ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್
- ಮದುವೆ ರದ್ದಾಗಿರುವ ಬಗ್ಗೆ ಕೊನೆಗೂ ಮೌನ ಮುರಿದ ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ
- ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಪೋಸ್ಟ್ ಮಾಡುವ ಮೂಲಕ ಮದುವೆ ವದಂತಿಗೆ ಸ್ಪಷ್ಟನೆ
- ಈ ಸಮಯದಲ್ಲಿ ಎರಡೂ ಕುಟುಂಬದ ಗೌಪ್ಯತೆ ಗೌರವಿಸಬೇಕೆಂದು ಸ್ಮೃತಿ ಮನವಿ
- ನನ್ನ ಗಮನ ಶಾಶ್ವತವಾಗಿ ಭಾರತದ ಕ್ರಿಕೆಟ್ ಮೇಲೆಯೇ ಇರುತ್ತದೆ ಎಂದು ಸ್ಟಾರ್ ಬ್ಯಾಟ್ಸ್ವುಮನ್
ನವದೆಹಲಿ: ತಮ್ಮ ಮದುವೆ ವಿಚಾರವಾಗಿ ಕಳೆದ ಎರಡು ವಾರಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಸಾರ್ವಜನಿಕವಾಗಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಭಾರತದ ಮಹಿಳಾ ತಂಡದ ಉಪನಾಯಕಿ ಹಾಗೂ ಸ್ಟಾರ್ ಬ್ಯಾಟ್ಸ್ವುಮನ್ ಸ್ಮೃತಿ ಮಂಧಾನ ( Smriti Mandhana ) ಅವರು ಅಧಿಕೃತವಾಗಿ ತೆರೆಎಳೆದಿದ್ದಾರೆ.
ಬಾಲಿವುಡ್ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜತೆಗೆ ನಿಗದಿಯಾಗಿದ್ದ ಮದುವೆ ಮುರಿಬಿದ್ದಿರುವುದಾಗಿ ಸ್ಮೃತಿ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. ಅತ್ತ ಪಲಾಶ್ ಮುಚ್ಚಲ್ ಕೂಡ ಇನ್ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡಿದ್ದು, ಸ್ಮೃತಿ ಜತೆಗಿನ ಪ್ರೇಮ ಸಂಬಂಧವನ್ನು ಬ್ರೇಕಪ್ ಮಾಡಿಕೊಂಡಿರುವುದಾಗಿ ಹಾಗೂ ತಮ್ಮ ವಿರುದ್ಧ ಇಲ್ಲಸಲ್ಲದ್ದನ್ನು ಹರಡುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಸ್ಮೃತಿ ಹೇಳಿದ್ದೇನು?
ಅಷ್ಟಕ್ಕೂ ಸ್ಮೃತಿ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಏನು ಬರೆದುಕೊಂಡಿದ್ದಾರೆ ಅನ್ನೋದನ್ನು ಡೀಟೈಲ್ ಆಗಿ ತಿಳಿಯುವುದಾದರೆ, ಕಳೆದ ಕೆಲ ವಾರಗಳಿಂದ ನನ್ನ ಹಾಗೂ ನನ್ನ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಡುತ್ತಿವೆ. ಈ ಸಮಯದಲ್ಲಿ ಇದರ ಬಗ್ಗೆ ಮಾತನಾಡುವುದು ನನಗೆ ಸೂಕ್ತ ಅನಿಸಿತು. ನಾನು ಜೀವನದಲ್ಲಿ ತುಂಬಾ ಖಾಸಗಿ ವ್ಯಕ್ತಿ ಮತ್ತು ನಾನು ಅದೇ ರೀತಿ ಎಂದಿಗೂ ಇರಲು ಬಯಸುತ್ತೇನೆ. ಆದರೆ, ಈ ಸಂದರ್ಭದಲ್ಲಿ ಮದುವೆ ರದ್ದಾಗಿದೆ ಅನ್ನೋದನ್ನು ಸ್ಪಷ್ಟಪಡಿಸಬೇಕಿದೆ ಎಂದು ಸ್ಮೃತಿ ಬರೆದುಕೊಂಡಿದ್ದಾರೆ.
ಮತ್ತಷ್ಟು ಬರೆದುಕೊಂಡಿರುವ ಸ್ಮೃತಿ, ಈ ವಿಚಾರವನ್ನು ಇಲ್ಲಿಗೆ ಮುಗಿಸಲು ನಾನು ಇಚ್ಛಿಸುತ್ತೇನೆ. ನಾನು ಎಲ್ಲರ ಬಳಿಯೂ ಇದನ್ನೇ ಕೇಳಿಕೊಳ್ಳುತ್ತೇನೆ. ಈ ಸಮಯದಲ್ಲಿ ಎರಡೂ ಕುಟುಂಬದ ಗೌಪ್ಯತೆಯನ್ನು ಗೌರವಿಸಬೇಕೆಂದು ನಾನು ಎಲ್ಲರ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಈ ಕಠಿಣ ಪರಿಸ್ಥಿತಿಯಿಂದ ಹೊರಬಂದು ನಮ್ಮ ದಾರಿಯಲ್ಲಿ ನಾವು ಮುಂದುವರಿಯಲು ಅವಕಾಶ ನೀಡುವಂತೆ ಕೇಳಿಕೊಳ್ಳುತ್ತೇನೆ ಎಂದಿರುವ ಸ್ಮೃತಿ, ನಿಮ್ಮೆಲ್ಲರನ್ನೂ ಮತ್ತು ನನ್ನ ದೇಶವನ್ನು ಯಾವಾಗಲೂ ಉನ್ನತ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ನನಗೆ ಒಂದು ಉನ್ನತ ಉದ್ದೇಶವಿದೆ ಎಂದು ನಾನು ನಂಬುತ್ತೇನೆ. ಸಾಧ್ಯವಾದಷ್ಟು ಕಾಲ ಭಾರತಕ್ಕಾಗಿ ಆಟವಾಡುವುದನ್ನು ಮತ್ತು ಟ್ರೋಫಿಗಳನ್ನು ಗೆಲ್ಲುವುದನ್ನು ಮುಂದುವರಿಸಬೇಕೆಂದು ನಾನು ಭಾವಿಸುತ್ತೇನೆ ಮತ್ತು ನನ್ನ ಗಮನವು ಶಾಶ್ವತವಾಗಿ ಅಲ್ಲೇ ಇರುತ್ತದೆ. ಇಂತಹ ಕಠಿಣ ಸಂದರ್ಭದಲ್ಲಿ ನೀವೆಲ್ಲರು ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು. ಇದು ಮುಂದುವರಿಯುವ ಸಮಯ ಎನ್ನುವ ಮೂಲಕ ಸ್ಮೃತಿ ಎಲ್ಲ ವದಂತಿಗಳಿಗೆ ತೆರೆಎಳೆದಿದ್ದಾರೆ.
ಪಲಾಶ್ ಹೇಳಿದ್ದೇನು?
ಪಲಾಶ್ ಅವರು ಏನು ಬರೆದಿದ್ದಾರೆ ಅನ್ನೋದನ್ನು ಡೀಟೈಲ್ ಆಗಿ ನೋಡುವುದಾದರೆ, ನಾನು ನನ್ನ ವೈಯಕ್ತಿಯ ಸಂಬಂಧದಿಂದ (ಸ್ಮೃತಿ ಮಂಧಾನ ಪ್ರೀತಿ) ಹಿಂದೆ ಸರಿದು, ನನ್ನ ಜೀವನದಲ್ಲಿ ಮುಂದುವರಿಯಲು ನಿರ್ಧರಿಸಿದ್ದೇನೆ. ಆಧಾರವಿಲ್ಲದ ವದಂತಿಗಳನ್ನು ನಂಬಿ ಜನರು ಸುಲಭವಾಗಿ ಪ್ರತಿಕ್ರಿಯಿಸುತ್ತಿರುವುದನ್ನು ನೋಡಿದರೆ ತುಂಬಾ ಕಷ್ಟವಾಗುತ್ತಿದೆ ಮತ್ತು ಭಯವಾಗುತ್ತಿದೆ. ನನ್ನ ಜೀವನದ ಅತ್ಯಂತ ಕಷ್ಟದ ಹಂತದಲ್ಲಿ ನಾನಿಂದು ಇದ್ದೇನೆ. ಆದರೆ, ನಾನು ನನ್ನ ನಂಬಿಕೆಗಳನ್ನು ಯಾವುದೇ ಕ್ಷಣದಲ್ಲೂ ಬಿಟ್ಟುಕೊಡದೇ, ಈ ಪರಿಸ್ಥಿತಿಯನ್ನು ಸಂತೋಷವಾಗಿಯೇ ನಿಭಾಯಿಸುತ್ತೇನೆ. ಮೂಲಗಳು ಯಾವುದೆಂದು ತಿಳಿಯದ ವದಂತಿಗಳನ್ನು ನಂಬಿ ಇನ್ನೊಬ್ಬರ ವ್ಯಕ್ತಿತ್ವವನ್ನು ನಿರ್ಣಯಿಸುವುದಕ್ಕೆ ಈ ಸಮಾಜ ವಿರಾಮ ಹೇಳುತ್ತದೆ ಎಂದು ನಾನು ಭಾವಿಸುತ್ತೇನೆಂದು ಪಲಾಶ್ ಬರೆದುಕೊಂಡಿದ್ದಾರೆ.
ಇದಿಷ್ಟೇ ಅಲ್ಲದೆ, ಮತ್ತಷ್ಟು ಬರೆದುಕೊಂಡಿರುವ ಪಲಾಶ್, ಸದ್ಯ ನಾವು ಈ ವಿಚಾರಗಳನ್ನು (ವದಂತಿಗಳನ್ನು) ಯೋಚಿಸುತ್ತಿರುವಾಗಲೇ, ಪ್ರಪಂಚದ ಅನೇಕ ಜನರು ಇಂತಹ ವದಂತಿಗಳನ್ನು ಹರಡಿ ತೀವ್ರ ಪರಿಣಾಮಗಳನ್ನು ಈಗಾಗಲೇ ಎದುರಿಸುತ್ತಿದ್ದಾರೆ. ಸುಳ್ಳು ಮತ್ತು ಮಾನಹಾನಿಕರ ವಿಷಯವನ್ನು ಹರಡುವವರ ವಿರುದ್ಧ ನನ್ನ ತಂಡವು ಕೂಡ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ. ಈ ಕಠಿಣ ಸಮಯದಲ್ಲಿ ನನ್ನ ಮೇಲೆ ದಯೆ ತೋರಿದವರಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಪಲಾಶ್ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಎಲ್ಲವು ಅಂದುಕೊಂಡಂತೆ ನಡೆದಿದ್ದರೆ ನ. 23ರಂದು ಮಹಾರಾಷ್ಟ್ರ ಸಾಂಗ್ಲಿಯಲ್ಲಿ ಸ್ಮೃತಿ ಒಡೆತನದ ಫಾರ್ಮ್ಹೌಸ್ನಲ್ಲಿ ಸ್ಮೃತಿ ಮತ್ತು ಪಲಾಶ್ ವಿವಾಹ ನಡೆಯಬೇಕಿತ್ತು. ಆದರೆ, ಸ್ಮೃತಿ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ವಿವಾಹವನ್ನು ಮುಂದೂಡಲಾಗಿದೆ ಎಂದು ಆ ಸಮಯದಲ್ಲಿ ಘೋಷಿಸಲಾಯಿತು. ಇಷ್ಟೇ ಆಗಿದ್ದರೆ ಯಾವುದೇ ಸಂದೇಹಗಳು ಹುಟ್ಟಿಕೊಳ್ಳುತ್ತಿರಲಿಲ್ಲ. ತಂದೆ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಸ್ಮೃತಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ನಿಶ್ಚಿತಾರ್ಥ ಮತ್ತು ಕ್ರಿಕೆಟ್ ಮೈದಾನದಲ್ಲಿ ಪಲಾಶ್ ಪ್ರಪೋಸ್ ಮಾಡಿದ ವಿಡಿಯೋಗಳು ಸೇರಿದಂತೆ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದರು. ಇದು ಸಾಲದು ಎಂಬಂತೆ ಸ್ಮೃತಿಯ ಸಹ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗಸ್ ಮತ್ತು ಶ್ರೇಯಾಂಕ ಪಾಟೀಲ್ ಕೂಡ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದರು. ಮತ್ತೊರ್ವ ಆಟಗಾರ್ತಿ ರಾಧಾ ಯಾದವ್ ಅವರು ಪಲಾಶ್ ಅವರನ್ನು ಅನ್ಫಾಲೋ ಮಾಡಿದರು. ಈ ಎಲ್ಲ ನಡೆಗಳನ್ನು ನೋಡಿದಾಗ ಅನುಮಾನ ದಟ್ಟವಾಯಿತು. ವಿವಾಹವನ್ನು ಮುಂದೂಡಿರುವುದರ ಹಿಂದೆ ಏನೋ ಒಂದು ದೊಡ್ಡ ಸಮಸ್ಯೆ ಇದೆ ಎಂಬ ಊಹಾಪೋಹಕ್ಕೆ ಕಾರಣವಾಯಿತು.
ಆ ಕ್ಷಣದಲ್ಲಿ ಸ್ಮೃತಿ ಆಗಲಿ ಅಥವಾ ಪಲಾಶ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಇನ್ನಷ್ಟು ಗೊಂದಲವನ್ನು ಸೃಷ್ಟಿ ಮಾಡಿತು. ಇದರ ನಡುವೆ ಪಲಾಶ್ ಅವರ ಸಹೋದರಿ ಮತ್ತು ಬಾಲಿವುಡ್ ಗಾಯಕಿ ಪಲಾಕ್ ಮುಚ್ಚಲ್ ತಮ್ಮ ಸಹೋದರನ ಮದುವೆ ಬಗ್ಗೆ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದರು. ಸ್ಮೃತಿಯ ತಂದೆಯ ಅನಾರೋಗ್ಯದ ಕಾರಣ ಮದುವೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು. ಯಾವಾಗ ಪಲಾಕ್ ಮುಚ್ಚಲ್ ಅವರು ಫೋಸ್ಟ್ ಮಾಡಿದರೋ ಕೆಲವೇ ಕ್ಷಣಗಳಲ್ಲಿ ಅಪರಿಚಿತ ಮಹಿಳೆಯೊಬ್ಬರು ಪಲಾಶ್ ಜೊತೆ ಚಾಟ್ ಮಾಡಿದ್ದಾರೆನ್ನಲಾದ ಸ್ಕ್ರೀನ್‌ಶಾಟ್‌ಗಳು ಜಾಲತಾಣದಲ್ಲಿ ಕಾಣಿಸಿಕೊಂಡವು. ಕೆಲವು ಪೋಸ್ಟ್‌ಗಳಲ್ಲಿ ಮೇರಿ ಡಿ'ಕೋಸ್ಟಾ ಎಂದು ಗುರುತಿಸಲ್ಪಟ್ಟ ಮಹಿಳೆ ಸ್ಕ್ರೀನ್ ಶಾಟ್ಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದವು. ಆ ಚಾಟ್ನಲ್ಲಿ ಪಲಾಶ್ ಅವರು ನಿಗೂಢ ಯುವತಿಯ ಲುಕ್ ಅನ್ನು ಹೊಗಳಿದ್ದರು ಮತ್ತು ಸ್ಮೃತಿ ಬಗ್ಗೆಯೂ ಚರ್ಚಿಸಿದ್ದರು. ಅಲ್ಲದೆ, ಡೇಟಿಂಗ್ ಬಗ್ಗೆಯೂ ಉಲ್ಲೇಖಿಸಿದ್ದರು. ಆದರೆ, ಇದು ಪಲಾಶ್ ಅವರಿಗೆ ಸಂಬಂಧಿಸಿದ ಸ್ಕ್ರೀನ್ಶಾಟ್ ಎಂಬುದಕ್ಕೆ ಯಾವುದೇ ಪುರಾವೆ ಇರಲಿಲ್ಲ. ಅಂದಿನಿಂದ ಅನೇಕ ಊಹಾಪೋಹಗಳು ಹರಡುತ್ತಾ ಬಂದವು. ಅಂತಿಮವಾಗಿ ಪಲಾಶ್ ಮುಚ್ಚಲು ವದಂತಿಗಳಿಗೆ ತೆರೆಎಳೆದಿದ್ದಾರೆ, (ಏಜೆನ್ಸೀಸ್).