ನಾಯಕತ್ವಕ್ಕೆ ಹರ್ಮನ್​ ಗುಡ್​ಬೈ ಬೆನ್ನಲ್ಲೇ ಭಾರತ ಮಹಿಳಾ ತಂಡದ ನೂತನ ಕ್ಯಾಪನ್​ ಆಗಿ ಸ್ಮೃತಿ ಮಂಧಾನ ನೇಮಕ 
ಕ್ರಿಕೆಟ್

ನಾಯಕತ್ವಕ್ಕೆ ಹರ್ಮನ್​ ಗುಡ್​ಬೈ ಬೆನ್ನಲ್ಲೇ ಭಾರತ ಮಹಿಳಾ ತಂಡದ ನೂತನ ಕ್ಯಾಪನ್​ ಆಗಿ ಸ್ಮೃತಿ ಮಂಧಾನ ನೇಮಕ | Smriti Mandhana

ಈ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಒಂದು ಸುವರ್ಣಯುಗಕ್ಕೆ ತೆರೆಬಿದ್ದಂತಾಗಿದೆ. ಮತ್ತೊಂದೆಡೆ, ತಂಡದ ಉಪನಾಯಕಿಯಾಗಿರುವ ಸ್ಮೃತಿ ಮಂಧನಾ ಅವರ ಕೈಗೆ ಮುಂದಿನ ನಾಯಕತ್ವದ ಅಧಿಕಾರ ಹಸ್ತಾಂತರವಾಗಲಿದೆ ಎಂದೇ ಕ್ರಿಕೆಟ್​ ಪ್ರೇಮಿಗಳು ನಿರೀಕ್ಷಿಸಿದ್ದರು. ಅಂತೆಯೇ ಅವರಿಗೆ ಬಿಸಿಸಿಐ ನಾಯಕತ್ವವನ್ನು ಹಸ್ತಾಂತರಿಸಿದೆ.

ನವದೆಹಲಿ: ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಕ್ಯಾಪ್ಟನ್​ ಸ್ಥಾನಕ್ಕೆ ದಿಢೀರ್​ ಗುಡ್​ಬೈ ಹೇಳಿದ ದಿಗ್ಗಜೆ ಹಾಗೂ ಸಾರ್ವಕಾಲಿಕ ಶ್ರೇಷ್ಠ ನಾಯಕಿಯರಲ್ಲಿ ಒಬ್ಬರಾದ ಹರ್ಮನ್‌ಪ್ರೀತ್ ಕೌರ್​ (Harmanpreet Kaur), ತಮ್ಮ ನಿರ್ಧಾರದಿಂದ ಇಡೀ ಕ್ರಿಕೆಟ್​ ಲೋಕವನ್ನೇ ಅಕ್ಷರಶಃ ಬೆರಗಾಗಿಸಿದರು. ನಾಯಕತ್ವದಿಂದ ಹರ್ಮನ್​ ಕೆಳಗಿಳಿದ ಬೆನ್ನಲ್ಲೇ ಇದೀಗ ನೂತನ ಕ್ಯಾಪ್ಟನ್​ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಆಯ್ಕೆ ಆಗಿದ್ದಾರೆ.

ಭಾರತೀಯ ಮಹಿಳಾ ತಂಡವನ್ನು ದೀರ್ಘಕಾಲ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿರುವ ಹರ್ಮನ್​ಪ್ರೀತ್​ ಕೌರ್​, ಇನ್ನು ಮುಂದೆ ಯಾವುದೇ ಮಾದರಿಯಲ್ಲಿ (ಟೆಸ್ಟ್, ಏಕದಿನ ಹಾಗೂ ಟಿ20) ನಾಯಕಿಯಾಗಿ ಮುಂದುವರಿಯುವುದಿಲ್ಲ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಒಂದು ಸುವರ್ಣಯುಗಕ್ಕೆ ತೆರೆಬಿದ್ದಂತಾಗಿದೆ. ಮತ್ತೊಂದೆಡೆ, ತಂಡದ ಉಪನಾಯಕಿಯಾಗಿರುವ ಸ್ಮೃತಿ ಮಂಧನಾ ಅವರ ಕೈಗೆ ಮುಂದಿನ ನಾಯಕತ್ವದ ಅಧಿಕಾರ ಹಸ್ತಾಂತರವಾಗಲಿದೆ ಎಂದೇ ಕ್ರಿಕೆಟ್​ ಪ್ರೇಮಿಗಳು ನಿರೀಕ್ಷಿಸಿದ್ದರು. ಅಂತೆಯೇ ಅವರಿಗೆ ಬಿಸಿಸಿಐ ನಾಯಕತ್ವವನ್ನು ಹಸ್ತಾಂತರಿಸಿದೆ.

ಹರ್ಮನ್​ ಸ್ಥಾನವನ್ನು ತುಂಬಲಿರುವ ಸ್ಟಾರ್​ ಎಡಗೈ ಬ್ಯಾಟ್ಸ್​ವುಮನ್ ಸ್ಮೃತಿ,​ ಮುಂಬರುವ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ತಂಡವನ್ನು ನಾಯಕಿಯಾಗಿ ಮುನ್ನಡೆಸಲಿದ್ದಾರೆ. ಇದೇ ಅಕ್ಟೋಬರ್ 16ರಿಂದ 28ರವರೆಗೆ ರಾಯ್‌ಪುರದಲ್ಲಿ ಮೂರು ಟಿ20 ಮತ್ತು ಮೂರು ಏಕದಿನಗಳು ಪಂದ್ಯ ನಡೆಯಲಿವೆ. ಮತ್ತೊಂದೆಡೆ, ತಂಡಕ್ಕೆ ಹೊಸ ಕ್ಯಾಪ್ಟನ್​ ಆಗಿ ಆಯ್ಕೆಯಾದ ಮಂಧಾನಗೆ ಕ್ರಿಕೆಟ್​ ಅಭಿಮಾನಿಗಳಿಂದ ಅಭಿನಂದನೆಗಳು ಹರಿದುಬರುತ್ತಿವೆ.

ತಂಡದ ಪ್ರದರ್ಶನಗಳ ಅವಲೋಕನ ಹಾಗೂ ಮುಂದಿನ ಭವಿಷ್ಯದ ರೂಪುರೇಷೆಗಳನ್ನು ಸಿದ್ಧಪಡಿಸುವ ಸಲುವಾಗಿ ಅಸ್ಸಾಂನ ಗುವಾಹಟಿಯಲ್ಲಿ ಇತ್ತೀಚೆಗಷ್ಟೇ ಬಿಸಿಸಿಐ (BCCI) ವಿಶೇಷ ಪರಾಮರ್ಶೆ ಸಭೆಯನ್ನು ನಡೆಸಿತ್ತು. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಸ್ವತಃ ಹರ್ಮನ್‌ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧನಾ ಹಾಗೂ ಮುಖ್ಯ ಕೋಚ್ ಅಮೋಲ್ ಮುಜುಮ್ದಾರ್ ಉಪಸ್ಥಿತರಿದ್ದರು. ಈ ಸಭೆ ನಡೆದ ಕೆಲವೇ ದಿನಗಳಲ್ಲಿ ಹರ್ಮನ್‌ಪ್ರೀತ್ ಕೌರ್ ಅವರು ತಮ್ಮ ನಾಯಕತ್ವದ ಹುದ್ದೆಯನ್ನು ತೊರೆದಿರುವುದು ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅವರ ಮೇಲೆ ಒತ್ತಡ ಹೇರಲಾಯಿತೇ ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ,(ಏಜೆನ್ಸೀಸ್).