ಟೀಮ್ ಇಂಡಿಯಾ ಆಟಗಾರ್ತಿ ಶ್ರೇಯಾಂಕಾ ಪಾಟೀಲ್
- ಇಂಗ್ಲೆಂಡ್ನಲ್ಲಿ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿ
- ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲೇ ಅಮೋಘ ಕ್ಯಾಚ್ ಹಿಡಿದ ಕನ್ನಡತಿ
- ಪಂದ್ಯದ ಬಳಿಕ ಡಿಪ್ರೆಶನ್ ಕುರಿತು ಮೌನ ಮುರಿದ ಶ್ರೇಯಾಂಕಾ ಪಾಟೀಲ್
Shreyanka Patil: ಪ್ರಸಕ್ತ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ 2026ರ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ 64 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಅಮೋಘ ಕ್ಯಾಚ್ ಹಿಡಿಯುವ ಮೂಲಕ ಕ್ರಿಕೆಟ್ ಪ್ರೇಮಿಗಳ ಹುಬ್ಬೇರಿಸಿದ ಕನ್ನಡತಿ, 'ಟಗರು ಪುಟ್ಟಿ', ಆರ್ಸಿಬಿಯ ಸ್ಟಾರ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್, ತಾವು ಅನುಭವಿಸಿದ ಕಷ್ಟದ ಸಂದರ್ಭದ ಕುರಿತು ಕಡೆಗೂ ಮೌನ ಮುರಿದಿದ್ದಾರೆ.
ಟೀಮ್ ಇಂಡಿಯಾ ಆಫ್-ಸ್ಪಿನ್ನರ್ ಶ್ರೇಯಾಂಕ, ಪಸ್ತುತ ಟಿ20 ವಿಶ್ವಕಪ್ ಟೂರ್ನಿಯ ತಂಡದಲ್ಲಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಹಿಡಿದ ಕನ್ನಡತಿ, ಪಂದ್ಯ ಮುಗಿದ ಬಳಿಕ ಕೆಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡರು. ಎನ್ಡಿಟಿವಿ ವರದಿ ಪ್ರಕಾರ, 'ಜಿಯೋ ಸ್ಟಾರ್' ಜೊತೆಗೆ ಮಾತನಾಡಿದ ಅವರು, "ಈಗಲೂ ಇಲ್ಲ ಎಂದು ಹೇಳಿದರೆ, ಖಂಡಿತ ನಾನು ಸುಳ್ಳು ಹೇಳಿದಂತೆ. ಇಂಜುರಿಯಿಂದ ಮನೆಯಲ್ಲೇ ಕೂರುವ ಪರಿಸ್ಥಿತಿ ಎದುರಾದಾಗ ಡಿಪ್ರೆಶನ್ಗೆ ಹೋಗಿದ್ದೆ" ಎಂದರು.
"ಗಿವ್ ಅಪ್ ಮಾಡಲು ಇಷ್ಟವಿರಲಿಲ್ಲ. ನಾನು ತುಂಬಾ ಇಷ್ಟಪಡುವ ಆಟವನ್ನು ಅರ್ಧಕ್ಕೆ ಬಿಡಲು ನನ್ನಿಂದ ಆಗ್ತಿರಲಿಲ್ಲ. ಇಂಜುರಿಯಿಂದ ಕ್ರಿಕೆಟ್ಗೆ ಗುಡ್ಬೈ ಹೇಳುವ ಹಂತಕ್ಕೆ ತಲುಪಿದ್ದೆ. ಆಗಲೇ, ನನ್ನ ತಂದೆ ನಿರಂತರವಾಗಿ ನನ್ನೊಂದಿಗೆ ಮಾತನಾಡುತ್ತಾ ಧೈರ್ಯ ತುಂಬಿದರು. ಇಡೀ ಕುಟುಂಬವೇ ಜೊತೆಗಿತ್ತು. ನನ್ನ ಸುತ್ತಲೂ ಸದಾ ಪಾಸಿಟಿವ್ ವಾತಾವರಣ ಮತ್ತು ಒಳ್ಳೆಯ ವ್ಯಕ್ತಿಗಳಿದ್ದರು. ಇದೆಲ್ಲವೂ ನನ್ನನ್ನು ಮೈದಾನಕ್ಕೆ ಕಮ್ಬ್ಯಾಕ್ ಮಾಡಲು ಸಹಾಯ ಮಾಡಿತು" ಎಂದು ಹೇಳಿದರು.
ಇನ್ನು ಪಾಕ್ ಪಂದ್ಯದಲ್ಲಿನ ಪ್ರದರ್ಶನ ಕುರಿತು ಮಾತನಾಡಿದ ಶ್ರೇಯಾಂಕ, ಪವರ್ಪ್ಲೇಯಲ್ಲಿ ಬೌಲಿಂಗ್ ಮಾಡುವುದನ್ನು ತುಂಬಾ ಎಂಜಾಯ್ ಮಾಡ್ತೀನಿ. ಒತ್ತಡದಲ್ಲಿರುವಾಗಲೇ ಬಾಲ್ ಮಾಡುವುದು ನಿಜಕ್ಕೂ ಖುಷಿ ಕೊಡುತ್ತೆ. ಅದು ನನ್ನ ರಾಜ್ಯದ ತಂಡವಾಗಲಿ ಅಥವಾ ಟೀಮ್ ಇಂಡಿಯಾ ಆಗಿರಲಿ ಆನಂದಿಸುವೆ. ಇದನ್ನೇ ಈ ಹಿಂದಿನಿಂದಲೂ ನಾನು ಫಾಲೋ ಮಾಡಿಕೊಂಡು ಬಂದಿರುವುದು. ಪಾಕ್ ಎದುರು ಒಂದಷ್ಟು ಚಾನ್ಸ್ ಮಿಸ್ ಮಾಡಿಕೊಂಡೆವು. ಆದರೆ ದೀಪ್ತಿ ಶರ್ಮಾ ಅವರ ಐದು ವಿಕೆಟ್ ಗೆಲುವು ನಮ್ಮದಾಗಿಸಿತು ಎಂದರು,(ಏಜೆನ್ಸೀಸ್).
ಇಂಜುರಿಯಿಂದ ಹೊರಗೆ!
2024ರ ಜುಲೈನಲ್ಲಿ ಇದೇ ಪಾಕಿಸ್ತಾನ ವಿರುದ್ಧ ಏಷ್ಯಾಕಪ್ ಪಂದ್ಯದ ವೇಳೆ ಶ್ರೇಯಾಂಕಾ ಬೆರಳಿಗೆ ಗಂಭೀರ ಪೆಟ್ಟು ಬಿದ್ದು, ಮೂಳೆ ಮುರಿದಿತ್ತು. ಇಂಜುರಿಯಿಂದ ಸುಮಾರು 14 ತಿಂಗಳು ಮೈದಾನದಿಂದ ಹೊರಗುಳಿದಿದ್ದ ಕನ್ನಡತಿ, ಎರಡೂ ಕಾಲುಗಳಲ್ಲಿ ತೀವ್ರವಾದ ಮೊಣಕಾಲಿನ ಸಮಸ್ಯೆ ಮತ್ತು ಎಡಗೈ ಹೆಬ್ಬೆರಳಿನ ಮೂಳೆ ಮುರಿತದಿಂದ ಲಾಂಗ್ ಬ್ರೇಕ್ ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಯಿತು. ಕೊನೆಗೆ, ಈ ವರ್ಷದ ಆರಂಭದಲ್ಲಿ ಡಬ್ಲ್ಯೂಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಮೂಲಕ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದರು.