ಶ್ರೀಲಂಕಾ ಮತ್ತು ನ್ಯೂಜಿಲೆಂಡ್​ ಸೂಪರ್​-8 ಪಂದ್ಯ 
ಕ್ರಿಕೆಟ್

ರಚಿನ್​ ಸ್ಪಿನ್​ ಕಮಾಲ್! ಕಿವೀಸ್​ ಎದುರು ಮಂಡಿಯೂರಿದ ಶ್ರೀಲಂಕಾ; ಶುರುವಾಯಿತು ಪಾಕ್​ಗೆ ಆತಂಕ | SL vs NZ

ಪ್ರಮುಖ ಮುಖ್ಯಾಂಶಗಳು

  • ಇಂದು ಕೊಲೊಂಬಾದಲ್ಲಿ ನಡೆದ ಶ್ರೀಲಂಕಾ ಮತ್ತು ನ್ಯೂಜಿಲೆಂಡ್​ ನಡುವಿನ ಸೂಪರ್​-8 ಪಂದ್ಯ
  • ಕಿವೀಸ್​ ಪಡೆ ಎದುರು ಹೀನಾಯ ಸೋಲು ಅನುಭವಿಸಿದ ಲಂಕಾ ಪಡೆ
  • ಶ್ರೀಲಂಕಾ ಸೋಲಿನಿಂದ ಇದೀಗ ಪಾಕಿಸ್ತಾನದ ಸೆಮೀಸ್​ ಹಾದಿ ಇನ್ನೂ ಕಠಿಣ
SL vs NZ: ಇಂದು (ಫೆ.25) ಆರ್​. ಪ್ರೇಮಾದಾಸ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್​ ಮತ್ತು ಶ್ರೀಲಂಕಾ ನಡುವಿನ ಸೂಪರ್​-8 ಪಂದ್ಯದಲ್ಲಿ ಕಿವೀಸ್​ ಪಡೆ 61 ರನ್​ಗಳ ಭರ್ಜರಿ ಗೆಲುವು ಸಾಧಿಸಿತು.
ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ, ಕಿವೀಸ್ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಬ್ಯಾಟ್​ ಮಾಡಿದ ನ್ಯೂಜಿಲೆಂಡ್​ 20 ಓವರ್ ಅಂತ್ಯಕ್ಕೆ 7 ವಿಕೆಟ್​ ಕಳೆದಕೊಂಡು 168 ರನ್ ಕಲೆಹಾಕಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾಗೆ ಆರಂಭಿಕ ಹಂತದಲ್ಲಿ ಮಾತ್ರವಲ್ಲ, ಕೊನೆಯವರೆಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಕಮ್ಮಿಂದು ಮೆಂಡಿಸ್​ (23 ಎಸೆತ 31 ರನ್​) ಮತ್ತು ಡುನಿತ್ ವೆಲ್ಲಾಲಗೆ (23 ಎಸೆತ 29 ರನ್​) ಹೊರತುಪಡಿಸಿದರೆ ಇನ್ಯಾರು ಕೂಡ ಉತ್ತಮ ಇನ್ನಿಂಗ್ಸ್​ ನೀಡಲಿಲ್ಲ. ಇದು ತಂಡದ ಸೋಲಿಗೆ ಮುಖ್ಯ ಕಾರಣವಾಯಿತು. ಸ್ಟಾರ್​ ಬ್ಯಾಟರ್​ಗಳ ಮೇಲಿದ್ದ ನಿರೀಕ್ಷೆಗಳು ಇಂದಿನ ಪಂದ್ಯದಲ್ಲಿ ಹುಸಿಯಾಯಿತು. ಇನ್ನು ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಕಿವೀಸ್​ ಪಡೆಗೆ ಸ್ಪಿನ್ನರ್ ರಚಿನ್ ರವೀಂದ್ರ ಅವರ ಬೌಲಿಂಗ್ ಮ್ಯಾಜಿಕ್ ಮಾಡಿತು. ರಚಿನ್​ (4 ವಿಕೆಟ್​), ಮ್ಯಾಟ್​ ಹೆನ್ರಿ (2 ವಿಕೆಟ್​) ಮತ್ತು ಮಿಚೆಲ್​ ಸ್ಯಾಟ್ನರ್​ (1 ವಿಕೆಟ್​) ತಂಡದ ಪರ ಮಿಂಚಿದರು.

ಶ್ರೀಲಂಕಾ ಸೋಲು, ಪಾಕ್​ಗೆ ಆತಂಕ

ಇನ್ನು ಲೆಕ್ಕಾಚಾರದ ಪ್ರಕಾರ, ಇಂದಿನ ಪಂದ್ಯವನ್ನು ಶ್ರೀಲಂಕಾ ಗೆದ್ದಿದ್ದರೆ ಸಿಂಹ ಪಡೆಗೆ ಮತ್ತು ಪಾಕಿಸ್ತಾನ ಎರಡೂ ತಂಡಗಳಿಗೂ ಸೆಮಿಫೈನಲ್​ ಹಾದಿ ಕೊಂಚ ಸುಲಭವಾಗುತ್ತಿತ್ತು. ಇದನ್ನೇ ಪಾಕ್​ ಕೂಡ ಬಯಸಿತ್ತು. ಆದರೆ, ಆ ಲೆಕ್ಕಾಚಾರಗಳಲ್ಲೆವೂ ಉಲ್ಟಾ ಹೊಡೆದಿದೆ. ಸಲ್ಮಾನ್ ಅಲಿ ಅಘಾ ಪಡೆಯ ಸೆಮೀಸ್​ ಕನಸು ಈಗ ಬಹುತೇಕ ಅನುಮಾನವೇ.