ಭಾರತದ ಸ್ಟಾರ್ ಕ್ರಿಕೆಟರ್ ಶ್ರೇಯಸ್ ಅಯ್ಯರ್ ಗಾಯದಿಂದ ಬಳಲುತ್ತಿರುವುದು
- ಮಾರಕ ಗಾಯದಿಂದ ಪಾರಾದ ಭಾರತದ ಸ್ಟಾರ್ ಕ್ರಿಕೆಟರ್ ಶ್ರೇಯಸ್ ಅಯ್ಯರ್
- ತವರಿನಲ್ಲೇ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಅಯ್ಯರ್ ಲಭ್ಯವಾಗುತ್ತಾರಾ?
- 1 ವಾರಗಳ ಕಾಲ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ಅಯ್ಯರ್ ಆಸ್ಪತ್ರೆಯಿಂದ ಡಿಸ್ಚಾರ್ಜ್
- ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅಯ್ಯರ್ ಆಡುವ ಬಗ್ಗೆ ಬಿಸಿಸಿಐ ಹೇಳಿದ್ದೇನು?
ನವದೆಹಲಿ: ಕಳೆದ ತಿಂಗಳು ಆಸ್ಟ್ರೇಲಿಯಾದಲ್ಲಿ ಮಾರಕ ಗಾಯದಿಂದ ಪಾರಾದ ಭಾರತದ ಸ್ಟಾರ್ ಕ್ರಿಕೆಟರ್ ಶ್ರೇಯಸ್ ಅಯ್ಯರ್ ( Shreyas Iyer ) ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವುದು ಅನುಮಾನ ಎಂಬ ವರದಿ ಬಂದಿದೆ.
ಶುಭಮಾನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿ, ರಾಯ್‌ಪುರ ಮತ್ತು ವಿಶಾಖಪಟ್ಟಣದಲ್ಲಿ ಮೂರು ಏಕದಿನ (ODI) ಪಂದ್ಯಗಳನ್ನು ಆಡಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸರಣಿ ಆರಂಭವಾಗಲಿದ್ದು, ತವರಿನಲ್ಲೇ ನಡೆಯುವ ಈ ಸರಣಿಗೆ ಅಯ್ಯರ್ ಲಭ್ಯವಾಗುತ್ತಾರಾ? ಅಥವಾ ಇಲ್ಲವಾ? ಅನ್ನೋ ಪ್ರಶ್ನೆ ಮೂಡಿದೆ.
ನಿಮಗೆಲ್ಲರಿಗೂ ಈಗಾಗಲೇ ಗೊತ್ತಿದೆ. ಅದೇನೆಂದರೆ, ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ಅಯ್ಯರ್ ಗಾಯಗೊಂಡರು. ಬಳಿಕ ಸಿಡ್ನಿ ಆಸ್ಪತ್ರೆಯಲ್ಲಿ ಸುಮಾರು 1 ವಾರಗಳ ಕಾಲ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ಅಯ್ಯರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು.
ಅಷ್ಟಕ್ಕೂ ಮೂರನೇ ಪಂದ್ಯದಲ್ಲಿ ನಡೆದಿದ್ದೇನೆಂದರೆ, ಅಲೆಕ್ಸ್ ಕ್ಯಾರಿ (Alex Carey) ಬಾರಿಸಿದ ಚೆಂಡ್ ಗಾಳಿಯಲ್ಲಿ ಹಾರಿ ಹೋಗುತ್ತಿರುವಾಗ ಅಯ್ಯರ್ ಅವರು ಹಿಮ್ಮುಖವಾಗಿ ಓಡಿ, ಡೈವ್ ಹೊಡೆದು ಅದ್ಭುತವಾಗಿ ಕ್ಯಾಚ್ ಹಿಡಿದರು. ಈ ವೇಳೆ ಚೆಂಡು ಅವರ ಹೊಟ್ಟೆಯ ಭಾಗಕ್ಕೆ ಬಲವಾಗಿ ಗುದ್ದಿದ್ದರಿಂದ, ಒಳಗಿನ ಗುಲ್ಮ ಛಿದ್ರಗೊಂಡು, ಆಂತರಿಕ ರಕ್ತಸ್ರಾವವಾಗಿತ್ತು. ಕೂಡಲೇ ಅವರನ್ನು ಸಿಡ್ನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸದ್ಯ ಅಯ್ಯರ್ ಅವರು ಇನ್ನೂ ಗಾಯದಿಂದ ಚೇತರಿಸಿಕೊಳ್ಳಬೇಕಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಫಿಟ್ನೆಸ್ ಅಗತ್ಯವಿದ್ದು, ಅದನ್ನು ಮರಳಿ ಪಡೆಯಲು ಹೆಚ್ಚಿನ ಸಮಯ ಬೇಕಾಗುತ್ತದೆ. ಹೀಗಾಗಿ ಅಯ್ಯರ್ ವಿಚಾರದಲ್ಲಿ ಆಯ್ಕೆ ಸಮಿತಿಯು ಮತ್ತು ಮಂಡಳಿ ಸದ್ಯಕ್ಕೆ ಯಾವುದೇ ಆತುರಪಡಲು ಬಯಸುವುದಿಲ್ಲ. ಆದ್ದರಿಂದ ದಕ್ಷಿಣ ಆಫ್ರಿಕಾ ಏಕದಿನ ಸರಣಿಯಲ್ಲಿ ಅಯ್ಯರ್ ಅವರು ಆಡುವುದು ಬಹುತೇಕ ಅನುಮಾನವಾಗಿದೆ ಎಂದು ಬಿಸಿಸಿಐ ಮೂಲ ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಮಾಡಿದೆ.
ಘಟನೆಯ ಸಮಯದಲ್ಲಿ ಅಯ್ಯರ್ ಅವರ ಆಮ್ಲಜನಕ ಮಟ್ಟ ಶೇ. 50ಕ್ಕೆ ಇಳಿದಿತ್ತು ಮತ್ತು ಹತ್ತು ನಿಮಿಷಗಳ ಕಾಲ ಅವರು ಸರಿಯಾಗಿ ಎದ್ದು ನಿಲ್ಲಲು ಕೂಡ ಸಾಧ್ಯವಾಗಲಿಲ್ಲ. ಅವರ ಸುತ್ತಲೂ ಸಂಪೂರ್ಣ ಕತ್ತಲೆಯಾಗಿತ್ತು ಮತ್ತು ಅವರು ಸಾಮಾನ್ಯ ಸ್ಥಿತಿಗೆ ಮರಳಲು ಸ್ವಲ್ಪ ಸಮಯ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.
ಅಂದಹಾಗೆ, ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿಯ ಸಮಯದಲ್ಲಿ, ಅಯ್ಯರ್ ಎರಡು ಪಂದ್ಯಗಳಲ್ಲಿ 72 ರನ್ ಗಳಿಸಿದರು. ಇದರಲ್ಲಿ ಅಡಿಲೇಡ್ನ ಓವಲ್ (Adelaide Oval) ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 77 ಎಸೆತಗಳಲ್ಲಿ 61 ರನ್ ಗಳಿಸಿದರು. ಅದೇ ಸಮಯದಲ್ಲಿ ಅವರು ರೋಹಿತ್ ಶರ್ಮ ಅವರೊಂದಿಗೆ ಶತಕದ ಜೊತೆಯಾಟವಾಡಿದರು.
ಇನ್ನು ಮೂರನೇ ಪಂದ್ಯದ ವೇಳೆ ಉಂಟಾದ ಗಾಯದಿಂದಾಗಿ ನವೆಂಬರ್ 30 ರಿಂದ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಪಂದ್ಯಗಳಲ್ಲಿ ಅಯ್ಯರ್ ಅವರು ಆಡುವುದು ಬಹುತೇಕ ಅನುಮಾನ ಎಂದು ವರದಿಗಳು ಸೂಚಿಸುತ್ತವೆ. (ಏಜೆನ್ಸೀಸ್)