ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಿಂದ ಆರು ಆಟಗಾರರು ಹೊರಕ್ಕೆ: ಟೀಮ್ ಇಂಡಿಯಾ ಪ್ರಕಟ, ಸ್ಯಾಮ್ಸನ್ ಕೈಬಿಟ್ಟ ಬಿಸಿಸಿಐ! 
ಕ್ರಿಕೆಟ್

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಿಂದ ಆರು ಆಟಗಾರರು ಹೊರಕ್ಕೆ: ಟೀಮ್ ಇಂಡಿಯಾ ಪ್ರಕಟ, ಸ್ಯಾಮ್ಸನ್ ಕೈಬಿಟ್ಟ ಬಿಸಿಸಿಐ!

ನವದೆಹಲಿ: ಸತತ 3 ಪಂದ್ಯಗಳ ವೈಲ್ಯದ ಬೆನ್ನಲ್ಲೇ ಟಿ20 ವಿಶ್ವಕಪ್ ಹೀರೋ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿದೆ. ಮಾಸಾಂತ್ಯದಲ್ಲಿ ನಿಗದಿಯಾಗಿರುವ ಜಿಂಬಾಬ್ವೆ ಪ್ರವಾಸದ 3 ಪಂದ್ಯಗಳ ಸರಣಿಗೆ ಟಿ20 ತಂಡ ಪ್ರಕಟಿಸಲಾಗಿದ್ದು, ಹಾಲಿ ಇಂಗ್ಲೆಂಡ್ ಪ್ರವಾಸದಲ್ಲಿರುವ ತಂಡದ ಆರು ಆಟಗಾರರನ್ನು ಕೈಬಿಡಲಾಗಿದೆ. ವೇಗಿ ಯಶ್ ಠಾಕೂರ್, ಅಶೋಕ್ ವರ್ಮ ಹೊಸಮುಖ ಎನಿಸಿದ್ದು, 15 ವರ್ಷದ ವೈಭವ್ ಸೂರ್ಯವಂಶಿ ಆರಂಭಿಕನಾಗಿ ಸ್ಥಾನ ಉಳಿಸಿಕೊಂಡಿದ್ದಾರೆ.
ಐರ್ಲೆಂಡ್ ವಿರುದ್ಧ ಸರಣಿಯ ನೀರಸ ಪ್ರದರ್ಶನ ತೋರಿದ 31 ವರ್ಷದ ಸ್ಯಾಮ್ಸನ್ ಬದಲಿಗೆ ಪಂಜಾಬ್‌ನ ಪ್ರಭ್‌ಸಿಮ್ರನ್ ಸಿಂಗ್ ಚೊಚ್ಚಲ ಕರೆ ಪಡೆದಿದ್ದಾರೆ. ಹಾಲಿ ತಂಡದಲ್ಲಿರುವ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಅರ್ಷದೀಪ್, ಹರ್ಷಿತ್ ರಾಣಾ ಹಾಗೂ ಪ್ರಸಿದ್ಧ ಕೃಷ್ಣಗೆ ವಿಶ್ರಾಂತಿ ನೀಡಲಾಗಿದೆ. ಅವರ ಬದಲಿಗೆ ಎಕ್ಸ್‌ಪ್ರೆಸ್ ವೇಗಿ ಮಯಾಂಕ್ ಯಾದವ್ ಜತೆಗೆ ಯಶ್ ಠಾಕೂರ್, ಅಶೋಕ್ ಶರ್ಮ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2024ರ ನಂತರ ಮಯಾಂಕ್ ಮತ್ತೆ ತಂಡಕ್ಕೆ ಮರಳಿದ್ದಾರೆ. ಜುಲೈ 23ಕ್ಕೆ ಜಿಂಬಾಬ್ವೆ ಪ್ರವಾಸ ಆರಂಭವಾಗಲಿದ್ದು, 25, 26ಕ್ಕೆ ಕ್ರಮವಾಗಿ 2 ಮತ್ತು 3ನೇ ಟಿ20 ನಿಗದಿಯಾಗಿದೆ.
ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂಯವಂಶಿ, ಅಭಿಷೇಕ್ ಶರ್ಮ, ತಿಲಕ್ ವರ್ಮ (ಉಪನಾಯಕ), ಇಶಾನ್ ಕಿಶನ್ (ವಿ.ಕೀ), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮ, ಮಯಾಂಕ್ ಯಾದವ್, ಪ್ರಭ್‌ಸಿಮ್ರನ್ ಸಿಂಗ್ (ವಿ.ಕೀ).
ನಿತೀಶ್ ರೆಡ್ಡಿ ಬದಲಿಗೆ ಶಿವಂ ದುಬೆ
ಗಾಯದ ಸಮಸ್ಯೆಯಿಂದ ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿರುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಮತ್ತೊರ್ವ ಆಲ್ರೌಂಡರ್ ಶಿವಂ ದುಬೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹಾಲಿ ಟಿ20 ಸರಣಿಯ ನಂತರ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, 14, 16, 19ಕ್ಕೆ ಕ್ರಮವಾಗಿ ಪಂದ್ಯಗಳು ನಿಗದಿಯಾಗಿವೆ.