಮಂಧಾನ ಅವರು ನಿನ್ನೆ ಬೆಳಗ್ಗೆ ಉಪಾಹಾರ ಸೇವಿಸುತ್ತಿದ್ದಾಗಲೇ ಅಸ್ವಸ್ಥರಾದರು. ಇದೆಲ್ಲ ಮಾಮೂಲಿ ಅವರು ಸರಿ ಹೋಗುತ್ತಾರೆ ಅಂತ ಸ್ವಲ್ಪ ಸಮಯ ಕಾದೆವು. ಆದರೆ, ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು. ಹೀಗಾಗಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಬಾರದು ಅಂತ ತಕ್ಷಣ ನಾವು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ದೆವು. ಈಗ ಅವರು ವೈದ್ಯರ ನಿಗಾದಲ್ಲಿದ್ದಾರೆ ಎಂದು ಸ್ಮೃತಿ ಅವರ ಮ್ಯಾನೇಜರ್ ನಿನ್ನೆಯೇ ಹೇಳಿಕೆ ನೀಡಿದರು.
ನಿಮಗೆ ಗೊತ್ತು ಸ್ಮೃತಿ ಅವರಿಗೆ ತಂದೆ ಅಂದರೆ ಜೀವ. ಹೀಗಾಗಿ ಅವರು ಗುಣಮುಖರಾಗುವವರೆಗೆ, ಇಂದು ನಡೆಯಬೇಕಿದ್ದ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಆಕೆಯೇ ನಿರ್ಧರಿಸಿದರು. ಇಡೀ ಕುಟುಂಬ ಇದೀಗ ಆಘಾತದಲ್ಲಿದೆ. ಸ್ಮೃತಿ ಅವರ ತಂದೆ ಚೇತರಿಸಿಕೊಳ್ಳಬೇಕಿದೆ. ಆದಷ್ಟು ಬೇಗ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ಮ್ಯಾನೇಜರ್ ತಿಳಿಸಿದ್ದಾರೆ.
ಅಂದಹಾಗೆ, ಸ್ಮೃತಿ ಮತ್ತು ಪಲಾಶ್ ನವೆಂಬರ್ 23 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಆಪ್ತ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ವಿವಾಹವಾಗಬೇಕಿತ್ತು. ಮಹಿಳಾ ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಅನೇಕ ಸದಸ್ಯರು ಈ ವಿವಾಹ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಆದರೆ, ಸ್ಮೃತಿ ಅವರ ತಂದೆಗೆ ಹೃದಯಾಘಾತ ಸಂಭವಿಸಿದ್ದರಿಂದ ಮದುವೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ, (ಏಜೆನ್ಸೀಸ್).