ಟೀಮ್​ ಇಂಡಿಯಾ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ  
ಕ್ರಿಕೆಟ್

ಮತ್ತೆ ಆಸ್ಪತ್ರೆಗೆ ದಾಖಲಾದ ಸ್ಮೃತಿ ಮಂಧಾನ ಭಾವಿ ಪತಿ ಪಲಾಶ್ ಮುಚ್ಚಲ್​: ಚೇತರಿಸಿಕೊಳ್ಳುತ್ತಿರುವ ತಂದೆ! Smriti Mandhana

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ
  • ತಂದೆಗೆ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ವಿವಾಹ ಮುಂದಕ್ಕೆ
  • ಭಾವಿ ಪತಿ ಹಾಗೂ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್​ಗೂ ಅನಾರೋಗ್ಯ
ಮುಂಬೈ: ಟೀಮ್​ ಇಂಡಿಯಾ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ( Smriti Mandhana ) ಅವರ ಭಾವಿ ಪತಿ ಹಾಗೂ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರನ್ನು ಮುಂಬೈ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮದುವೆಯ ದಿನವೇ (ನ.23) ತಂದೆಗೆ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಸ್ಮೃತಿ ಅವರ ವಿವಾಹವನ್ನು ಮುಂದೂಡಲಾಯಿತು. ಸದ್ಯ ತಂದೆ ಶ್ರೀನಿವಾಸ್​ ಮಂಧಾನ ಹಾಗೂ ಭಾವಿ ಪತಿ ಪಲಾಶ್ ಮುಚ್ಚಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈರಲ್ ಸೋಂಕು ಮತ್ತು ಹೆಚ್ಚಿನ ಆಡಿಡಿಟಿಯಿಂದಾಗಿ ಪಲಾಶ್ ಮುಚ್ಚಲ್​ ಅವರನ್ನು ಆರಂಭದಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಅನಾರೋಗ್ಯ ಗಂಭೀರವಾಗಿಲ್ಲದ ಕಾರಣ ಚಿಕಿತ್ಸೆ ಪಡೆದ ಬಳಿಕ ಪಲಾಶ್ ಅವರು ತಮ್ಮ ನಿವಾಸಕ್ಕೆ ಮರಳಿದ್ದರು. ಇದೀಗ ಪಲಾಶ್ ಅವರನ್ನು ಮುಂಬೈನ ಗೋರೆಗಾಂವ್​ನಲ್ಲಿರುವ ಎಸ್​ವಿಆರ್​ ಆಸ್ಪತ್ರೆಗೆ ಮತ್ತೆ ದಾಖಲಿಸಲಾಗಿದೆ. ನಿರಂತರ ಸಂಗೀತ ಕಾರ್ಯಕ್ರಮಗಳು ಹಾಗೂ ಮದುವೆಯಲ್ಲಿನ ತಮ್ಮ ಪ್ರದರ್ಶನದಿಂದಾಗಿ ಪಲಾಶ್​ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಲ್ಲವು ಅಂದುಕೊಂಡಂತೆ ನಡೆದಿದ್ದರೆ ನ.23ರಂದು ಸ್ಮೃತಿ ಅವರು ಬಹುಕಾಲದ ಗೆಳೆಯ ಹಾಗೂ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ, ಸ್ಮೃತಿ ಅವರ ತಂದೆಗೆ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಎಲ್ಲವು ಬದಲಾಯಿತು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಮ್ದೋಲ್​ನಲ್ಲಿರುವ ಸ್ಮೃತಿ ಒಡೆತನದ ಫಾರ್ಮ್​ ಹೌಸ್​ನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆಯಬೇಕಿತ್ತು. ಆದರೆ, ಇದೀಗ ಮದುವೆಯನ್ನು ಮುಂದೂಡಲಾಗಿದೆ ಎಂದು ಸ್ಮೃತಿ ಅವರ ಬಿಜಿನೆಸ್​ ಮ್ಯಾನೇಜರ್​ ತುಹಿನ್​ ಮಿಶ್ರಾ ಖಚಿತಪಡಿಸಿದ್ದಾರೆ.
ಮೊನ್ನೆ ಸ್ಮೃತಿ ಅವರ ತಂದೆ ಶ್ರೀನಿವಾಸ್​ ಮಂಧಾನ ಅವರನ್ನು ತಕ್ಷಣವೇ ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಶ್ರೀನಿವಾಸ್​ ಮಂಧಾನ ಅವರು ಭಾನುವಾರ ಬೆಳಗ್ಗೆ ಉಪಾಹಾರ ಸೇವಿಸುತ್ತಿದ್ದಾಗಲೇ ಅಸ್ವಸ್ಥರಾದರು. ಇದೆಲ್ಲ ಮಾಮೂಲಿ ಅವರು ಸರಿ ಹೋಗುತ್ತಾರೆ ಅಂತ ಸ್ವಲ್ಪ ಸಮಯ ಕಾದೆವು. ಆದರೆ, ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು. ಹೀಗಾಗಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಬಾರದು ಅಂತ ತಕ್ಷಣ ನಾವು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ದೆವು. ಈಗ ಅವರು ವೈದ್ಯರ ನಿಗಾದಲ್ಲಿದ್ದಾರೆ ಎಂದು ಸ್ಮೃತಿ ಅವರ ಮ್ಯಾನೇಜರ್​ ಮೊನ್ನೆಯೇ ಹೇಳಿಕೆ ನೀಡಿದರು.
ಅಂದಹಾಗೆ, ಸ್ಮೃತಿ ಮತ್ತು ಪಲಾಶ್ ನವೆಂಬರ್ 23 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಆಪ್ತ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ವಿವಾಹವಾಗಬೇಕಿತ್ತು. ಮಹಿಳಾ ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಅನೇಕ ಸದಸ್ಯರು ಈ ವಿವಾಹ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಆದರೆ, ಸ್ಮೃತಿ ಅವರ ತಂದೆಗೆ ಹೃದಯಾಘಾತ ಸಂಭವಿಸಿದ್ದರಿಂದ ಮದುವೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ, (ಏಜೆನ್ಸೀಸ್​).