ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್
- ಟೀಮ್ ಇಂಡಿಯಾದ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ
- ಸ್ಮೃತಿ ಮದುವೆ ನಡೆಯುತ್ತೋ? ಅಥವಾ ನಡೆಯುವುದಿಲ್ಲವೋ? ಎಂಬ ಅನುಮಾನ ಮೂಡಿದೆ
- ಇಬ್ಬರಲ್ಲಿ ಯಾರ ಬಳಿ ಹೆಚ್ಚು ಆಸಿ ಇದೆ ಅನ್ನೋ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರು
- ಮೊದಲಿಗಿಂತ ಗಮನಾರ್ಹವಾಗಿ ಏರಿದ ಸ್ಮೃತಿ ಅವರ ಬ್ರಾಂಡ್ ಮೌಲ್ಯ
ಮುಂಬೈ: ಸಾಮಾಜಿಕ ಜಾಲತಾಣವನ್ನು ತೆರೆದೆರೆ ಸಾಕು ಬರೀ ಸ್ಮೃತಿ ಮಂಧಾನ ( Smriti Mandhana ) ಅವರ ವಿವಾಹದ ಬಗ್ಗೆಯೇ ಭಾರಿ ಚರ್ಚೆ ನಡೆಯುತ್ತಿದೆ. ನವೆಂಬರ್ 23ರಂದು ನಡೆಯಬೇಕಿದ್ದ ಸ್ಮೃತಿ ವಿವಾಹ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಮುಂದೂಡಲಾಗಿದೆಯೇ? ಅಥವಾ ಸಂಪೂರ್ಣ ರದ್ದುಗೊಳಿಸಲಾಗಿದೆಯೇ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಎರಡೂ ಕುಟುಂಬಗಳಲ್ಲಿ ಯಾರೊಬ್ಬರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಕೇವಲ ವದಂತಿಯಷ್ಟೇ.
ಇನ್ನು ಸ್ಮೃತಿ ಮತ್ತು ಪಲಾಶ್ ಅವರ ಆಸ್ತಿ ವಿಚಾರವಾಗಿಯೂ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅದೇನೆಂದರೆ, ಇಬ್ಬರಲ್ಲಿ ಯಾರ ಬಳಿ ಹೆಚ್ಚು ಆಸಿ ಇದೆ ಅನ್ನೋದು. ಮೊದಲು ಸ್ಮೃತಿ ವಿಚಾರಕ್ಕೆ ಬರುವುದಾದರೆ, ಭಾರತೀಯ ಮಹಿಳಾ ತಂಡದ ಉಪನಾಯಕಿ ಮತ್ತು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( ಆರ್ಸಿಬಿ ) ತಂಡಕ್ಕೆ ಚ್ಚೊಚ್ಚಲ ಪ್ರಶಸ್ತಿ ಗೆದ್ದು ಕೊಟ್ಟ ನಾಯಕಿಯಾಗಿ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಸ್ಮೃತಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ, ಸ್ಮೃತಿ ಅವರ ಬ್ರಾಂಡ್ ಮೌಲ್ಯವು ಮೊದಲಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.
ಮೂಲಗಳ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೊತೆಗಿನ ಒಪ್ಪಂದದ ಮೂಲಕ ಸ್ಮೃತಿ ಅವರು ವಾರ್ಷಿಕ 50 ಲಕ್ಷ ರೂ. ವೇತನ ಪಡೆಯುತ್ತಾರೆ. ಅದೇ ರೀತಿ, ಪ್ರತಿ ಟೆಸ್ಟ್ ಪಂದ್ಯಕ್ಕೆ ಹೆಚ್ಚುವರಿಯಾಗಿ 15 ಲಕ್ಷ ರೂ., ಏಕದಿನ ಪಂದ್ಯಕ್ಕೆ 6 ಲಕ್ಷ ರೂ. ಮತ್ತು ಅಂತಾರಾಷ್ಟ್ರೀಯ ಟಿ20 ಪಂದ್ಯಕ್ಕೆ 3 ಲಕ್ಷ ರೂ. ಪಡೆಯುತ್ತಾರೆ. ಇದರ ಜೊತೆಗೆ, ಸ್ಮೃತಿ ಅವರು ಆರ್‌ಸಿಬಿಯ ಪ್ರಮುಖ ಆಟಗಾರ್ತಿ ಮತ್ತು ನಾಯಕಿಯಾಗಿ 3.4 ಕೋಟಿ ರೂ. ಪಡೆಯುತ್ತಾರೆ. ಡಬ್ಲ್ಯುಪಿಎಲ್ನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಸ್ಮೃತಿ ಹೊಂದಿದ್ದಾರೆ. ಇದರ ಜೊತೆಗೆ, ಬ್ರ್ಯಾಂಡ್ ಪ್ರಚಾರಗಳು ಮತ್ತು ಜಾಹೀರಾತುಗಳ ಮೂಲಕವೂ ಸ್ಮೃತಿ ಸಂಪಾದಿಸುತ್ತಿದ್ದಾರೆ. ಈ ಎಲ್ಲ ಲೆಕ್ಕಚಾರಗಳೊಂದಿಗೆ 2025ರಲ್ಲಿ ಸ್ಮೃತಿ ಮಂಧಾನ ಅವರ ನಿವ್ವಳ ಮೌಲ್ಯವು 32 ರಿಂದ 34 ಕೋಟಿ ರೂ.ಗಳ ನಡುವೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ಅಂದಾಜಿಸಿವೆ.
ಪಲಾಶ್ ಆಸ್ತಿ ಮೌಲ್ಯ ಎಷ್ಟು?
ಪಲಾಶ್ ಬಗ್ಗೆ ಹೇಳುವುದಾದರೆ, ಆತ ಸಂಗೀತ ನಿರ್ದೇಶಕ ಮತ್ತು ಆಲ್ಬಮ್ ಡಿಸೈನರ್ ಆಗಿ ಆದಾಯ ಗಳಿಸುತ್ತಾರೆ. ಇದಲ್ಲದೆ, ಪಲಾಶ್ ಅವರು ನಿರ್ದೇಶಕ ಮತ್ತು ನಿರ್ಮಾಪಕರಾಗಿಯೂ ಹೆಚ್ಚುವರಿ ಆದಾಯವನ್ನು ಗಳಿಸುತ್ತಾರೆ. ಇವುಗಳ ಜೊತೆಗೆ, ಪಲಾಶ್ ಲೈವ್ ಶೋಗಳು ಮತ್ತು ರಾಯಲ್ಟಿ ಮೂಲಕ ಭಾರಿ ಮೊತ್ತವನ್ನು ಪಡೆಯುತ್ತಿದ್ದಾರೆ. ರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, 2025 ರ ಹೊತ್ತಿಗೆ ಅವರ ನಿವ್ವಳ ಮೌಲ್ಯ 20 ರಿಂದ 41 ಕೋಟಿ ರೂ.ಗಳಷ್ಟಿದೆ.
ಪಲಾಶ್ ವಿರುದ್ಧ ಕೇಳಿಬರುತ್ತಿದೆ ಆರೋಪ
ಪಲಾಶ್ ಅವರು ಸ್ಮೃತಿ ಮಂಧಾನಗೂ ಮೊದಲು ಬೇರೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದರು ಮತ್ತು ಆಕೆಯೊಂದಿಗೆ ಪ್ರಣಯ ಸಂಬಂಧದಲ್ಲಿದ್ದರು ಎಂದು ಹೇಳಲಾಗುತ್ತಿದೆ. ಅದಕ್ಕಾಗಿಯೇ ಈ ವಿವಾಹವನ್ನು ರದ್ದುಗೊಳಿಸಲಾಗುತ್ತಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತೆ ಸ್ಮೃತಿ ಅವರು ಮದುವೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಜಾಲತಾಣದಲ್ಲಿ ಖಾತೆಗಳಿಂದ ಡಿಲೀಟ್ ಮಾಡಿದ್ದಾರೆ. ಅಲ್ಲದೆ, ಸಹ ಆಟಗಾರ್ತಿಯರಾದ ಜೆಮಿಮಾ ರೊಡ್ರಿಗಸ್ ಮತ್ತು ಶ್ರೇಯಾಂಕ ಪಾಟೀಲ್ ಕೂಡ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದಾರೆ. ಮತ್ತೊರ್ವ ಸಹ ಆಟಗಾರ್ತಿ ರಾಧಾ ಯಾದವ್ ಅವರು ಪಲಾಶ್ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಹೀಗಾಗಿ, ಅನುಮಾನಗಳು ದಟ್ಟವಾಗಿದ್ದು, ಮದುವೆ ರದ್ದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಮದುವೆಗೂ ಒಂದು ದಿನ ಮೊದಲೇ ಪಲಾಶ್ ಮುಚ್ಚಲ್ ತನ್ನ ಮಾಜಿ ಗೆಳತಿ ಮತ್ತು ಪ್ರಸಿದ್ಧ ನೃತ್ಯ ಸಂಯೋಜಕಿ ಜತೆ ಚಾಟಿಂಗ್ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ಸ್ಕ್ರೀನ್ ಶಾಟ್ಗಳು ಜಾಲತಾಣದಲ್ಲಿ ವೈರಲ್ ಆಗಿವೆ. ಮದುವೆಗು ಮುನ್ನವೇ ಇಬ್ಬರೂ ಭೇಟಿಯಾಗಿದ್ದರು ಎಂಬ ವರದಿಗಳೂ ಇವೆ. ಸ್ಮೃತಿ ಮಂಧಾನ ಅವರ ಕುಟುಂಬಕ್ಕೆ ಈ ವಿಷಯ ಗೊತ್ತಾಗಿ, ದೊಡ್ಡ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ. ಪಲಾಶ್ ವಿಚಾರ ತಿಳಿದ ಬಳಿಕ ಸ್ಮೃತಿ ಮಂಧಾನ ಅವರ ಕುಟುಂಬ ಹೃದಯಾಘಾತದ ನಾಟಕಗಳನ್ನು ಆಡಿತು. ಅದಕ್ಕಾಗಿಯೇ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದರ ನೆಪವನ್ನು ಒಡ್ಡಿ ಮದುವೆಯನ್ನು ಮುಂದೂಡಲಾಗಿದೆ ಎಂಬ ವದಂತಿಗಳು ಹಬ್ಬಿವೆ. ಆದರೆ, ಈ ಬಗ್ಗೆ ಎರಡೂ ಕುಟುಂಬಸ್ಥರು ಯಾವುದೇ ಅಧಿಕೃತ ಹೇಳಿಕೆಗಳನ್ನು ಈ ಕ್ಷಣದವರೆಗೆ ನೀಡಿಲ್ಲ.
ಆದಾಗ್ಯೂ, ಪಲಾಶ್ ಅವರ ಸಹೋದರಿ, ಬಾಲಿವುಡ್ ಗಾಯಕಿ ಪಲಾಕ್ ಮುಚ್ಚಲ್, ಇನ್‌ಸ್ಟಾಗ್ರಾಮ್‌ನಲ್ಲಿ ನೆಟ್ಟಿಗರಿಗೆ ಮನವಿ ಮಾಡಿದ್ದು, "ಸ್ಮೃತಿ ಅವರ ತಂದೆಯ ಅನಾರೋಗ್ಯದ ಕಾರಣ ಮದುವೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ದಯವಿಟ್ಟು ಈ ಸಮಯದಲ್ಲಿ ನಮ್ಮ ಗೌಪ್ಯತೆಗೆ ಭಂಗ ತರಬೇಡಿ ಎಂದು ಹೇಳಿದ್ದಾರೆ. ಸದ್ಯ, ಸ್ಮೃತಿ ಮತ್ತು ಪಲಾಶ್ ಮದುವೆ ನಡೆಯುತ್ತೋ? ಇಲ್ಲವೋ? ಅನ್ನೋ ಪ್ರಶ್ನೆ ಮಾತ್ರ ಹಾಗೇ ಉಳಿದಿದೆ. ಈ ಪ್ರಕರಣದಲ್ಲಿ ಮುಂದೆ ಏನೆಲ್ಲ ಬೆಳವಣಿಗೆಗಳು ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್).