Shreyas Iyer | ಪಂದ್ಯ ಎಲ್ಲಿ ಕೈತಪ್ಪಿತು ಅಂತ ನಮಗೆಲ್ಲಾ ಗೊತ್ತು!...ಸೋಲಿನ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಅಸಮಾಧಾನ  
ಕ್ರಿಕೆಟ್

ಪಂದ್ಯ ಎಲ್ಲಿ ಕೈತಪ್ಪಿತು ಅಂತ ನಮಗೆಲ್ಲಾ ಗೊತ್ತು!...ಸೋಲಿನ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಅಸಮಾಧಾನ | Shreyas Iyer

Shreyas Iyer: ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಭಾರಿ ನಿರಾಸೆಯಾಗಿದೆ. ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಲೇ ಬಂದಿದ್ದ ಶ್ರೇಯಸ್ ಪಡೆ, ಕೊನೆ ಕ್ಷಣದಲ್ಲಿ ಎಡವಿ ಇಂಗ್ಲೆಂಡ್‌ಗೆ 4 ವಿಕೆಟ್‌ಗಳಿಂದ ಶರಣಾಗಿದೆ.
ಆರಂಭದಲ್ಲೇ ಇಂಗ್ಲೆಂಡ್‌ಗೆ ಶಾಕ್ ಕೊಟ್ಟ ಭಾರತ, ಫಿಲ್ ಸಾಲ್ಟ್ ಹಾಗೂ ಡೇಂಜರಸ್ ಜೋಸ್ ಬಟ್ಲರ್ ಅವರನ್ನು ಡಕ್ ಔಟ್ ಮಾಡಿ ಪೆವಿಲಿಯನ್‌ಗೆ ಅಟ್ಟಿತ್ತು. ಕ್ಯಾಪ್ಟನ್ ಹ್ಯಾರಿ ಬ್ರೂಕ್ (15 ಎಸೆತಗಳಲ್ಲಿ 39 ರನ್) ಸ್ವಲ್ಪ ಹೊತ್ತು ಅಬ್ಬರಿಸಿದರೂ, ಅಕ್ಷರ್ ಪಟೇಲ್ ಅವರಿಗೆ ಬ್ರೇಕ್ ಹಾಕಿದರು. 15ನೇ ಓವರ್‌ವರೆಗೂ ಪಂದ್ಯ ಸಂಪೂರ್ಣವಾಗಿ ಟೀಮ್​ ಇಂಡಿಯಾದ ನಿಯಂತ್ರಣದಲ್ಲೇ ಇತ್ತು.

ಭಾರತಕ್ಕೆ ವಿಲನ್ ಆದ 17ನೇ ಓವರ್!

ಆದರೆ ಪಂದ್ಯದ ಅಸಲಿ ಕಹಾನಿ ಬದಲಾಗಿದ್ದೇ 17ನೇ ಓವರ್‌ನಲ್ಲಿ. ಸ್ಪಿನ್ನರ್ ರವಿ ಬಿಷ್ಣೋಯ್ ಬೌಲಿಂಗ್‌ಗೆ ಇಳಿಯುತ್ತಿದ್ದಂತೆ ಇಂಗ್ಲೆಂಡ್‌ನ ಯುವ ಬ್ಯಾಟರ್ ಜೇಕಬ್ ಬೆಥೆಲ್ ಮುಗಿಬಿದ್ದರು. ಒಂದೇ ಓವರ್‌ನಲ್ಲಿ ಬರೋಬ್ಬರಿ 3 ಭರ್ಜರಿ ಸಿಕ್ಸರ್, ಜೊತೆಗೆ ಬಿಷ್ಣೋಯ್ ಎಸೆದ 2 ನೋ-ಬಾಲ್‌ಗಳಿಂದಾಗಿ ಆ ಒಂದೇ ಓವರ್‌ನಲ್ಲಿ 29 ರನ್ ಹರಿದುಬಂತು. ಅಲ್ಲಿಗೆ ಭಾರತದ ಕೈಯಲ್ಲಿದ್ದ ಪಂದ್ಯ ಸಂಪೂರ್ಣವಾಗಿ ಇಂಗ್ಲೆಂಡ್ ತೆಕ್ಕೆಗೆ ಜಾರಿತು.
ಕೊನೆವರೆಗೂ ಅಜೇಯರಾಗಿ ಉಳಿದ ಬೆಥೆಲ್ ಕೇವಲ 46 ಎಸೆತಗಳಲ್ಲಿ 76 ರನ್ ಚಚ್ಚಿ ಇಂಗ್ಲೆಂಡ್‌ಗೆ ಭರ್ಜರಿ ಗೆಲುವಿಗೆ ಕಾರಣರಾದರು. ಮತ್ತೊಬ್ಬ ಬ್ಯಾಟರ್​ ಟಾಮ್ ಬ್ಯಾಂಟನ್ (39 ರನ್) ಕೂಡ ಉತ್ತಮ ಸಾಥ್ ನೀಡಿದರು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಕಾಯ್ದುಕೊಂಡಿದೆ.

ಪಂದ್ಯ ಎಲ್ಲಿ ಕೈತಪ್ಪಿತು ಎಂಬುದು ನಮಗೆಲ್ಲರಿಗೂ ಗೊತ್ತು: ಶ್ರೇಯಸ್

ಪಂದ್ಯದ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ಬಿಷ್ಣೋಯ್ ಅವರ ಆ ಒಂದು ಓವರ್ ಪಂದ್ಯದ ಗತಿಯನ್ನು ಹೇಗೆ ಬದಲಾಯಿಸಿತು ಮತ್ತು ಪಂದ್ಯವನ್ನು ತಮ್ಮ ಕೈಯಿಂದ ಹೇಗೆ ಕಸಿದುಕೊಂಡಿತು ಎಂಬುದನ್ನು ಉಲ್ಲೇಖಿಸಿದ್ದಾರೆ. ಪಂದ್ಯ ಎಲ್ಲಿ ಕೈತಪ್ಪಿತು ಎಂಬುದು ನಮ್ಮೆಲ್ಲರಿಗೂ ಗೊತ್ತು ಎಂದು ನಾನು ಭಾವಿಸುತ್ತೇನೆ, ಆದರೆ ನಾನು ಯಾವುದೇ ನಿರ್ದಿಷ್ಟ ಆಟಗಾರನನ್ನು ಬೆರಳು ಮಾಡಿ ತೋರಿಸಲು ಬಯಸುವುದಿಲ್ಲ. 15ನೇ ಓವರ್‌ನವರೆಗೆ ನಾವು ಇದ್ದ ರೀತಿಯನ್ನು ನೋಡಿದರೆ, ಉತ್ತಮ ಸ್ಥಿತಿಯಲ್ಲೇ ಇದ್ದೆವು ಎಂದು ನನಗೆ ಅನಿಸುತ್ತದೆ. ಆದರೆ ಇದ್ದಕ್ಕಿದ್ದಂತೆ ಪಂದ್ಯದ ಗತಿ ಅವರ ಕಡೆಗೆ ಬದಲಾಯಿತು ಮತ್ತು ಅಲ್ಲಿಂದ ಮುಂದೆ ಗುರಿ ತಲುಪಲು ನೆರವಾಯಿತು ಎಂದು ಶ್ರೇಯಸ್ ತಿಳಿಸಿದರು.

ಬಿಷ್ಣೋಯ್ ಹೆಸರಿಗೆ ಬೇಡದ ದಾಖಲೆ

ಟಿ20 ಪಂದ್ಯವೊಂದರಲ್ಲಿ ಮೂರು ನೋ-ಬಾಲ್ ಎಸೆದ ವಿಶ್ವದ ಮೊದಲ ಸ್ಪಿನ್ನರ್ ಎಂಬ ಬೇಡದ ದಾಖಲೆಗೆ ರವಿ ಬಿಷ್ಣೋಯ್ ಪಾತ್ರರಾದರು. ಅಷ್ಟೇ ಅಲ್ಲದೆ, ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್‌ಗಳ ಪಟ್ಟಿಯಲ್ಲಿ (ಶಿವಂ ದುಬೆ ಮತ್ತು ಸ್ಟುವರ್ಟ್ ಬಿನ್ನಿ ನಂತರ) ಬಿಷ್ಣೋಯ್ ಅವರ ಈ ಓವರ್ ಮೂರನೇ ಸ್ಥಾನದಲ್ಲಿದೆ(ಏಜೆನ್ಸೀಸ್​).