ಟೀಮ್​ ಇಂಡಿಯಾ ನಾಯಕ ಶುಭಮಾನ್​ ಗಿಲ್ 
ಕ್ರಿಕೆಟ್

ಇಂದೋರ್​ ಘಟನೆಗೆ ಹೆದರಿ 3 ಲಕ್ಷದ ವಾಟರ್ ಪ್ಯೂರಿಫೈಯರ್ ಖರೀದಿಸಿದ ಶುಭಮಾನ್​ ಗಿಲ್​! Shubman Gill

ಪ್ರಮುಖ ಮುಖ್ಯಾಂಶಗಳು

  • ಭಾರತ ಮತ್ತು ಪ್ರವಾಸಿ ನ್ಯೂಜಿಲೆಂಡ್​ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿ
  • ಒಂದೊಂದು ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಸಮಬಲ ಕಾಯ್ದುಕೊಂಡ ಉಭಯ ತಂಡ
  • ಮಧ್ಯಪ್ರದೇಶದ ಇಂದೋರ್​ನಲ್ಲಿ ಜ.18ರಂದು ನಡೆಯುವ ಪಂದ್ಯ ಸರಣಿ ಗೆಲುವನ್ನು ನಿರ್ಣಯಿಸಲಿದೆ
Shubman Gill ​: ಆತಿಥೇಯ ಭಾರತ ಮತ್ತು ಪ್ರವಾಸಿ ನ್ಯೂಜಿಲೆಂಡ್​ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಸಮಬಲ ಕಾಯ್ದುಕೊಂಡಿದೆ. ಇನ್ನೊಂದು ಪಂದ್ಯ ಬಾಕಿ ಇದೆ. ಮಧ್ಯಪ್ರದೇಶದ ಇಂದೋರ್​ನಲ್ಲಿ ಜ.18ರಂದು ನಡೆಯುವ ಪಂದ್ಯ ಸರಣಿ ಗೆಲುವನ್ನು ನಿರ್ಣಯಿಸಲಿದೆ. ಈಗಾಗಲೇ ಟೀಮ್​ ಇಂಡಿಯಾ ಇಂದೋರ್​ನಲ್ಲಿ ಬೀಡುಬಿಟ್ಟಿದ್ದು, ಅಭ್ಯಾಸದಲ್ಲಿ ಬಿಜಿಯಾಗಿದೆ.
ಇನ್ನು ಇಂದೋರ್​ನಲ್ಲಿ ಈ ಪಂದ್ಯ ನಡೆಯುತ್ತಿರುವುದರಿಂದ ಟೀಮ್​ ಇಂಡಿಯಾದ ಆರೋಗ್ಯದ ಬಗ್ಗೆ ಬಿಸಿಸಿಐ ವಿಶೇಷ ಕಾಳಜಿ ವಹಿಸಿದೆ. ಇಂದೋರ್​, ಭಾರತದ ಅತ್ಯಂತ ಶುದ್ಧವಾದ ನಗರ ಎಂಬುದು ನಿಮಗೆ ಗೊತ್ತಿದೆ. ಆದರೆ, ಇತ್ತೀಚೆಗೆ ಕಲುಷಿತ ನೀರಿನ ವಿಚಾರಕ್ಕೆ ಇಂದೋರ್​ ದೇಶಾದ್ಯಂತ ಟೀಕೆಗೆ ಗುರಿಯಾಗಿದೆ. ಈಗಾಗಲೇ ಮಕ್ಕಳು ಸೇರಿದಂತೆ ಅನೇಕ ಸಾವುಗಳು ಕಲುಷಿತ ನೀರಿನ ಕಾರಣಕ್ಕೆ ಸಂಭವಿಸಿವೆ. ಇದರ ಪರಿಣಾಮ ಟೀಮ್​ ಇಂಡಿಯಾ ಮೇಲೂ ಆಗಬಾರದು ಅಂತ ಬಿಸಿಸಿಐ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದೆ.
ಸದ್ಯ ಟೀಮ್​ ಇಂಡಿಯಾ ಇಂದೋರ್​ನ ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ಉಳಿದುಕೊಂಡಿದೆ. ಹೋಟೆಲ್​ ಮೂಲಗಳ ಪ್ರಕಾರ, ಟೀಮ್​ ಇಂಡಿಯಾ ನಾಯಕ ಶುಭಮಾನ್​ ಗಿಲ್,​ 3 ಲಕ್ಷ ರೂ. ಮೌಲ್ಯದ ನೀರು ಶುದ್ಧೀಕರಣ (ವಾಟರ್​ ಪ್ಯೂರಿಫಿಕೇಶನ್​) ಯಂತ್ರವನ್ನು ಹೋಟೆಲ್​ನಲ್ಲಿ ತಮ್ಮ ರೂಮಿನಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ. ಈ ಯಂತ್ರ ರಿವರ್ಸ್ ಆಸ್ಮೋಸಿಸ್ ಪ್ರಕ್ರಿಯೆ ಮೇಲೆ ಶುದ್ಧೀಕರಿಸಿದ ಹಾಗೂ ಪ್ಯಾಕೇಜ್​ ಬಾಟಲ್​ ನೀರನ್ನು ಸಹ ಶುದ್ಧೀಕರಣ ಮಾಡುವ ಸಾಮರ್ಥ್ಯವನ್ನು ಹೊಂದಿದೆಯಂತೆ. ಹೋಟೆಲ್​ನ ತನ್ನ ವೈಯಕ್ತಿಕ ಕೋಣೆಯಲ್ಲಿ ಗಿಲ್​, ಈ ಯಂತ್ರವನ್ನು ಅಳವಡಿಸಿಕೊಂಡಿದ್ದಾರೆ. 
ಆದರೆ, ತಂಡದ ಮಾಧ್ಯಮ ವ್ಯವಸ್ಥಾಪಕರು ಈ ಬೆಳವಣಿಗೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇಂದೋರ್‌ನಲ್ಲಿ ಇತ್ತೀಚೆಗೆ ಕಲುಷಿತ ನೀರಿನಿಂದ ಉಂಟಾದ ಸಾವುಗಳ ಪರಿಣಾಮದಿಂದ ವಾರ್​ ಪ್ಯೂರಿಫೈ ಅಳವಡಿಸಿದ್ದಾರಾ? ಅಥವಾ ಸಹಜವಾಗಿ ನಡೆಯುವ ವೈಯಕ್ತಿಕ ಸುರಕ್ಷತಾ ಪ್ರೋಟೋಕಾಲ್‌ನ ಭಾಗವಾಗಿದೆಯೇ? ಎಂಬುದನ್ನು ಸ್ಪಷ್ಟಪಡಿಸಲಿಲ್ಲ ಎಂದು ಎನ್​ಡಿಟಿವಿ ವರದಿ ಮಾಡಿದೆ. ಒಟ್ಟಿನಲ್ಲಿ ಶುಭಮಾನ್​ ಗಿಲ್​ ಪ್ಯೂರಿಫೈ ಅಳವಡಿಸಿರುವುದು ಇಂದೋರ್​ ಕಲುಷಿತ ನೀರಿನ ಪ್ರಕರಣಕ್ಕೆ ಸಂಬಂಧಿಸಿದೆ ಎಂಬ ಮಾತಿದೆ. 
ಇನ್ನು ಆಟಗಾರರು ತಮ್ಮ ಆರೋಗ್ಯದ ಮೇಲೆ ತುಂಬಾ ಕಾಳಜಿ ವಹಿಸುವುದು ಹೊಸದೇನಲ್ಲ. ಟೀಮ್​ ಇಂಡಿಯಾ ಸೂಪರ್​ ಸ್ಟಾರ್​ ವಿರಾಟ್​ ಕೊಹ್ಲಿ ಅವರು ಆರೋಗ್ಯದ ಮೇಲೆ ವಿಶೇಷ ಕಾಳಜಿ ವಹಿಸುತ್ತಾರೆ. ಕೊಹ್ಲಿ, ತಮ್ಮ ದೇಹವನ್ನು ಸದಾ ಹೈಡ್ರೇಟ್​ ಆಗಿ ಇಟ್ಟುಕೊಳ್ಳಲು ಫ್ರಾನ್ಸ್​ನಿಂದ ಆಮದು ಮಾಡಿಕೊಳ್ಳುವ ಇವಿಯನ್​ ನ್ಯಾಚುರಲ್​ ಸ್ಪ್ರಿಂಗ್​ ವಾಟರ್​ ಕುಡಿಯುತ್ತಾರೆ.
ಇಂದೋರ್‌ನ ಭಾಗೀರಥಪುರ ಪ್ರದೇಶದಲ್ಲಿ, ಕಲುಷಿತ ನೀರು ಸೇವನೆ ಮಾಡಿ ಇಲ್ಲಿಯವರೆಗೆ 23 ಜೀವಗಳು ಬಲಿಯಾಗಿವೆ. ಕೇವಲ 15 ಜನರು ಮಾತ್ರ ಮೃತಪಟ್ಟಿದ್ದಾರೆ ಅಂತಾ ಹೈಕೋರ್ಟ್‌ಗೆ ಸರ್ಕಾರ ಹೇಳಿದೆ. ಆದರೆ, ಅದೇ ಸರ್ಕಾರ 21 ಕುಟುಂಬಗಳಿಗೆ ಪರಿಹಾರ ನೀಡಿದೆ. ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಆರೋಪ ಇದೆ. ಸದ್ಯ ಮಧ್ಯಪ್ರದೇಶದಲ್ಲಿ ಕಲುಷಿತ ನೀರು ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಇದರ ನಡುವೆ ಟೀಮ್​ ಇಂಡಿಯಾ ಆಟಗಾರರು ಕೂಡ ತಮ್ಮ ಆರೋಗ್ಯದ ಬಗ್ಗೆ ಭಾರಿ ಕಾಳಜಿ ವಹಿಸಿದ್ದಾರೆ, (ಏಜೆನ್ಸೀಸ್​).