ನಾನು ಯಾರ ನೆರಳಿನಲ್ಲೂ ಇರಲ್ಲ... ನಾಯಕತ್ವ ಸಿಗುತ್ತಿದ್ದಂತೆ ಮೊದಲ ಮಾತಿನಲ್ಲೇ ಶ್ರೇಯಸ್ ಖಡಕ್ ಸ್ಟೇಟ್‌ಮೆಂಟ್! Shreyas Iyer 
ಕ್ರಿಕೆಟ್

ನಾನು ಯಾರ ನೆರಳಿನಲ್ಲೂ ಇರಲ್ಲ... ನಾಯಕತ್ವ ಸಿಗುತ್ತಿದ್ದಂತೆ ಮೊದಲ ಮಾತಿನಲ್ಲೇ ಶ್ರೇಯಸ್ ಖಡಕ್ ಸ್ಟೇಟ್‌ಮೆಂಟ್! Shreyas Iyer

ಪ್ರಮುಖ ಮುಖ್ಯಾಂಶಗಳು

  • ಶ್ರೇಯಸ್​ ಅಯ್ಯರ್​ಗೆ ಟಿ20 ತಂಡದ ಸಾರಥ್ಯವನ್ನು ನೀಡಿದ ಬಿಸಿಸಿಐ
  • ಐಪಿಎಲ್​ನಲ್ಲಿ ಅಯ್ಯರ್​ ಅವರ ಅಮೋಘ ಪ್ರದರ್ಶನಕ್ಕೆ ಒಲಿದುಬಂದು ನಾಯಕತ್ವದ ಗರಿ
  • ನಾಯಕತ್ವ ಸಿಕ್ಕ ಬೆನ್ನಲ್ಲೇ ಮೊದಲ ಬಾರಿಗೆ ಅಯ್ಯರ್​ ಅವರು ತಮ್ಮ ಜವಾಬ್ದಾರಿಯ ಬಗ್ಗೆ ಮಾತು
  • ಯಾರಿಗೋಸ್ಕರಾನೂ ನಾನು ಬದಲಾಗುವುದಿಲ್ಲ ಎಂದು ಖಡಕ್​ ಸಂದೇಶ ರವಾನಿಸಿ ಅಯ್ಯರ್​
Shreyas Iyer : ಐಪಿಎಲ್​ನಲ್ಲಿ ಶ್ರೇಯಸ್ ಅಯ್ಯರ್ ಅವರ ಅತ್ಯುತ್ತಮ ನಾಯಕತ್ವ ಮತ್ತು ಟಿ20 ಕ್ರಿಕೆಟ್‌ನಲ್ಲಿನ ಸ್ಥಿರ ಪ್ರದರ್ಶನವನ್ನು ಗುರುತಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಯ್ಯರ್​ ಅವರಿಗೆ ಟಿ20 ತಂಡದ ಸಾರಥ್ಯವನ್ನು ವಹಿಸುವ ಮೂಲಕ ಸೂಕ್ತ ಬಹುಮಾನವನ್ನು ನೀಡಿದೆ. ಇದರ ಬೆನ್ನಲ್ಲೇ ಮೊದಲ ಬಾರಿಗೆ ಅಯ್ಯರ್​ ಅವರು ನಾಯಕತ್ವ ಜವಾಬ್ದಾರಿಯ ಬಗ್ಗೆ ಮಾತನಾಡಿದ್ದಾರೆ.
ನಾಯಕನಾಗಿ ಶ್ರೇಯಸ್ ಅವರಿಗೆ ಇದು ಕೇವಲ ಆರಂಭವಾಗಿದ್ದರೂ, ಮುಂಬರುವ ದಿನಗಳಲ್ಲಿ ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬ ಬಗ್ಗೆ ಅವರು ಸ್ಪಷ್ಟವಾದ ಆಲೋಚನೆಗಳು ಹೊಂದಿದ್ದಾರೆ. ಈ ಬಗ್ಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಯ್ಯರ್​, ನಾಯಕತ್ವದ ಈ ಹೊಸ "ಸವಾಲನ್ನು" ತಾವು ಎಂಜಾಯ್ ಮಾಡುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ, ತಾವು ಬೇರೆ ಯಾರ ನೆರಳಿನಡಿಯಲ್ಲೂ ಇರಲು ಬಯಸುವುದಿಲ್ಲ ಅಂತಾನೂ ಸ್ಪಷ್ಟಪಡಿಸಿದ್ದಾರೆ.
ಶ್ರೇಯಸ್ ಅಯ್ಯರ್ ಅವರು ಭಾರತದ ಪರ ತಮ್ಮ ಕೊನೆಯ ಟಿ20 ಪಂದ್ಯವನ್ನು 2023ರ ಡಿಸೆಂಬರ್ ತಿಂಗಳಲ್ಲಿ ಆಡಿದರು. ಆ ನಂತರ ನಡೆದ 2025ರ ಟಿ20 ವಿಶ್ವಕಪ್ ಆಗಲಿ ಅಥವಾ ಈ ಬಾರಿ 20 ಓವರ್‌ಗಳ ಮಾದರಿಯಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯಾಗಲಿ, ಯಾವುದಕ್ಕೂ ಅಯ್ಯರ್​ ಆಯ್ಕೆಯಾಗಿರಲಿಲ್ಲ. ಈ ಎರಡೂ ಪ್ರಮುಖ ಟೂರ್ನಿಗಳಲ್ಲಿ ಸೂರ್ಯಕುಮಾರ್ ಯಾದವ್ ಅವರೇ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದರು. ಆಯ್ಕೆಗಾರರು ತಮ್ಮ ಕಡೆ ಮುಖ ಮಾಡದಿದ್ದರೂ, ಈ ಅನುಭವಿ ಬ್ಯಾಟರ್ ಮಾತ್ರ ಧೃತಿಗೆಡದೆ ಐಪಿಎಲ್‌ನಲ್ಲಿ ಸತತವಾಗಿ ಅತ್ಯುತ್ತಮ ಪ್ರದರ್ಶನಗಳನ್ನು ನೀಡುತ್ತಾ ಮುನ್ನುಗ್ಗಿದರು.
ಅಂದಹಾಗೆ, ಶ್ರೇಯಸ್ ಅಯ್ಯರ್ ಅವರು 2024ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (KKR) ತಂಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಆ ನಂತರ ಪಂಜಾಬ್ ಕಿಂಗ್ಸ್ ತಂಡದ ಸಾರಥ್ಯ ವಹಿಸಿಕೊಂಡು, 2025ರ ಸೀಸನ್‌ನಲ್ಲಿ ಆ ತಂಡವನ್ನೂ ಫೈನಲ್‌ವರೆಗೂ ಮುನ್ನಡೆಸಿದ್ದರು. ಅಲ್ಲದೆ, ಇತ್ತೀಚೆಗೆ ಮುಕ್ತಾಯವಾದ 19ನೇ ಆವೃತ್ತಿಯಲ್ಲೂ ಉತ್ತಮ ನಾಯಕತ್ವದೊಂದಿಗೆ ಅಯ್ಯರ್​ ಗಮನ ಸೆಳೆದರು. ನಾಯಕತ್ವ ಮಾತ್ರವಲ್ಲ, ಬ್ಯಾಟಿಂಗ್​ನಲ್ಲೂ ತಮ್ಮ ಸಾಮರ್ಥ್ಯವನ್ನು ಅಯ್ಯರ್​ ಸಾಬೀತು ಮಾಡಿದರು. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಅವರು ಐಪಿಎಲ್​ನಲ್ಲಿ ರನ್​ ಗಳಿಸಲು ಪರದಾಡಿದರು. ಇದನ್ನೆಲ್ಲ ಪರಿಗಣಿಸಿದ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗಾಗಿ ಸೂರ್ಯಕುಮಾರ್ ಅವರ ಜಾಗಕ್ಕೆ ಶ್ರೇಯಸ್ ಅವರನ್ನು ಆಯ್ಕೆ ಮಾಡಿದ್ದಲ್ಲದೆ, ತಂಡದ ನಾಯಕತ್ವದ ಜವಾಬ್ದಾರಿಯನ್ನೂ ನೀಡಿದೆ.
ಭಾನುವಾರ ನಡೆದ 'ಕಬುನಿ' ಎಂಬ ಎಐ-ಚಾಲಿತ ಕ್ರೀಡಾ ತಂತ್ರಜ್ಞಾನದ ಉದ್ಘಾಟನಾ ಸಮಾರಂಭದಲ್ಲಿ ಈ ಬಗ್ಗೆ ಮಾತನಾಡಿದ ಶ್ರೇಯಸ್, ನನಗೆ ಈಗ ನಾಯಕನಾಗಿ ಈ ಜವಾಬ್ದಾರಿ ಸಿಕ್ಕಿದೆ. ಇದೊಂದು ದೊಡ್ಡ ಸವಾಲು, ಆದರೆ ಅದೇ ಸಮಯದಲ್ಲಿ, ಇದಕ್ಕಾಗಿ ನಾನು ನನ್ನ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಬೇಕಾಗಿಲ್ಲ. ನಾನು ಮೊದಲಿಗೆ ಹೇಗಿದ್ದನೋ ಅದೇ ವ್ಯಕ್ತಿಯಾಗಿ ಮುಂದುವರಿಯಬೇಕೇ ವಿನಃ ಬೇರೆ ಯಾರೋ ಆಗಲು ಅಥವಾ ಮತ್ತೊಬ್ಬರ ನೆರಳಿನಡಿಯಲ್ಲಿ ಇರಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶ್ರೇಯಸ್ ಅಯ್ಯರ್ ಅವರು 2024ರಲ್ಲಿ ಕೆಕೆಆರ್ (KKR) ತಂಡದೊಂದಿಗೆ ಐಪಿಎಲ್ ಟ್ರೋಫಿ ಗೆದ್ದಾಗ, ಆ ಯಶಸ್ಸಿಗೆ ಅವರಿಗೆ ಸಿಗಬೇಕಾಗಿದ್ದ ಅರ್ಹ ಕ್ರೆಡಿಟ್ ಸಿಗಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಅಭಿಮಾನಿಗಳು ಮತ್ತು ಫ್ರಾಂಚೈಸಿ ಮ್ಯಾನೇಜ್‌ಮೆಂಟ್ ಶ್ರೇಯಸ್ ಅವರ ಕೊಡುಗೆಯನ್ನು ಒಪ್ಪಿಕೊಂಡಿದ್ದರೂ ಸಹ, ಆ ಭರ್ಜರಿ ಗೆಲುವಿನ ಹಿಂದಿನ ಅಸಲಿ ಮಾಸ್ಟರ್‌ಮೈಂಡ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಅವರೇ ಎಂದು ಎಲ್ಲೆಡೆ ಬಿಂಬಿಸಲಾಗಿತ್ತು.
ಇದೀಗ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗೌತಮ್ ಗಂಭೀರ್ ಹೆಡ್ ಕೋಚ್ ಆಗಿ ಮತ್ತು ಶ್ರೇಯಸ್ ಅಯ್ಯರ್ ನಾಯಕನಾಗಿ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಈ ಇಬ್ಬರ ನಡುವಿನ ಹೊಂದಾಣಿಕೆ ಹಾಗೂ ತಂತ್ರಗಾರಿಕೆಯು ಮುಂಬರುವ ದಿನಗಳಲ್ಲಿ ಭಾರತೀಯ ಟಿ20 ತಂಡದ ಭವಿಷ್ಯವನ್ನು ರೂಪಿಸುವಲ್ಲಿ ಅತ್ಯಂತ ಪ್ರಮುಖ ಹಾಗೂ ಪ್ರಭಾವಶಾಲಿ ಪಾತ್ರ ವಹಿಸಲಿದೆ, (ಏಜೆನ್ಸೀಸ್​).