ಮಹಾರಾಜ ಟ್ರೋಫಿ ಫೈನಲ್‌ಗೇರಿದ ಶಿವಮೊಗ್ಗ: 2ನೇ ಕ್ವಾಲಿಫೈಯರ್‌ನಲ್ಲಿ ಮಂಗಳೂರು ಎದುರು ಯೋಧಾಸ್‌ಗೆ ಜಯ
ಬೆಂಗಳೂರು: ಶಿವಮೊಗ್ಗ ಯೋಧಾಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು 5ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿ ಫೈನಲ್‌ನಲ್ಲಿ ಭಾನುವಾರ ಪ್ರಶಸ್ತಿಗಾಗಿ ಹೋರಾಡಲಿವೆ. ವೇಗಿ ಧನುಷ್ ಗೌಡ (21ಕ್ಕೆ 4) ಬಿಗಿ ಬೌಲಿಂಗ್ ಹಾಗೂ ಕೆವಿ ಅನೀಶ್ (55* ರನ್, 39 ಎಸೆತ, 4 ಸಿಕ್ಸರ್) ಸಮಯೋಚಿತ ಆಟದ ನೆರವಿನಿಂದ ಶಿವಮೊಗ್ಗ ಯೋಧಾಸ್ ತಂಡ 2ನೇ ಕ್ವಾಲಿಫೈಯರ್‌ನಲ್ಲಿ ಕೋಸ್ಟಲ್ ಕಿಂಗ್ಸ್ ಮಂಗಳೂರು ವಿರುದ್ಧ 4 ವಿಕೆಟ್‌ಗಳ ಗೆಲುವು ಒಲಿಸಿಕೊಂಡಿತು. ಕ್ವಾಲಿಫೈಯರ್ 1 ಮತ್ತು 2 ಪಂದ್ಯಗಳಲ್ಲಿ ಸೋತ ಮಂಗಳೂರು ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸೆಮಿಫೈನಲ್ ಮಾದರಿಯ ಪಂದ್ಯದಲ್ಲಿ ಟಾಸ್ ಗೆದ್ದ ಶಿವಮೊಗ್ಗ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಧನುಷ್ ಗೌಡ ಸಹಿತ ಬೌಲರ್‌ಗಳ ದಾಳಿಗೆ ನಿರಂತರ ವಿಕೆಟ್ ಕಳೆದುಕೊಂಡ ಮಂಗಳೂರು 8 ವಿಕೆಟ್‌ಗೆ 143 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು.
ಪ್ರತಿಯಾಗಿ 41 ರನ್‌ಗೆ ಅಗ್ರ ಮೂವರು ಬ್ಯಾಟರ್‌ಗಳ ವಿಕೆಟ್ ಕಳೆದುಕೊಂಡ ಶಿವಮೊಗ್ಗ ಆಘಾತ ಎದುರಿಸಿತು. ಆಗ, ಅನೀಶ್ ಮತ್ತು ಸುಜಯ್ ಸಾತೇರಿ (31) ಜೋಡಿಯ ಅಜೇಯ ಜತೆಯಾಟದ ಬಲದಿಂದ ಶಿವಮೊಗ್ಗ 18.4 ಓವರ್‌ಗಳಲ್ಲಿ 6 ವಿಕೆಟ್‌ಗೆ 144 ರನ್‌ಗಳಿಸಿ ಫೈನಲ್‌ಗೇರಿತು. ಅನೀಶ್-ಸುಜಯ್ ಜೋಡಿ 5ನೇ ವಿಕೆಟ್‌ಗೆ 47 ಎಸೆತಗಳಲ್ಲಿ 70 ರನ್‌ಗಳಿಸಿ ಗೆಲುವು ಸುಲಭಗೊಳಿಸಿತು.
ಕೋಸ್ಟಲ್ ಕಿಂಗ್ಸ್ ಮಂಗಳೂರು: 8 ವಿಕೆಟ್‌ಗೆ 143 (ಪ್ರಜ್ವಲ್ 8, ನಿಕಿನ್ ಜೋಸ್ 34, ಕರುಣ್ ನಾಯರ್ 41, ಸಿದ್ದಾರ್ಥ್ 2, ಶ್ರೇಯಸ್ ಗೋಪಾಲ್ 13, ಸೂರಜ್ 9, ರಾಜ್‌ವೀರ್ 9, ಪೃಥ್ವಿರಾಜ್ 12*, ಧನುಷ್ ಗೌಡ 21ಕ್ಕೆ 4, ಶ್ರೀಶ ಆಚಾರ್ 19ಕ್ಕೆ 2, ಜಿ.ನವೀನ್ 25ಕ್ಕೆ 2).
ಶಿವಮೊಗ್ಗ ಯೋಧಾಸ್: 18.4 ಓವರ್‌ಗಳಲ್ಲಿ 6 ವಿಕೆಟ್‌ಗೆ 144 (ಲವನೀತ್ 14, ತುಷಾರ್ 14, ಜಿ.ನವೀನ್ 12, ಕೆವಿ ಅನೀಶ್ 55*, ಹರ್ಷಿಲ್ 13, ಸುಜಯ್ 31, ಸಂತೋಕ್ 30ಕ್ಕೆ3, ಪೃಥ್ವಿರಾಜ್ 33ಕ್ಕೆ 2). ಪಂದ್ಯಶ್ರೇಷ್ಠ: ಧನುಷ್ ಗೌಡ.
ಬೆಂಗಳೂರು ಬ್ಲಾಸ್ಟರ್ಸ್-ಶಿವಮೊಗ್ಗ ಯೋಧಾಸ್
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್.