ಕರ್ನಾಟಕಕ್ಕೆ ತ್ರಿಪುರ ಶಾಕ್; ಸೂಪರ್ ಓವರ್ನಲ್ಲಿ ಮುಗ್ಗರಿಸಿದ ಮಯಾಂಕ್ ಪಡೆ
ಅಹಮದಾಬಾದ್: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ (t20 cricket) ನಿರಾಶಾದಾಯಕ ನಿರ್ವಹಣೆ ಮುಂದುವರಿಸಿರುವ ಕರ್ನಾಟಕ ತಂಡ ತನ್ನ 7ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ತ್ರಿಪುರ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದೆ. ತ್ರಿಪುರ ನಾಯಕ ಮುರಾ ಸಿಂಗ್ (69 ರನ್, 35 ಎಸೆತ, 2 ಬೌಂಡರಿ, 6 ಸಿಕ್ಸರ್, 30ಕ್ಕೆ 2) ಆಲ್ರೌಂಡ್ ನಿರ್ವಹಣೆ ಎದುರು ಮುಗ್ಗರಿಸಿದ ಕರ್ನಾಟಕ ತಂಡ ಸೂಪರ್ ಓವರ್ನಲ್ಲಿ ಪರಾಭವಗೊಂಡಿತು. ಈಗಾಗಲೆ ಸೂಪರ್ ಲೀಗ್ ಹಂತಕ್ಕೇರುವ ಆಸೆ ಕೈಚೆಲ್ಲಿದ್ದ ಮಯಾಂಕ್ ಅಗರ್ವಾಲ್ (mayank agarwal) ಪಡೆ, ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದು, 5 ಸೋಲಿನೊಂದಿಗೆ ಡಿ ಗುಂಪಿನ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
ನಮೋ ಸ್ಟೇಡಿಯಂನ ಬಿ ಗ್ರೌಂಡ್ನಲ್ಲಿ ಸೋಮವಾರ ನಡೆದ ಔಪಚಾರಿಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಕರ್ನಾಟಕ, ಸಂಟಿತ ಆಟದೊಂದಿಗೆ 6 ವಿಕೆಟ್ಗೆ 197 ರನ್ ಕಲೆಹಾಕಿತು. ಪ್ರತಿಯಾಗಿ ತ್ರಿಪುರ ಉತ್ತಮ ಆರಂಭ ಕಂಡರೂ, ನಡುವೆ ಕುಸಿತ ಅನುಭವಿಸಿ 106 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಆಗ ಮುರಾ ಸಿಂಗ್ ಏಕಾಂಗಿ ಹೋರಾಟ ತೋರಿದರು. ಕೊನೇ ಎಸೆತದಲ್ಲಿ 2 ರನ್ ಬೇಕಿದ್ದಾಗ ಅವರು, 2ನೇ ರನ್ ಕಸಿಯುವ ಯತ್ನದಲ್ಲಿ ರನೌಟಾದರು. ಇದರಿಂದ ತ್ರಿಪುರ 8 ವಿಕೆಟ್ಗೆ 197 ರನ್ ಗಳಿಸಿ ಟೈ ಸಾಧಿಸಿತು. ನಂತರ ಸೂಪರ್ ಓವರ್ನಲ್ಲಿ ತ್ರಿಪುರ ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿದರೆ, ಕರ್ನಾಟಕ 1 ವಿಕೆಟ್ಗೆ 18 ರನ್ ಗಳಿಸಲಷ್ಟೇ ಶಕ್ತಗೊಂಡಿತು.
ಕರ್ನಾಟಕ: 6 ವಿಕೆಟ್ಗೆ 197 (ಬಿಆರ್ ಶರತ್ 44, ಮಯಾಂಕ್ 29, ಪಡಿಕ್ಕಲ್ 32, ಮ್ಯಾಕ್ನೀಲ್ 34, ಅಭಿನವ್ 8, ಸ್ಮರಣ್ 24, ಮನ್ವಂತ್ 10*, ಪ್ರವಿಣ್ ದುಬೆ 10*, ಮುರಾ 30ಕ್ಕೆ 2, ಹೊಸೈನ್ 35ಕ್ಕೆ 2), ತ್ರಿಪುರ: 8 ವಿಕೆಟ್ಗೆ 197 (ವಿಹಾರಿ 36, ಶ್ರೀದಮ್ 28, ತೇಜಸ್ವಿ ಜೈಸ್ವಾಲ್ 11, ವಿಜಯ್ ಶಂಕರ್ 9, ಮುರಾ ಸಿಂಗ್ 69, ಸರ್ಕಾರ್ 14, ಸೌರಭ್ ದಾಸ್ 13*, ಪ್ರವಿಣ್ ದುಬೆ 6ಕ್ಕೆ 2, ಶುಭಾಂಗ್ 31ಕ್ಕೆ 2, ವಿದ್ಯಾಧರ್ 54ಕ್ಕೆ 1). ಸೂಪರ್ ಓವರ್: ತ್ರಿಪುರ: 22/0; ಕರ್ನಾಟಕ: 18/1.
ಮಯಾಂಕ್ ಅಗರ್ವಾಲ್(2,153) ಪಂದ್ಯದಲ್ಲಿ 29 ರನ್ ಗಳಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಕರ್ನಾಟಕ ಪರ ಸರ್ವಾಧಿಕ ರನ್ ಸ್ಕೋರರ್ ಎನಿಸಿದರು. ಮನೀಷ್ ಪಾಂಡೆ (2,125) ಹೆಸರಿನಲ್ಲಿದ್ದ ದಾಖಲೆಯನ್ನು ಅವರು ಮುರಿದರು.
ಕರ್ನಾಟಕಕ್ಕೆ ಮುಂದಿನ ದೇಶೀಯ ಕ್ರಿಕೆಟ್ ಟೂರ್ನಿ
*ವಿಜಯ್ ಹಜಾರೆ ಟ್ರೋಫಿ ಏಕದಿನ