- ಭಾರತ ಮತ್ತು ಶ್ರೀಲಂಕಾ ನಡುವಿನ ಐದನೇ ಟಿ20 ಪಂದ್ಯ
- 4-0 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಮಹಿಳಾ ಭಾರತೀಯ ತಂಡ
- ಇನ್ನೂ 62 ರನ್ ಸಿಡಿಸಿದ್ರೆ ಗಿಲ್ ದಾಖಲೆ ಬ್ರೇಕ್
ಕೇರಳ: ಇಂದು (ಡಿ.30) ಭಾರತ ಮತ್ತು ಶ್ರೀಲಂಕಾ ನಡುವಿನ ಐದನೇ ಟಿ20 ಪಂದ್ಯ ತಿರುವನಂತಪುರದಲ್ಲಿ ನಡೆಯಲಿದ್ದು, ಸರಣಿಯಲ್ಲಿ 4-0 ಅಂತರದಲ್ಲಿ ಮುನ್ನಡೆ ಸಾಧಿಸಿರುವ ಮಹಿಳಾ ಭಾರತೀಯ ತಂಡ, ಕ್ಲೀನ್ ಸ್ವೀಪ್ ಮಾಡಲು ತವಕದಲ್ಲಿದೆ. ಮತ್ತೊಂದೆಡೆ, ಕೊನೆಯ ಪಂದ್ಯವನ್ನಾದರೂ ಗೆದ್ದು ಹೀನಾಯ ಸೋಲು ಎಂಬ ಹಣೆಪಟ್ಟಿಯಿಂದ ಹೊರಬರಲು ಶ್ರೀಲಂಕಾ ಎದುರುನೋಡುತ್ತಿದೆ.
ಇದೆಲ್ಲದರ ನಡುವೆ ಭಾರತ ಮಹಿಳಾ ತಂಡದ ಸ್ಟಾರ್ ಬ್ಯಾಟ್ಸ್‌ವುಮನ್ ಸ್ಮೃತಿ ಮಂಧಾನ, ಈ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಿಸಲು ತುದಿಗಾಲಿನಲ್ಲಿದ್ದಾರೆ. ಈ ವರ್ಷ, ಸ್ಮೃತಿ ಮೂರು ಫಾರ್ಮೆಟ್ಗಳಲ್ಲಿ ಒಟ್ಟು 1703 ರನ್ ಗಳಿಸಿದ್ದಾರೆ. ಕೊನೆಯ ಪಂದ್ಯದಲ್ಲಿ ಅವರೇನಾದರೂ ಇನ್ನೂ 62 ರನ್ ಗಳಿಸಿದರೆ, 2025ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಈ ಮೂಲಕ ಅವರು ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ ಅವರನ್ನು ಹಿಂದಿಕ್ಕಲಿದ್ದಾರೆ. ಗಿಲ್ 2025ರಲ್ಲಿ ಆಡಿರುವ ಮೂರು ಸ್ವರೂಪಗಳಲ್ಲಿ ಒಟ್ಟು 1764 ರನ್ ಗಳಿಸಿದ್ದಾರೆ. ಮಹಿಳಾ ಕ್ರಿಕೆಟ್‌ನಲ್ಲಿ ಸ್ಮೃತಿ ಮಂಧಾನ ಈಗಾಗಲೇ ಅತಿ ಹೆಚ್ಚು ರನ್ ದಾಖಲಿಸಿದ ಆಟಗಾರ್ತಿಯಾಗಿ ಉಳಿದಿದ್ದಾರೆ.
ಐದು ಪಂದ್ಯಗಳ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದ ಸ್ಮೃತಿ, ಭಾನುವಾರ (ಡಿ.28) ತಿರುವನಂತಪುರದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 48 ಎಸೆತಗಳಲ್ಲಿ 11 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ 80 ರನ್ ಸಿಡಿಸಿದರು. ಇಂದಿನ ಕೊನೆಯ ಪಂದ್ಯದಲ್ಲಿ ಅವರೇನಾದರೂ 62 ಬಾರಿಸಿದರೆ, ಗಿಲ್ ದಾಖಲೆ ಮುರಿಯುವುದು ಖಚಿತ,(ಏಜೆನ್ಸೀಸ್).