ಟಿ20 ಸರಣಿ ಕ್ಲೀನ್​ಸ್ವೀಪ್ ತವಕದಲ್ಲಿ ಶ್ರೇಯಸ್ ಪಡೆ: ನಾಳೆ ಮೂರನೇ ಹಾಗೂ ಅಂತಿಮ ಪಂದ್ಯ  
ಕ್ರಿಕೆಟ್

ಟಿ20 ಸರಣಿ ಕ್ಲೀನ್​ಸ್ವೀಪ್ ತವಕದಲ್ಲಿ ಶ್ರೇಯಸ್ ಪಡೆ: ನಾಳೆ ಮೂರನೇ ಹಾಗೂ ಅಂತಿಮ ಪಂದ್ಯ

ಹರಾರೆ: ಟಿ20 ಹಾಲಿ ವಿಶ್ವ ಚಾಂಪಿಯನ್ ಭಾರತ ತಂಡ ನೂತನ ನಾಯಕ ಶ್ರೇಯಸ್ ಅಯ್ಯರ್ ಸಾರಥ್ಯದಲ್ಲಿ ಮೊದಲ ಚುಟುಕು ಸರಣಿ ಜಯಿಸಿದೆ. ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ (81* ರನ್, 44 ಎಸೆತ, 9 ಬೌಂಡರಿ, 2 ಸಿಕ್ಸರ್) ಬಿರುಸಿನಾಟದ ಜತೆಗೆ ಉಪನಾಯಕ ತಿಲಕ್ ವರ್ಮ (60* ರನ್, 29 ಎಸೆತ, 5 ಬೌಂಡರಿ, 3 ಸಿಕ್ಸರ್) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ಎದುರು 90 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 2-0ಯಿಂದ ಮೇಲುಗೈ ಸಾಧಿಸಿದ್ದು, ಮೂರನೇ ಹಾಗೂ ಅಂತಿಮ ಪಂದ್ಯ ಭಾನುವಾರ ಹರಾರೆಯಲ್ಲಿ ನಡೆಯಲಿದೆ.
ಸತತ ಏಳು ಪಂದ್ಯಗಳ ಬಳಿಕ ಗೆಲುವಿನ ಹಾದಿಗೆ ಮರಳಿರುವ ಟಿ20 ವಿಶ್ವ ಚಾಂಪಿಯನ್ ಭಾರತ ತಂಡ ಸರಣಿ
ಕ್ಲೀನ್‌ಸ್ವೀಪ್‌ನ ತವಕದಲ್ಲಿದ್ದು, ಸತತ ಎರಡು ದಿನ ಎರಡು ಪಂದ್ಯಗಳನ್ನು ಆಡುವ ಸವಾಲು ಹೊಂದಿದೆ. ಜಿಂಬಾಬ್ವೆ ತಂಡದ ವಿರುದ್ಧದ ಗೆಲುವು ಸಾಧನೆ ಎನಿಸದಿದ್ದರೂ, ಯುಕೆ ಪ್ರವಾಸದ ಸತತ ಎರಡು ಸರಣಿ ಸೋತಿರುವ ನಾಯಕ ಶ್ರೇಯಸ್ ಪಾಲಿಗೆ ಮಹತ್ವದಾಗಿದೆ.
ಇಂಗ್ಲೆಂಡ್‌ನಲ್ಲಿ ಶಾರ್ಟ್‌ಬಾಲ್ ಎದುರಿಸುವಲ್ಲಿ ಸಮಸ್ಯೆ ಎದುರಿಸಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಜಿಂಬಾಬ್ವೆಯಲ್ಲಿ ಸುಧಾರಣೆ ಕಂಡಿದ್ದಾರೆ. 6 ಅಡಿ 8 ಇಂಚು ಎತ್ತರದ ಬ್ಲೆಸಿಂಗ್ ಮುಜರಬಾನಿ ಹಾಗೂ ವೈಭವ್ ನಡುವಿನ ಪೈಪೋಟಿ ಕುತೂಹಲ ಎನಿಸಿದೆ. ಎರಡು ವರ್ಷಗಳ ಹಿಂದೆ ಹರಾರೆಯಲ್ಲಿ ಚೊಚ್ಚಲ ಟಿ20 ಶತಕಗಳಿಸಿದ್ದ ಅಭಿಷೇಕ್ ಶರ್ಮ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.
ಜಿಂಬಾಬ್ವೆಯ ಪರಿಸ್ಥಿತಿಯನ್ನು ಉತ್ತಮವಾಗಿ ಅರಿತುಕೊಂಡಿರುವ ಯುವ ಪಡೆಯ ವೇಗಿಗಳ ಪ್ರದರ್ಶನ ಬೌಲಿಂಗ್ ಗಮನ ಸೆಳೆದಿದೆ. ಎರಡು ವರ್ಷಗಳ ನಂತರ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಮಯಾಂಕ್ ಯಾದವ್ ವೇಗ ಮತ್ತು ನಿಖರತೆಯಿಂದ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಪ್ರಿನ್ಸ್ ಯಾದವ್ ಪರಿಣಾಮಕಾರಿ ಎನಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಜಿಂಬಾಬ್ವೆ ತಂಡವನ್ನು ಭಾರತ ಹಗುರವಾಗಿ ಪರಿಗಣಿಸುವಂತಿಲ್ಲ. ಪವರ್ ಪ್ಲೇಯಲ್ಲಿ 4 ವಿಕೆಟ್ ಕಳೆದುಕೊಂಡರೂ, ಮೊದಲ ಪಂದ್ಯದಲ್ಲಿ 125 ರನ್‌ಗಳಿಸುವಲ್ಲಿ ಸಲತೆ ಕಂಡಿತ್ತು. ಹರಾರೆಯಲ್ಲಿ ಇದುವರೆಗೆ 14 ಪಂದ್ಯಗಳನ್ನಾಡಿರುವ ಭಾರತ ಮೂರರಲ್ಲಿ ಮಾತ್ರ ಸೋತಿದೆ.
ಆರಂಭ: ಸಂಜೆ 4.30
ನೇರಪ್ರಸಾರ: ಯುನೈಟ್8 ಸ್ಪೋರ್ಟ್ಸ್.