ಇಂಗ್ಲೆಂಡ್ ಪ್ರವಾಸದ ಬಳಿಕ ಸೂರ್ಯಕುಮಾರ್ ಟಿ20 ನಾಯಕತ್ವದ ಭವಿಷ್ಯ ನಿರ್ಧಾರ
ನವದೆಹಲಿ: ತವರಿನಲ್ಲೇ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಸತತ 2ನೇ ಟ್ರೋಫಿ ಗೆದ್ದ ಸಾಧನೆಯ ನಡುವೆ ಬ್ಯಾಟಿಂಗ್ನಲ್ಲಿ ಅಸ್ಥಿರ ನಿರ್ವಹಣೆ ತೋರಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ವರೆಗೆ ಅಂದರೆ ಇನ್ನೂ 2 ವರ್ಷಗಳ ಕಾಲ ಅವರನ್ನು ಭಾರತ ಟಿ20 ತಂಡದ ನಾಯಕರಾಗಿ ಮುಂದುವರಿಸಬೇಕೇ, ಬೇಡವೇ ಎಂಬ ಗೊಂದಲಗಳು ಕಾಡುತ್ತಿವೆ. ಜೂನ್-ಜುಲೈನಲ್ಲಿ ಭಾರತ ತಂಡ ಐರ್ಲೆಂಡ್-ಇಂಗ್ಲೆಂಡ್ ಪ್ರವಾಸದಲ್ಲಿ ಟಿ20 ಸರಣಿಗಳನ್ನು ಆಡಿದ ಬಳಿಕ ಆಯ್ಕೆಗಾರರು ಸೂರ್ಯಕುಮಾರ್ ಭವಿಷ್ಯದ ಬಗ್ಗೆ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಯುಕೆ ಪ್ರವಾಸದ ನಿರ್ವಹಣೆಯು ಸೂರ್ಯಕುಮಾರ್ ಭವಿಷ್ಯ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. 2028ರ ಟಿ0 ವಿಶ್ವಕಪ್, ಒಲಿಂಪಿಕ್ಸ್ ಕೂಡ ಒಳಗೊಂಡ ಮುಂದಿನ 2 ವರ್ಷಗಳ ಕಾಲ ಸೂರ್ಯಕುಮಾರ್ರನ್ನು ಮುಂದುವರಿಸಬೇಕೇ ಎಂಬ ಬಗ್ಗೆ ಆಯ್ಕೆಗಾರರು ಚರ್ಚಿಸಲಿದ್ದಾರೆ. 2028ರ ಒಲಿಂಪಿಕ್ಸ್ ವೇಳೆ ಸೂರ್ಯಕುಮಾರ್ಗೆ 38 ವರ್ಷ ವಯಸ್ಸಾಗಿರಲಿದೆ. ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮೊದಲ ಆಯ್ಕೆ ಈಗಲೂ ಸೂರ್ಯಕುಮಾರ್ ಅವರೇ ಆಗಿದ್ದಾರೆ. ಆದರೆ ಅಜಿತ್ ಅಗರ್ಕರ್ ಸಾರಥ್ಯದ ಆಯ್ಕೆ ಸಮಿತಿಯ ಅಭಿಪ್ರಾಯ ಮಹತ್ವದ್ದಾಗಿರಲಿದೆ.
ಸದ್ಯ ಯುಕೆ ಪ್ರವಾಸದವರೆಗೆ ಸೂರ್ಯಕುಮಾರ್ ಪಟ್ಟ ಭದ್ರವಾಗಿದೆ. ಯುಕೆಯಲ್ಲಿ ಸೂರ್ಯ ತೋರುವ ನಿರ್ವಹಣೆ ನಿರ್ಣಾಯಕವಾಗಲಿದೆ. 2025ರಲ್ಲಿ ಸೂರ್ಯಕುಮಾರ್ ಸ್ಟ್ರೈಕ್ರೇಟ್ ಕುಸಿದಿತ್ತು ಮತ್ತು ಒಂದೂ ಅರ್ಧಶತಕ ಬಾರಿಸಿರಲಿಲ್ಲ. ಆದರೆ 2026ರಲ್ಲಿ ಟಿ20 ವಿಶ್ವಕಪ್ಗೆ ಮುನ್ನ ಲಯಕ್ಕೆ ಮರಳಿದ್ದ ಅವರು, 4 ಅರ್ಧಶತಕ ಬಾರಿಸಿದ್ದರು. ಇದರಿಂದ ಅವರ ಸ್ಟ್ರೈಕ್ರೇಟ್ ಕೂಡ ಸುಧಾರಿಸಿತ್ತು. ಬಳಿಕ ಟಿ20 ವಿಶ್ವಕಪ್ನಲ್ಲೂ ಅವರು ಅಮೆರಿಕ ವಿರುದ್ಧದ ಮೊದಲ ಪಂದ್ಯದಲ್ಲಿ ಮಾತ್ರ ಬ್ಯಾಟಿಂಗ್ನಲ್ಲಿ ಮಿಂಚಿದ್ದರು. ಫೈನಲ್ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಪ್ರಮುಖವಾಗಿ ಬಲಿಷ್ಠ ತಂಡಗಳಾದ ದಣ ಆಫ್ರಿಕಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ನ್ಯೂಜಿಲೆಂಡ್ ಎದುರು ಅವರ ಫಾರ್ಮ್ ಕಳವಳಕಾರಿಯಾಗಿತ್ತು.
ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಮಿಂಚುತ್ತಿರುವ 15 ವರ್ಷದ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ ಐರ್ಲೆಂಡ್ ಪ್ರವಾಸದ 2 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಅವರು ಆಡುವ ಅವಕಾಶ ಪಡೆದರೆ, ಭಾರತವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಭಾರತೀಯ ಎನಿಸಲಿದ್ದಾರೆ. ಸದ್ಯ ದಿಗ್ಗಜ ಸಚಿನ್ ತೆಂಡುಲ್ಕರ್ (16 ವರ್ಷ, 205 ದಿನ) ಈ ದಾಖಲೆ ಹೊಂದಿದ್ದಾರೆ. ಐರ್ಲೆಂಡ್ ಪ್ರವಾಸ ತಪ್ಪಿದರೆ, ಜಿಂಬಾಬ್ವೆ ಪ್ರವಾಸ, ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಟಿ20 ಸರಣಿ ಅಥವಾ ಸೆಪ್ಟೆಂಬರ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಾದರೂ ಅವರು ಭಾರತ ಪರ ಆಡುವ ಸಾಧ್ಯತೆಗಳಿವೆ.