ನೆಟ್ಟಿಗರ ಟೀಕೆಗೆ ಶ್ರೇಯಸ್ ಅಯ್ಯರ್ ಸಹೋದರಿ ಖಡಕ್ ತಿರುಗೇಟು
- ಟಿ20 ತಂಡದ ಕ್ಯಾಪ್ಟನ್ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಶ್ರೇಯಸ್ ಅಯ್ಯರ್ಗೆ ಸತತ ಸೋಲಿನ ರುಚಿ
- ಶ್ರೇಯಸ್ ವಿರುದ್ಧ ಕ್ರಿಕೆಟ್ ಪ್ರೇಮಿಗಳಿಂದ ಟೀಕೆಗಳ ಸುರಿಮಳೆ
- ಅಣ್ಣನ ವಿರುದ್ಧ ಬೇಕಾಬಿಟ್ಟಿ ಮಾತಾಡಿದವರಿಗೆ ಸಹೋದರಿ ಶ್ರೇಷ್ಠಾ ಕ್ಲಾಸ್
Shreyas Iyer: ಟೀಮ್ ಇಂಡಿಯಾದ ಟಿ20 ತಂಡದ ನಾಯಕನಾಗಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಯ ಟಿ20 ಪಂದ್ಯಗಳಲ್ಲಿ ಭಾರಿ ಮುಖಭಂಗ ಉಂಟಾಗಿದೆ. ಐರಿಶ್ ಪಡೆ ಎದುರು ಎರಡೂ ಪಂದ್ಯಗಳನ್ನು ಹೀನಾಯವಾಗಿ ಸೋತ ಭಾರತ, ಈಗ ಇಂಗ್ಲೆಂಡ್ ವಿರುದ್ಧವೂ ಅದೇ ಕಳಪೆ ಪ್ರದರ್ಶನವನ್ನು ಮುಂದುವರಿಸಿರುವುದು ಸದ್ಯ ಅಯ್ಯರ್ ನಾಯಕತ್ವವನ್ನು ಟೀಕಿಸಿ, ಪ್ರಶ್ನಿಸುವಂತೆ ಮಾಡಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಎರಡೂ ಪಂದ್ಯಗಳನ್ನು ಸೋತಿರುವ ಶ್ರೇಯಸ್ ಪಡೆ, ಐರ್ಲೆಂಡ್ನಲ್ಲಿ ತೋರಿದ ಕಳಪೆ ಪ್ರದರ್ಶನವನ್ನೇ ಆಂಗ್ಲರ ಮಣ್ಣಿನಲ್ಲಿ ಮುಂದುವರಿಸಿರುವುದು ಟೀಕೆಗಳ ಸುರಿಮಳೆಗೆ ಕಾರಣವಾಗಿದೆ. ಮಳೆಯಿಂದಾಗಿ ಒಂದು ಪಂದ್ಯ ರದ್ದಾಗಿದ್ದು, ಉಳಿದ ಎರಡೂ ಪಂದ್ಯಗಳಲ್ಲಿ ಭಾರತ ತಂಡ ಸೋತಿದೆ. ಇದೇ ಕಾರಣವನ್ನು ಮುಂದಿಟ್ಟು ಸದ್ಯ ಕ್ರಿಕೆಟ್ ಪ್ರೇಮಿಗಳು ಮತ್ತು ನೆಟ್ಟಿಗರು ಶ್ರೇಯಸ್ ಕ್ಯಾಪ್ಟನ್ಸಿ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.
ಈ ಸಂದರ್ಭದಲ್ಲಿ, ತಮ್ಮ ಅಣ್ಣನ ಪರ ಬ್ಯಾಟ್ ಬೀಸಿರುವ ಶ್ರೇಷ್ಠಾ ಅಯ್ಯರ್, ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ಅತ್ಯುತ್ತಮ ನಾಯಕರಲ್ಲಿ ಶ್ರೇಯಸ್ ಕೂಡ ಒಬ್ಬನಾಗುತ್ತಾನೆ. ಕೆಲವು ಸೋಲುಗಳ ಆಧಾರದ ಮೇಲೆ ಅವರ ಸಾಮರ್ಥ್ಯವನ್ನು ಅಳೆಯುವುದು ನಿಜಕ್ಕೂ ಸರಿಯಲ್ಲ. ಇದಕ್ಕೂ ಮೊದಲು, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜ ಕ್ರಿಕೆಟಿಗರೇ ಸೋಲುಗಳನ್ನು ಎದುರಿಸಿದ್ದರು. ಆದರೆ, ಅಂತಿಮವಾಗಿ ತಮ್ಮ ಪ್ರತಿಭೆಯಿಂದ ಉನ್ನತ ಎತ್ತರಕ್ಕೆ ಹೋಗಲಿಲ್ವಾ? ಎಂದರು. ಈ ಮೂಲಕ ಸಹೋದರನನ್ನು ಟೀಕಿಸಿದವರಿಗೆ ಖಡಕ್ ತಿರುಗೇಟು ನೀಡಿದರು.
ಭಾರತೀಯ ಕಾಲಮಾನದ ಪ್ರಕಾರ, ಇಂದು ರಾತ್ರಿ 10 ಗಂಟೆಗೆ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ನಿರ್ಣಾಯಕ ಟಿ20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ ಗೆಲ್ಲಲೇಬೇಕಿದೆ. ಈ ಪಂದ್ಯವನ್ನು ಗೆದ್ದರೆ ಮಾತ್ರ ಸರಣಿಯನ್ನು ಇನ್ನೂ ಜೀವಂತವಾಗಿಡಲು ಸಾಧ್ಯ. ಇಲ್ಲದಿದ್ದರೆ, ಆಂಗ್ಲರ ನಾಡಿನಲ್ಲಿ ಅಯ್ಯರ್ ನಾಯಕತ್ವದಲ್ಲಿ ಸತತ ಮೂರನೇ ಸೋಲು ಇದಾಗಲಿದೆ ಮತ್ತು ಸರಣಿ ಇಂಗ್ಲೆಂಡ್ ಪಾಲಾಗಲಿದೆ,(ಏಜೆನ್ಸೀಸ್).