ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್
- ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
- ಭಾವಿ ಪತಿ ಪಲಾಶ್ ಕೂಡ ದಿಢೀರ್ ಆಸ್ಪತ್ರೆಗೆ ದಾಖಲು
- ಕಹಿ ಘಟನೆಗಳ ಬೆನ್ನಲ್ಲೇ ಮದುವೆಯ ವಿಡಿಯೋಗಳು ಡಿಲೀಟ್
ಮುಂಬೈ: ಮದುವೆಯ ದಿನವೇ ತಂದೆಗೆ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ( Smriti Mandhana) ಅವರ ವಿವಾಹವನ್ನು ಮುಂದೂಡಲಾಗಿದೆ. ತಂದೆ ಶ್ರೀನಿವಾಸ್ ಮಂಧಾನ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಸ್ಮೃತಿ ಅವರ ಭಾವಿ ಪತಿ ಹಾಗೂ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇತ್ತೀಚೆಗೆ ತಮ್ಮ ಬಹುಕಾಲದ ಗೆಳೆಯ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರನ್ನು ಮದುವೆಯಾಗುವುದಾಗಿ ಸ್ಮೃತಿ ಮಂಧಾನ ಅಧಿಕೃತವಾಗಿ ಘೋಷಿಸಿದರು. ಈ ಜೋಡಿ ಪರಸ್ಪರ ಉಂಗುರ ತೋಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡರು. ಈ ವಿಷಯವನ್ನು ಭಾರತೀಯ ಆಟಗಾರ್ತಿಯರಾದ ಜೆಮಿಮಾ ರೊಡ್ರಿಗಸ್, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್ ಮತ್ತು ರಾಧಾ ಯಾದವ್ ಅವರೊಂದಿಗೆ ರೀಲ್ ವಿಡಿಯೋ ಮೂಲಕ ಬಹಿರಂಗಪಡಿಸಿದರು.
ಸ್ಮೃತಿ-ಪಲಾಶ್ ಅವರ ಪ್ರೀವೆಡ್ಡಿಂಗ್ ಸೆಲೆಬ್ರೆಷನ್ಗಳು ಅದ್ಧೂರಿಯಾಗಿ ನಡೆಯಿತು. ಹಳದಿ, ಮೆಹೆಂದಿ ಮತ್ತು ಸಂಗೀತ ಸಮಾರಂಭಗಳ ಸಮಯದಲ್ಲಿ ನವ ಜೋಡಿ ತಮ್ಮ ಕುಟುಂಬ ಸದಸ್ಯರೊಂದಿಗೆ ಭರ್ಜರಿಯಾಗಿ ಕುಣಿದು ಸಂಭ್ರಮಿಸಿತು. ಆದಾಗ್ಯೂ, ಭಾನುವಾರ ನಡೆಯಬೇಕಿದ್ದ ಅವರ ಮದುವೆಗೆ ಇನ್ನೇನು ಕೆಲವು ಗಂಟೆಗಳ ಬಾಕಿ ಇರುವಾಗಲೇ ಸ್ಮೃತಿಯ ತಂದೆ ಶ್ರೀನಿವಾಸ್ ಮಂಧಾನ ಅವರು ದಿಢೀರ್ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದರು. ಪ್ರಸ್ತುತ, ಅವರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಲಭಿಸುತ್ತಿದೆ.
ವಿಡಿಯೋ ಡಿಲೀಟ್
ಇನ್ನು ಈ ಘಟನೆ ಬೆನ್ನಲ್ಲೇ ಅವರ ಭಾವಿ ಪತಿ ಪಲಾಶ್ ಕೂಡ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದು, ವೈರಲ್ ಸೋಂಕು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಆಸ್ಪತ್ರೆ ಸೇರಿದರು. ಈ ಬೆಳವಣಿಗೆಗಳಿಂದ ತೀರ ಬೇಸರಕ್ಕೆ ಒಳಗಾಗಿರುವ ಸ್ಮೃತಿ, ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದ ವಿವಾಹಪೂರ್ವ ಕ್ಷಣಗಳನ್ನು ತೆಗೆದುಹಾಕಿದ್ದಾರೆ. ಪ್ರಸ್ತುತ, ಮಂಧಾನ ಅವರ ತಂದೆ ಇನ್ನೂ ಆಸ್ಪತ್ರೆಯಲ್ಲಿದ್ದು, ಪಲಾಶ್ರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಈ ಬಗ್ಗೆ ಅವರ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದು, ಎಲ್ಲ ಸರಿ ಹೋದ ಮೇಲೆ ಮತ್ತೊಮ್ಮೆ ಹೊಸದಾಗಿ ಫೋಟೋಗಳನ್ನು ಶೇರ್ ಮಾಡಿಕೊಳ್ಳಬಹುದು ಎಂಬ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).