ಶಮಿ ಟೆಸ್ಟ್ ನಿವೃತ್ತಿಗೆ ರವಿಶಾಸ್ತ್ರಿ ಅಸಮಾಧಾನ  
ಕ್ರಿಕೆಟ್

ಒಬ್ಬ ಆಟಗಾರ ಇನ್ನೇನು ಮಾಡಲು ಸಾಧ್ಯ? ಆಯ್ಕೆ ಮಂಡಳಿ ಮಾಡಿದ್ದು ಸರಿಯಲ್ಲ! ಶಮಿ ಟೆಸ್ಟ್ ನಿವೃತ್ತಿಗೆ ರವಿಶಾಸ್ತ್ರಿ ಅಸಮಾಧಾನ | Ravi Shastri

Ravi Shastri: ಭಾರತೀಯ ಕ್ರಿಕೆಟ್‌ನ ಹಿರಿಯ ವೇಗಿ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಬೆನ್ನಲ್ಲೇ, ಟೀಮ್​ ಇಂಡಿಯಾ ಮಾಜಿ ಹೆಡ್​ ಕೋಚ್ ರವಿಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದು, ಶಮಿ ಅವರಲ್ಲಿ ಟೆಸ್ಟ್​​ಗೆ ನೀಡಲು ಇನ್ನೂ ಸಾಕಷ್ಟು ಕ್ರಿಕೆಟ್ ಬಾಕಿ ಇತ್ತು ಮತ್ತು ಅವರು ನಿವೃತ್ತಿ ನಿರ್ಧಾರ ತಳೆಯುವ ಮೊದಲು ಅವರಿಗೆ ಮತ್ತೊಂದು ಅವಕಾಶ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ನವೆಂಬರ್ 6 ರಂದು ಶಮಿ ತಮ್ಮ 13 ವರ್ಷಗಳ ಸುದೀರ್ಘ ಟೆಸ್ಟ್ ವೃತ್ತಿಜೀವನಕ್ಕೆ ತೆರೆ ಎಳೆದರು. 64 ಪಂದ್ಯಗಳಿಂದ 229 ವಿಕೆಟ್ ಪಡೆದಿರುವ ಶಮಿ, ಜೂನ್ 2023ರ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್‌ನಲ್ಲಿ ಕೊನೆಯ ಬಾರಿಗೆ ಭಾರತದ ಪರ ಟೆಸ್ಟ್ ಆಡಿದ್ದರು.

ಶಮಿ ಬಳಿ 30-40 ವಿಕೆಟ್ ಪಡೆಯುವ ತಾಕತ್ತಿತ್ತು!

ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಎಕ್ಸ್ಟ್ರಾ ಇನ್ನಿಂಗ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಶಾಸ್ತ್ರಿ, ದೇಶಕ್ಕಾಗಿ ಅತ್ಯುತ್ತಮವಾಗಿ ಆಡಿದ ಆಟಗಾರ ಹೀಗೆ ನಿರ್ಗಮಿಸುವುದು ಬೇಸರ ತರುತ್ತದೆ. ಶಮಿ ಅವರಲ್ಲಿ ಇನ್ನೂ 30 ರಿಂದ 40 ಟೆಸ್ಟ್ ವಿಕೆಟ್ ಪಡೆಯುವ ಸಾಮರ್ಥ್ಯವಿತ್ತು. ಕಳೆದ 12 ತಿಂಗಳುಗಳಲ್ಲಿ ಅವರು ಟೀಮ್​ ಇಂಡಿಯಾ ಟೆಸ್ಟ್ ತಂಡದ ಪ್ರಮುಖ ಭಾಗವಾಗಿರಬೇಕಿತ್ತು ಎಂದಿದ್ದಾರೆ.

2023ರ ಏಕದಿನ ವಿಶ್ವಕಪ್ ನಂತರ ಶಮಿ ಸರಣಿ ಗಾಯದ ಸಮಸ್ಯೆಗಳಿಂದ ಬಳಲಿದ್ದರು. 2024ರ ಫೆಬ್ರವರಿಯಲ್ಲಿ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು, ಆಸ್ಟ್ರೇಲಿಯಾ ಪ್ರವಾಸದ 5 ಟೆಸ್ಟ್‌ಗಳ ಸರಣಿಯಿಂದ ಹೊರಗುಳಿದಿದ್ದರು. ನಂತರ ಜನವರಿ 2025 ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ಮೂಲಕ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಮರಳಿದ್ದರು.

ಆದರೆ, 2025ರ ಇಂಗ್ಲೆಂಡ್ ಟೆಸ್ಟ್ ಪ್ರವಾಸದ ವೇಳೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಶಮಿ ಅವರ ವರ್ಕ್‌ಲೋಡ್ ಇನ್ನು ಸರಿಯಾಗಿಲ್ಲ ಮತ್ತು ವೈದ್ಯಕೀಯ ಸಿಬ್ಬಂದಿ ಅವರನ್ನು ಸುದೀರ್ಘ ಸರಣಿಗೆ ಆಯ್ಕೆ ಮಾಡದಂತೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದ್ದರು. ಈ ನಿರ್ಧಾರವನ್ನು ಖಂಡಿಸಿರುವ ಶಾಸ್ತ್ರಿ, ಕೇವಲ ಜಿಮ್ ಫಿಟ್‌ನೆಸ್ ಆಧಾರದ ಮೇಲೆ ಆಟಗಾರರನ್ನು ನಿರ್ಣಯಿಸುವುದನ್ನು ಪ್ರಶ್ನಿಸಿದ್ದಾರೆ.

ಪಂದ್ಯವೊಂದರಲ್ಲಿ 10 ರಿಂದ 12 ಓವರ್‌ಗಳನ್ನು ಬೌಲಿಂಗ್ ಮಾಡಲು ಸಾಧ್ಯವಾಗದಿದ್ದರೆ ಜಿಮ್‌ನಲ್ಲಿ ಫಿಟ್ ಆಗಿದ್ದು ಏನು ಪ್ರಯೋಜನ? ಶಮಿ ಮೈದಾನದಲ್ಲಿ ಬೌಲಿಂಗ್ ಮಾಡಲು ಸಿದ್ಧವಾಗಿದ್ದರೂ ಅವರಿಗೆ ಮತ್ತೊಂದು ಅವಕಾಶ ನೀಡದಿರುವುದು ಬೇಸರ ತಂದಿದೆ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರಿಚರ್ಡ್ ಹ್ಯಾಡ್ಲಿ ಮತ್ತು ವಾಸಿಂ ಅಕ್ರಮ್ ಅವರಂತೆ ನಿರಂತರವಾಗಿ ಬೌಲಿಂಗ್ ಮಾಡುವ ಮೂಲಕ ರಿದಮ್ ಕಂಡುಕೊಳ್ಳುವ ಬೌಲರ್ ಶಮಿ ಎಂದು ಶಾಸ್ತ್ರಿ ಉದಾಹರಿಸಿದ್ದಾರೆ.

ದೇಶಿ ಕ್ರಿಕೆಟ್‌ನಲ್ಲಿ ಶಮಿ ಭರ್ಜರಿ ಪ್ರದರ್ಶನ

ತಂಡದಿಂದ ಹೊರಗುಳಿದಿದ್ದರೂ ಶಮಿ ಬಂಗಾಳ ಪರ ರಣಜಿ ಹಾಗೂ ಈಸ್ಟ್ ಝೋನ್ ಪರ ದುಲೀಪ್ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಈ ವರ್ಷದ ದುಲೀಪ್ ಟ್ರೋಫಿಯಲ್ಲಿ 7 ವಿಕೆಟ್ ಹಾಗೂ 2026-27ರ ರಣಜಿ ಟ್ರೋಫಿಯ ಮೊದಲ 3 ಪಂದ್ಯಗಳಲ್ಲೇ 14.00 ಸರಾಸರಿಯಲ್ಲಿ 14 ವಿಕೆಟ್ ಕಸಿದಿದ್ದರು. ದೆಹಲಿ ವಿರುದ್ಧ 5/59 ಹಾಗೂ ಮಹಾರಾಷ್ಟ್ರ ವಿರುದ್ಧ 4/37 ವಿಕೆಟ್ ಪಡೆದು ತಮ್ಮ ಫಿಟ್‌ನೆಸ್ ಸಾಬೀತುಪಡಿಸಿದ್ದರು.

ಅವರ ಫಿಟ್‌ನೆಸ್ ಸರಿಯಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿತ್ತು. ಆದರೆ ಅವರು ಬಂಗಾಳ ಪರ ಪ್ರತಿಯೊಂದು ಪಂದ್ಯದಲ್ಲೂ 15-20 ಓವರ್‌ಗಳನ್ನು ಎಸೆಯುತ್ತಿದ್ದರು. ಫಿಟ್‌ನೆಸ್ ಸಾಬೀತುಪಡಿಸಲು ಒಬ್ಬ ಆಟಗಾರ ಇನ್ನೇನು ಮಾಡಲು ಸಾಧ್ಯ? ಎಂದು ಶಾಸ್ತ್ರಿ ಆಯ್ಕೆ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಶಮಿ ಭವಿಷ್ಯವೇನು?

ಟೆಸ್ಟ್‌ನಿಂದ ನಿವೃತ್ತಿಯಾಗಿದ್ದರೂ ಶಮಿ ವೈಟ್-ಬಾಲ್ (ಏಕದಿನ ಮತ್ತು ಟಿ20) ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ. 2027ರಲ್ಲಿ ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಭಾರತ ತಂಡದ ಬಾಗಿಲು ಅವರಿಗೆ ಇನ್ನೂ ತೆರೆದಿದೆ. 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ 5 ಪಂದ್ಯಗಳಿಂದ 9 ವಿಕೆಟ್ ಪಡೆದು ಮಿಂಚಿದ್ದ ಶಮಿ, ಜಂಟಿ ಗರಿಷ್ಠ ವಿಕೆಟ್ ಟೇಕರ್ ಆಗಿದ್ದರು.

ಮುಂದಿನ ಐಪಿಎಲ್ ಮತ್ತು ದೇಶಿ ಪಂದ್ಯಗಳಲ್ಲಿ ಶಮಿ ಉತ್ತಮ ಪ್ರದರ್ಶನ ನೀಡಿದರೆ, ಹಿರಿಯ ಬೌಲರ್‌ಗಳಿಗೆ ಗಾಯವಾದಾಗ ಭಾರತ ತಂಡಕ್ಕೆ ಶಮಿ ಅವರ ಅನುಭವದ ಅಗತ್ಯ ಖಂಡಿತ ಬರಲಿದೆ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್​).