PBKS vs LSG 
ಕ್ರಿಕೆಟ್

ಶ್ರೇಯಸ್​ ಪಡೆಯ ಅಜೇಯ ಓಟ; ಲಖನೌ ವಿರುದ್ಧ ಪಂಜಾಬ್ ಕಿಂಗ್ಸ್​ಗೆ 54 ರನ್‌ಗಳ ಭರ್ಜರಿ ಜಯ! | PBKS vs LSG

PBKS vs LSG: ಈ ಆವೃತಿಯ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡ ತನ್ನ ಅಧಿಪತ್ಯವನ್ನು ಮುಂದುವರಿಸಿದ್ದು, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಹೊಸ ರೂಪ ಪಡೆದಿರುವ ಪಂಜಾಬ್ ತಂಡ, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡುವ ಮೂಲಕ 54 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಈ ಋತುವಿನಲ್ಲಿ ಸೋಲಿಲ್ಲದ ಸರದಾರನಾಗಿ ಅಜೇಯ ಓಟವನ್ನು ಮುಂದುವರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 254 ರನ್​ಗಳ ಬೃಹತ್​ ಮೊತ್ತ ಕಲೆಹಾಕಿತು, ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್ ತಂಡ ಆರಂಭದಿಂದಲೇ ಒತ್ತಡಕ್ಕೆ ಸಿಲುಕಿತು. ತಂಡದ ಪರ ಮಿಚೆಲ್ ಮಾರ್ಷ್ (40), ನಾಯಕ ರಿಷಭ್ ಪಂತ್ (43) ಮತ್ತು ಏಡನ್ ಮಾರ್ಕ್ರಾಮ್ (42) ಜವಾಬ್ದಾರಿಯುತ ಆಟವಾಡಿದರೂ, ರನ್ ರೇಟ್ ಏರುತ್ತಲೇ ಹೋದ ಕಾರಣ ಗೆಲುವು ಅಸಾಧ್ಯವಾಯಿತು. ಪಂಜಾಬ್‌ನ ಶಿಸ್ತಿನ ಬೌಲಿಂಗ್ ಮುಂದೆ ಲಕ್ನೋ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಪಂಜಾಬ್​ ಪರ ಮಾರ್ಕೋ ಮಾರ್ಕೋ ಯಾನ್ಸನ್ 2 ವಿಕೆಟ್​ ಪಡೆದು ಮಿಂಚಿದರು.

ಪಂಜಾಬ್​ ಇನ್ನಿಂಗ್ಸ್

ಟಾಸ್​ ಗೆದ್ದ ಲಖನೌ ತಂಡದ ನಾಯಕ ರಿಷಭ್ ಪಂತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ನಾಯಕನ ನಿರ್ಧಾರವನ್ನು ಸರಿ ಎಂದು ಸಾಬೀತುಪಡಿಸಿದ ಅನುಭವಿ ವೇಗಿ ಮೊಹಮ್ಮದ್ ಶಮಿ, ಪಂದ್ಯದ ಮೊದಲ ಓವರ್‌ನ ಮೂರನೇ ಎಸೆತದಲ್ಲೇ ಅಪಾಯಕಾರಿ ಪ್ರಭ್‌ಸಿಮ್ರಾನ್ ಸಿಂಗ್​ರನ್ನು ಪೆವಿಲಿಯನ್‌ಗೆ ಅಟ್ಟಿದರು. ಈ ಆರಂಭಿಕ ಆಘಾತದಿಂದ ಪಂಜಾಬ್ ಸಂಕಷ್ಟಕ್ಕೆ ಸಿಲುಕಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ನಂತರ ಕ್ರೀಸ್‌ಗೆ ಬಂದ ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕೊನೊಲಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು.
ಲಖನೌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕೊನೊಲಿ ಕೇವಲ 80 ಎಸೆತಗಳಲ್ಲಿ 182 ರನ್‌ಗಳ ದಾಖಲೆಯ ಜೊತೆಯಾಟವಾಡಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಈ ಜೋಡಿ ಲಖನೌ ಬೌಲಿಂಗ್ ಪಡೆಯನ್ನು ಅಕ್ಷರಶಃ ಹೈರಾಣಾಗಿಸಿತು. ಅತ್ಯಂತ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಪ್ರಿಯಾಂಶ್ ಆರ್ಯ ಕೇವಲ 37 ಎಸೆತಗಳಲ್ಲಿ 93 ರನ್ ಸಿಡಿಸಿದರು. ಇವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 4 ಆಕರ್ಷಕ ಬೌಂಡರಿ ಹಾಗೂ ಭರ್ಜರಿ 9 ಸಿಕ್ಸರ್‌ಗಳು ಸೇರಿದ್ದವು. ಪ್ರಿಯಾಂಶ್‌ಗೆ ತಕ್ಕ ಸಾಥ್ ನೀಡಿದ ಕೂಪರ್ ಕೊನೊಲಿ, ತಾನೇನು ಕಮ್ಮಿ ಇಲ್ಲ ಎನ್ನುವ ರೀತಿಯಲ್ಲಿ 46 ಎಸೆತಗಳಲ್ಲಿ 87 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು.
ಶಮಿ ಆರಂಭಿಕ ಯಶಸ್ಸು ನೀಡಿದರೂ, ನಂತರದ ಓವರ್‌ಗಳಲ್ಲಿ ರನ್ ವೇಗಕ್ಕೆ ಕಡಿವಾಣ ಹಾಕಲು ಲಕ್ನೋ ಬೌಲರ್‌ಗಳು ವಿಫಲರಾದರು. ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 254 ರನ್‌ಗಳ ಶಿಖರವನ್ನೇ ನಿರ್ಮಿಸಿತು. ಯುವ ವೇಗಿ ಪ್ರಿನ್ಸ್ ಯಾದವ್​ ತಮ್ಮ ನಾಲ್ಕು ಓವರ್​ಗಳಲ್ಲಿ ಕೇವಲ 25 ರನ್​ ನೀಡಿ ಎರಡು ನಿರ್ಣಾಯಕ ವಿಕೆಟ್​ ಪಡೆದರು(ಏಜೆನ್ಸೀಸ್​).