ಓವರ್​ಗೆ ಆರು ಸಿಕ್ಸರ್​ ಸಿಡಿಸಿದ ಮೊದಲ ಕ್ರಿಕೆಟಿಗ ಗ್ಯಾರಿ ಸೋಬರ್ಸ್​ ನಿಧನ 
ಕ್ರಿಕೆಟ್

ಓವರ್​ಗೆ ಆರು ಸಿಕ್ಸರ್​ ಸಿಡಿಸಿದ ಮೊದಲ ಕ್ರಿಕೆಟಿಗ ಗ್ಯಾರಿ ಸೋಬರ್ಸ್​ ನಿಧನ

ಬ್ರಿಜ್​ಟೌನ್​: ಕ್ರಿಕೆಟ್​ ಇತಿಹಾಸ ಕಂಡ ಅತ್ಯುತ್ತಮ ಆಲ್ರೌಂಡರ್​ಗಳಲ್ಲಿ ಒಬ್ಬರೆನಿಸಿದ ಮತ್ತು ವೆಸ್ಟ್​ ಇಂಡೀಸ್​ ಮಾಜಿ ನಾಯಕ (Sir Garfield Sobers) ಸರ್​ ಗ್ಯಾರಿ ಸೋಬರ್ಸ್​ (89 ವರ್ಷ) ಶುಕ್ರವಾರ ನಿಧನರಾದರು. ದಿಗ್ಗಜ ಕ್ರಿಕೆಟಿಗ ಬಾರ್ಬಡೋಸ್​ನ ಸ್ವಗೃಹದಲ್ಲಿ ನಿಧನರಾಗಿರುವುದನ್ನು ಅವರ ಪುತ್ರ ಡೇನಿಯಲ್​ ಖಚಿತಪಡಿಸಿದ್ದಾರೆ. ಅವರು 90ನೇ ಜನ್ಮದಿನದಿಂದ ಕೇವಲ 10 ದಿನ ದೂರವಿದ್ದರು. ಆಲ್ರೌಂಡ್​ ಸಾಮರ್ಥ್ಯದಿಂದಾಗಿ ಅವರು ಕ್ರಿಕೆಟ್​ ಇತಿಹಾಸದ ದಿಗ್ಗಜರೆನಿಸಿದ್ದರು.
ಎಡಗೈ ಮಧ್ಯಮ ವೇಗದ ಬೌಲರ್​ ಮತ್ತು ಎಡಗೈ ಬ್ಯಾಟರ್​ ಆಗಿದ್ದ ಗ್ಯಾರಿ ಸೋಬರ್ಸ್​ 1954ರಿಂದ 1974 ನಡುವೆ ವಿಂಡೀಸ್​ ಪರ 93 ಟೆಸ್ಟ್​ಗಳಲ್ಲಿ 57.78ರ ಸರಾಸರಿಯಲ್ಲಿ 26 ಶತಕ ಮತ್ತು 30 ಅರ್ಧಶತಕಗಳ ಸಹಿತ 8,032 ರನ್​ ಮತ್ತು 235 ವಿಕೆಟ್​ ಗಳಿಸಿದ್ದರು. 6 ಬಾರಿ 5 ವಿಕೆಟ್​ ಗೊಂಚಲು ಕಬಸಿದ್ದರು. ಏಕಮಾತ್ರ ಏಕದಿನ ಪಂದ್ಯ ಆಡಿದ್ದ ಅವರು ಒಂದೂ ರನ್​ ಗಳಿಸದೆ, 1 ವಿಕೆಟ್​ ಮಾತ್ರ ಗಳಿಸಿದ್ದರು. ಅವರು ಅತ್ಯುತ್ತಮ ಫೀಲ್ಡರ್​ ಕೂಡ ಆಗಿದ್ದರು. ಜತೆಗೆ ಆಗಾಗ ಸ್ಪಿನ್​ ಬೌಲಿಂಗ್​ ಕೂಡ ಮಾಡುತ್ತಿದ್ದರು.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 383 ಪಂದ್ಯ ಆಡಿದ್ದ ಅವರು, 86 ಶತಕಗಳ ಸಹಿತ 28,314 ರನ್​ ಬಾರಿಸಿದ್ದರು ಮತ್ತು 1,043 ವಿಕೆಟ್​ ಕಬಳಿಸಿದ್ದರು. 95 ಲಿಸ್ಟ್​ ಎ ಪಂದ್ಯಗಳಲ್ಲಿ 2,721 ರನ್​ ಮತ್ತು 109 ವಿಕೆಟ್​ ಗಳಿಸಿದ್ದರು. ಐಸಿಸಿ ತನ್ನ ವಾರ್ಷಿಕ ಪ್ರಶಸ್ತಿಯಲ್ಲಿ ಎಲ್ಲ ಕ್ರಿಕೆಟ್​ ಪ್ರಕಾರದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ವರ್ಷದ ಕ್ರಿಕೆಟಿಗನಿಗೆ ಗ್ಯಾರಿ ಸೋಬರ್ಸ್​ ಹೆಸರಿನಲ್ಲೇ ಪ್ರಶಸ್ತಿ ನೀಡುತ್ತದೆ. ಕ್ರಿಕೆಟ್​ ಸಾಧನೆಗಾಗಿ ಅವರಿಗೆ 1975ರಲ್ಲಿ ಬ್ರಿಟನ್​ನ ಪ್ರತಿಷ್ಠಿತ ನೈಟ್​ಹುಡ್​ ಪ್ರಶಸ್ತಿ ನೀಡಲಾಗಿತ್ತು. ಸೋಬರ್ಸ್​ 39 ಟೆಸ್ಟ್​ಗಳಲ್ಲಿ ವಿಂಡೀಸ್​ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದು, 9 ಜಯ, 10 ಸೋಲು, 20 ಡ್ರಾ ಕಂಡಿದ್ದರು.
ಟೆಸ್ಟ್​ನಲ್ಲಿ 36 ವರ್ಷ ಕಾಲ ಸರ್ವಾಧಿಕ ರನ್​ ಸ್ಕೋರರ್​
ಗ್ಯಾರಿ ಸೋಬರ್ಸ್​ 1958ರಲ್ಲಿ ಕಿಂಗ್ಸ್​ಟನ್​ನಲ್ಲಿ ಪಾಕಿಸ್ತಾನ ವಿರುದ್ಧ ಸಿಡಿಸಿದ ತನ್ನ ಚೊಚ್ಚಲ ಶತಕವನ್ನು ತ್ರಿಶತಕವನ್ನಾಗಿ ಪರಿವರ್ತಿಸಿದ್ದರು. 23ನೇ ವಯಸ್ಸಿನಲ್ಲೇ ಅಜೇಯ 365 ರನ್​ ಸಿಡಿಸುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ಸಿಡಿಸಿದ ಇಂಗ್ಲೆಂಡ್​ನ ಲೆನ್​ ಹಟನ್​ ಅವರ 364 ರನ್​ ಆಗಿನ ವಿಶ್ವದಾಖಲೆಯನ್ನು ಮುರಿದಿದ್ದರು. ಬಳಿಕ 1994ರಲ್ಲಿ ವಿಂಡೀಸ್​ನವರೇ ಆದ ಬ್ರಿಯಾನ್​ ಲಾರಾ ಇದನ್ನು ಮೀರಿಸುವವರೆಗೆ 36 ವರ್ಷಗಳ ಕಾಲ ಈ ವಿಶ್ವದಾಖಲೆ ಅವರ ಹೆಸರಿನಲ್ಲೇ ಇತ್ತು.
ಮೊದಲ ಸಿಕ್ಸ್​ ಸಿಕ್ಸರ್​ ಸಾಧಕ
ಗ್ಯಾರಿ ಸೋಬರ್ಸ್​ ಕ್ರಿಕೆಟ್​ನಲ್ಲಿ ಓವರ್​ ಒಂದರ ಎಲ್ಲ 6 ಎಸೆತಗಳಲ್ಲಿ ಸಿಕ್ಸರ್​ ಸಿಡಿಸಿದ ವಿಶ್ವದ ಮೊದಲ ಸಾಧಕ ಎನಿಸಿದ್ದರು. 1968ರಲ್ಲಿ ಗ್ಲಾಮರ್​ಗನ್​ ಬೌಲರ್​ ಮಾಲ್ಕಂ ನ್ಯಾಶ್​ ವಿರುದ್ಧ ನಾಟಿಂಗ್​ಹ್ಯಾಂಶೈರ್​ ಪರ ಪ್ರಥಮ ದರ್ಜೆ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದರು. ಅವರು 1952&53ರಲ್ಲಿ 16ನೇ ವಯಸ್ಸಿನಲ್ಲೇ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಮರು ವರ್ಷವೇ ಟೆಸ್ಟ್​ ಕ್ರಿಕೆಟ್​ಗೂ ಪ್ರವೇಶ ಪಡೆದಿದ್ದರು. ಆರಂಭದಲ್ಲಿ ಬೌಲರ್​ ಆಗಿದ್ದ ಅವರು, 23ನೇ ವಯಸ್ಸಿನಲ್ಲಿ ಚೊಚ್ಚಲ ಟೆಸ್ಟ್​ ಶತಕ ಸಿಡಿಸಿದ ಬಳಿಕ ಆಲ್ರೌಂಡರ್​ ಆಗಿ ರೂಪುಗೊಂಡಿದ್ದರು.
ಭಾರತ ವಿರುದ್ಧವೂ ಬಲಿಷ್ಠ ದಾಖಲೆ
ಗ್ಯಾರಿ ಸೋಬರ್ಸ್​ ಭಾರತ ವಿರುದ್ಧ ಆಡಿದ 18 ಟೆಸ್ಟ್​ಗಳಲ್ಲಿ 8 ಶತಕಗಳ ಸಹಿತ 1,920 ರನ್​ ಮತ್ತು 42 ವಿಕೆಟ್​ ಕಬಳಿಸಿದ ಬಲಿಷ್ಠ ದಾಖಲೆ ಹೊಂದಿದ್ದರು. 1958-59ರ ಭಾರತ ಪ್ರವಾಸದಲ್ಲಿ ಸುಭಾಷ್​ ಗುಪ್ತೆ ಸಹಿತ ಭಾರತೀಯ ಸ್ಪಿನ್ನರ್​ಗಳ ವಿರುದ್ಧ ಪ್ರಾಬಲ್ಯ ಸಾಧಿಸಿ 3 ಶತಕ ಸಿಡಿಸಿದ್ದರು. ಕಾನ್ಪುರದಲ್ಲಿ 198 ರನ್​ ಸಿಡಿಸಿದ್ದು ಭಾರತ ವಿರುದ್ಧ ಗರಿಷ್ಠ ಗಳಿಕೆಯಾಗಿತ್ತು. 1962ರಲ್ಲಿ ಕಿಂಗ್ಸ್​ಟನ್​ನಲ್ಲಿ 63 ರನ್​ಗಳಿಗೆ 5 ವಿಕೆಟ್​ ಕಬಳಿಸಿದ್ದು ಭಾರತದ ವಿರುದ್ಧ ಅತ್ಯುತ್ತಮ ಬೌಲಿಂಗ್​ ನಿರ್ವಹಣೆಯಾಗಿತ್ತು.
*ಶ್ರೇಷ್ಠ ಇನಿಂಗ್ಸ್​ ಒಂದು ಕೊನೆಗೊಂಡಿದೆ. ಸರ್​ ಗ್ಯಾರಿ ಸೋಬರ್ಸ್​ ನಮ್ಮ ಹೃದಯದಲ್ಲಿ ಎಂದೆಂದಿಗೂ ಉಳಿದುಕೊಳ್ಳಲಿದ್ದಾರೆ.
| ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿ
*ಗ್ಯಾರಿ ಸೋಬರ್ಸ್​ ಕ್ರಿಕೆಟ್​ ಆಟದ ನಿಜವಾದ ಐಕಾನ್​. ಕ್ರಿಕೆಟ್​ ಕಂಡ ಅತ್ಯುತ್ತಮ ಆಲ್ರೌಂಡರ್​ಗಳಲ್ಲಿ ಒಬ್ಬರು. ಜಾಗತಿಕ ಕ್ರಿಕೆಟ್​ಗೆ ಅವರ ಕೊಡುಗೆ ಅಪಾರ.
| ಬಿಸಿಸಿಐ
*ನಾನು ಬೌಲಿಂಗ್​ ಮಾಡಿದ ಶ್ರೇಷ್ಠ ಬ್ಯಾಟರ್​ ಸೋಬರ್ಸ್​. ನನ್ನ ಎಲ್ಲ ವೈವಿಧ್ಯಮಯ ಎಸೆತಗಳನ್ನು ಗ್ರಹಿಸುತ್ತಿದ್ದರು ಮತ್ತು ಅತ್ಯಂತ ಆಕ್ರಮಣಕಾರಿಯಾಗಿದ್ದರು.
| ಬಿಎಸ್​ ಚಂದ್ರಶೇಖರ್​, ಮಾಜಿ ಸ್ಪಿನ್ನರ್​
*ಇದು ಕ್ರಿಕೆಟ್​ಗೆ ಅತ್ಯಂತ ಬೇಸರದ ದಿನ. ಸೋಬರ್ಸ್​ ಅವರಂಥ ಗುಣಮಟ್ಟ ಬೇರೆ ಯಾವ ಆಲ್ರೌಂಡರ್​ಗಳಲ್ಲೂ ಇಲ್ಲ. ಅವರ ಎದುರು ಆಡಿರುವುದು ನನ್ನ ಅದೃಷ್ಟ.
| ಜಿಆರ್​ ವಿಶ್ವನಾಥ್​, ಮಾಜಿ ಬ್ಯಾಟರ್​