ಕ್ರಿಕೆಟಿಗ ಶಿವಂ ದುಬೆ ಮತ್ತು ಅವರ ಪತ್ನಿ ಅಜುಂಮ್ (ಎಡ)
- ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾಗೆ 96 ರನ್ಗಳ ಭರ್ಜರಿ ಗೆಲುವು
- ಪಂದ್ಯ ಮುಗಿದ ಬೆನ್ನಲ್ಲೇ ಪತ್ನಿ ಜೊತೆ ಮನೆಗೆ ಹೋಗಲು ದುಬೆ ಪರದಾಟ
- ಕಡೆಗೂ ಫ್ಯಾನ್ಸ್ಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಶಿವಂ ದುಬೆ
ಮುಂಬೈ: ಕೋಟ್ಯಂತರ ಭಾರತೀಯರ ಆಸೆಯನ್ನು ಕಡೆಗೂ ಈಡೇರಿಸಿದ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ 96 ರನ್ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯ ವಿಜಯಶಾಲಿಯಾಗಿ ಹೊರಹೊಮ್ಮಿತು. ಈ ಮೂಲಕ ಸತತ ಮೂರು ಬಾರಿ ಟಿ20 ವಿಶ್ವಕಪ್ ಗೆದ್ದ ತಂಡ ಮತ್ತು ತವರಿನಲ್ಲಿ ಚುಟುಕು ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಕಿವೀಸ್ ಬೌಲರ್ಗಳಿಗೆ ಬೆವರಿಳಿಸಿದ ಟೀಮ್ ಇಂಡಿಯಾ ಬ್ಯಾಟರ್ಗಳ ಪೈಕಿ ಶಿವಂ ದುಬೆ ಕೂಡ ಒಬ್ಬರು. ಟೀಮ್ನ ಒಟ್ಟು ಮೊತ್ತವನ್ನು 250ರ ಗಡಿದಾಟಿಸಲು ದೊಡ್ಡ ಕೊಡುಗೆ ನೀಡಿದ್ದೇ ದುಬೆ ಸ್ಫೋಟಕ ಬ್ಯಾಟಿಂಗ್.
ವಿಮಾನ ಬದಲು ಎಸಿ ಕೋಚ್ ರೈಲು
ಗುಜರಾತ್ನ ಅಹಮದಾಬಾದ್ನಲ್ಲಿ ಫೈನಲ್ ಗೆದ್ದ ಬಳಿಕ ಪ್ರಶಸ್ತಿ ಮತ್ತು ಮೆಡಲ್ಗಳನ್ನು ಸ್ವೀಕರಿಸಿದ ಶಿವಂ ದುಬೆ, ಪತ್ನಿ ಅಂಜುಮ್ ಅವರೊಂದಿಗೆ ಗೆಲುವನ್ನು ಸಂಭ್ರಮಿಸಿದರು. ಒಂದಷ್ಟು ಫೋಟೋಗಳನ್ನು ತೆಗೆಸಿಕೊಂಡು, ತಮ್ಮ ಮನೆಗೆ ಹಿಂತಿರುಗಲು ಮುಂದಾದ ಆಲ್ರೌಂಡರ್ ಆಟಗಾರನಿಗೆ ಮುಂಬೈಗೆ ಹೋಗಲು ಫ್ಲೈಟ್ ಟಿಕೆಟ್ಗಳು ಸಿಗಲಿಲ್ಲ. ಇದರಿಂದ ತಲೆಬಿಸಿ ಮಾಡಿಕೊಂಡ ದುಬೆ, ತನ್ನ ಪತ್ನಿ ಮತ್ತು ಅವರ ಸ್ನೇಹಿತೆಯನ್ನು ಕರೆದುಕೊಂಡು ಹೋಗಲು ತೀರ ಪರದಾಡಿದರು.
ಮುಂಬೈಗೆ ಯಾವುದೇ ವಿಮಾನಗಳ ಟಿಕೆಟ್ಗಳು ಆ ಸಮಯಕ್ಕೆ ಬುಕ್ಕಿಂಗ್ಗೆ ಲಭ್ಯವಿರಲಿಲ್ಲ. ಇನ್ನೇನು ಮಾಡೋದು ಎಂದು ಚಿಂತಿಸಿದ ದುಬೆ, ಮೂರನೇ ಎಸಿ ಕೋಚ್ ರೈಲು ಪ್ರಯಾಣವೇ ಬೆಸ್ಟ್ ಎಂದು ರೈಲಿನಲ್ಲೇ ಮುಂಬೈ ತಲುಪಿದ್ದಾರೆ. ಅಸಲಿಗೆ, ರೈಲ್ವೆ ಸ್ಟೇಷನ್ಗೆ ಹೋದರೆ ಮತ್ತು ರೈಲಿನಲ್ಲಿ ಫ್ಯಾನ್ಸ್ಗಳು ತುಂಬಿಕೊಂಡರೆ ಏನು ಮಾಡೋದು ಎಂಬ ತಲೆಬಿಸಿ ಕಾಡುತ್ತಿದ್ದಂತೆ, ತಲೆಗೆ ಕ್ಯಾಪ್, ಮುಖಕ್ಕೆ ಮಾಸ್ಕ್ ಮತ್ತು ಕೈತುಂಬುವಂತ ಶರ್ಟ್ ಧರಿಸಿ, ರೈಲಿನಲ್ಲಿ ಕೊಟ್ಟ ಬೆಡ್ಶೀಟ್ಗಳನ್ನು ಮುಚ್ಚಿಕೊಂಡು ಯಾರಿಗೆ ಸುಳಿವು ಸಿಗದಂತೆ ಮನೆ ಸೇರಿರುವುದು ಹಾಸ್ಯಸ್ಪದ.
ಹೊರಡುವ 5 ನಿಮಿಷ ಮುಂಚೆ...
ಮಾ.09ರ ಬೆಳಗ್ಗೆ 5:10 ಗಂಟೆಗೆ ರೈಲು ಬಿಡುವ ಸಮಯ ನೋಡಿಕೊಂಡು, ಮೊದಲು ಪತ್ನಿ ಮತ್ತು ಅವರ ಸ್ನೇಹಿತೆಯನ್ನು ಕೋಚ್ನೊಳಗೆ ಕೂರಲು ಹೇಳಿ, ತಾನು ಕಾರಿನಲ್ಲಿಯೇ ದುಬೆ ಕಾದು ಕುಳಿತಿದ್ದರು. ಕಾರಣ, ಎಲ್ಲಿ ಅಭಿಮಾನಿಗಳು ತನ್ನನ್ನು ಗಮನಿಸಿ, ಮುಗಿಬೀಳುತ್ತಾರೋ ಎಂದು, ರೈಲು ಹೊರಡುವ 5 ನಿಮಿಷ ಇರುವಂತೆ ಹೇಳು, ನಾನು ರೈಲು ಹತ್ತುವೆ ಎಂದು ಪತ್ನಿಗೆ ಶಿವಂ ತಿಳಿಸಿದ್ದಾಗಿ 'ಎನ್ಡಿಟಿವಿ' ವರದಿ ಉಲ್ಲೇಖಿಸಿದೆ.
ಪ್ರಯಾಣದ ಮಧ್ಯೆ ಮತ್ತೊಂದು ಮಜಾ!
ಎಲ್ಲರ ಕಣ್ತಪ್ಪಿಸಿ ಬಂದು ಕುಳಿತಿದ್ದೀವಿ ಎಂದು ನಿಟ್ಟುಸಿರು ಬಿಟ್ಟು ದುಬೆ ದಂಪತಿಗೆ ಮತ್ತೊಂದು ಶಾಕ್ ಎದುರಾಗಿದ್ದೇ ಟಿಕೆಟ್ ಕಲೆಕ್ಟರ್. ಬೋಗಿಯೊಳಗೆ ಪ್ರಯಾಣಿಸುತ್ತಿದ್ದವರ ಟಿಕೆಟ್ ಚೆಕ್ ಮಾಡುತ್ತಿದ್ದ ಅಧಿಕಾರಿಯ ಆಗಮನ ಕಂಡು, ದುಬೆ ಕೂಡಲೇ ವಾಶ್ರೂಮ್ಗೆ ಹೋಗಿದ್ದಾರೆ. ಈ ವೇಳೆ, "ಶಿವಂ ದುಬೆ? ಟೀಮ್ ಇಂಡಿಯಾ ಕ್ರಿಕೆಟಿಗನಾ?" ಎಂದು ಶಿವಂ ಪತ್ನಿ ಅಂಜುಮ್ಗೆ ಕಲೆಕ್ಟರ್ ಪ್ರಶ್ನಿಸಿದ್ದಾರೆ. ತಬ್ಬಿಬ್ಬಾದ ಅಂಜುಮ್, "ಇಲ್ಲ, ಇಲ್ಲ. ಅವರು ಇಲ್ಲಿಗೆ ಏಕೆ ಬರ್ತಾರೆ ಎಂದೇಳುವ ಮೂಲಕ ಟಿಸಿಯಿಂದ ಬಚಾವ್ ಆಗಿದ್ದಾರೆ,(ಏಜೆನ್ಸೀಸ್).