ಪಾಕ್ ಮಾಜಿ ಆಟಗಾರ ಶೋಯೆಬ್ ಅಖ್ತರ್
- ಇದೇ ಮಾ.08ರಂದು ಟಿ20 ವಿಶ್ವಕಪ್ ಫೈನಲ್ ಪಂದ್ಯ
- ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಅಂತಿಮ ಹಣಾಹಣಿ
- ಪಾಕಿಸ್ತಾನ ಮಾಜಿ ಕ್ರಿಕೆಟಿಗ ಅಚ್ಚರಿ ಹೇಳಿಕೆ
IND vs NZ Final: ಇದೇ ಭಾನುವಾರ (ಮಾ.08) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸಿದ್ಧವಾಗಿವೆ. ಈ ಕಾತರದ ಪಂದ್ಯಕ್ಕೆ ಈಗಾಗಲೇ ಕ್ಷಣಗಣನೆ ಶುರುವಾಗಿದ್ದು, ಯಾರು 2026ರ ಟಿ20 ಚಾಂಪಿಯನ್ಸ್ ಆಗಿ ಹೊರಹೊಮ್ಮಲಿದ್ದಾರೆ ಎಂಬ ಕುತೂಹಲ ಸದ್ಯ ಕ್ರಿಕೆಟ್ ಪ್ರಿಯರನ್ನು ಬೆಂಬಿಡದೆ ಕಾಡುತ್ತಿದೆ.
ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿರುವ ಕಿವೀಸ್ ಪಡೆ ಹಾಗೂ ಭಾರತ, ಯಾವ ರೀತಿ ಪೈಪೋಟಿ ನೀಡಬಹುದು ಎಂಬ ಚರ್ಚೆಗಳು ಜೋರಾಗಿವೆ. ಮತ್ತೊಂದೆಡೆ, 2007 ಮತ್ತು 2024ರಲ್ಲಿ ಟಿ20 ವಿಶ್ವಕಪ್ ವಿಜೇತರಾಗಿರುವ ಟೀಮ್ ಇಂಡಿಯಾ, ನ್ಯೂಜಿಲೆಂಡ್ ತಂಡವನ್ನು ಮಣಿಸಿ, ಮೂರನೇ ಬಾರಿ ಚಾಂಪಿಯನ್ಸ್ ಆಗಿ ಹೊರಹೊಮ್ಮಲಿ ಎಂದು ಭಾರತೀಯ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.
2021ರಲ್ಲಿ ರನ್ನರ್ಅಪ್ ಸ್ಥಾನ ಪಡೆದು ತೃಪ್ತಿ ಪಟ್ಟಿದ್ದ ಕಿವೀಸ್ ಆಟಗಾರರು, ಈ ವರ್ಷ ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಡುವ ತವಕದಲ್ಲಿದೆ. ಕಳೆದ ಬಾರಿ ಮಾಡಿದ ಮಿಸ್ಟೇಕ್ಗಳನ್ನು ಈ ವಿಶ್ವಕಪ್ನಲ್ಲಿ ಮಾಡಬಾರದು ಎಂದು ಪಣತೊಟ್ಟಿದೆ. ಇನ್ನು ಅಹಮದಾಬಾದ್ ಪಿಚ್ನಲ್ಲಿ 200 ರನ್ ಸುರಕ್ಷಿತ ಸ್ಕೋರ್ ಎನ್ನಲಾಗಿದ್ದು, ಯಾವ ತಂಡ ಮೊದಲು ಬ್ಯಾಟ್ ಮಾಡುತ್ತೋ, ಆ ತಂಡವು 200 ಅಥವಾ ಅದಕ್ಕಿಂತ ಹೆಚ್ಚಿನ ರನ್ ಕಲೆಹಾಕಿದರೆ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗಿದೆ.
ಈ ಬಗ್ಗೆ 'ಟ್ಯಾಪ್ಮ್ಯಾಡ್ ಶೋ ಗೇಮ್ ಆನ್ ಹೈ' ಎಂಬ ಕಾರ್ಯಕ್ರಮದಲ್ಲಿ ಕುಳಿತು ಮಾತನಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್, ಅಹಮದಾಬಾದ್ ಪಿಚ್ ಖಂಡಿತ ಸ್ಪಿನ್ನರ್ಗಳಿಗೆ ವರವಾಗಲಿದೆ. ಈ ಮೈದಾನದಲ್ಲಿ 175 ಅಥವಾ 200 ರನ್ ಗಳಿಸಿದರೆ ಮಾತ್ರ ಸೇಫ್. ನನ್ನ ಪ್ರಕಾರ, 200 ರನ್ ಉತ್ತಮ. ನ್ಯೂಜಿಲೆಂಡ್ ಏನಾದರೂ 200ರಿಂದ 225 ಸ್ಕೋರ್ ದಾಖಲಿಸಿದರೆ, ಟೀಮ್ ಇಂಡಿಯಾ ಮೇಲೆ ಭಾರೀ ಒತ್ತಡ ಇರಲಿದೆ. ಇದಕ್ಕೆಲ್ಲ, ಭಾರತ ಮೊದಲೇ ಫುಲ್ ತಯಾರಿ ಮಾಡಿಕೊಂಡಿದೆ ಎಂದರು.
ನ್ಯೂಜಿಲೆಂಡ್ ಬೌಲಿಂಗ್ ಅಟ್ಯಾಕ್ ತುಂಬ ಬಲಿಷ್ಠವಾಗಿರುವಂತೆ ಕಾಣಿಸುತ್ತದೆ. ಹೆಚ್ಚಿನ ಜನಸಂಖ್ಯೆಯಿಂದ ಟೀಮ್ ಇಂಡಿಯಾ ಬಹುಶಃ ಒತ್ತಡಕ್ಕೆ ಸಿಲುಕಬಹುದು. ಭಾರತದಲ್ಲೇ ಒಂದು ಸರಣಿಯನ್ನು ನ್ಯೂಜಿಲೆಂಡ್ ಗೆದ್ದಿದೆ. ಅವರಿಗೆ ಸ್ಪಿನ್ ಟ್ರ್ಯಾಕ್ ಅನುಭವ ಚೆನ್ನಾಗಿದೆ. ಸ್ಯಾಟ್ನರ್ ಪಡೆಗೆ ಆತ್ಮವಿಶ್ವಾಸ ತುಂಬಿದೆ. ಭಾರತ ಈಗಾಗಲೇ ಗೆದ್ದಿದೆ. ಆದರೆ, ಕ್ರಿಕೆಟ್ಗೋಸ್ಕರ ನ್ಯೂಜಿಲೆಂಡ್ ಈ ವಿಶ್ವಕಪ್ ಗೆದ್ದು ಬರಲಿ ಎಂದು ಹೇಳಿದ್ದಾರೆ,(ಏಜೆನ್ಸೀಸ್).