INDvWI: ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ 4ನೇ ಪಂದ್ಯದಲ್ಲಿ ಕೆರಿಬಿಯನ್ ಪಡೆ ಮತ್ತೊಮ್ಮೆ ತನ್ನ ಅಬ್ಬರವನ್ನು ಮುಂದುವರಿಸಿದ್ದು, ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡ ಟೀಮ್ ಇಂಡಿಯಾ ರಣತಂತ್ರವನ್ನು ವಿಂಡೀಸ್ ಸಂಪೂರ್ಣವಾಗಿ ತಲೆಕೆಳಗೆ ಮಾಡುವ ಮೂಲಕ ನಿಗದಿತ 20 ಓವರ್ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 247 ರನ್ಗಳನ್ನು ಕಲೆಹಾಕಿ ಶ್ರೇಯಸ್ ಪಡೆಗೆ ಬೃಹತ್ ಗುರಿ ನೀಡಿದೆ.
ವೆಸ್ಟ್ ಇಂಡೀಸ್ ಇನ್ನಿಂಗ್ಸ್ನ ಪ್ರಮುಖ ಆಧಾರಸ್ತಂಭವಾಗಿದ್ದ ಶಾಯ್ ಹೋಪ್ ಮತ್ತೊಮ್ಮೆ ತಮ್ಮ ಅದ್ಭುತ ಬ್ಯಾಟಿಂಗ್ ಕೌಶಲವನ್ನು ಪ್ರದರ್ಶಿಸಿದರು. ಆರಂಭದಿಂದಲೂ ಎಚ್ಚರಿಕೆಯ ಹಾಗೂ ಜವಾಬ್ದಾರಿಯುತ ಆಟವಾಡಿದ ಅವರು, ಕೊನೆಯವರೆಗೂ ಕ್ರೀಸ್ನಲ್ಲಿ ನಿಂತು ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೋಪ್ ಆಟಕ್ಕೆ ಶೆರ್ಫಾನ್ ರುದರ್ಫೋರ್ಡ್ ಹಾಗೂ ಶಿಮ್ರಾನ್ ಹೆಟ್ಮೆಯರ್ ತಕ್ಕ ಸಾಥ್ ನೀಡಿದರು.
ಶಿಮ್ರಾನ್ ಹೆಟ್ಮೆಯರ್ ಕೇವಲ 12 ಎಸೆತಗಳಲ್ಲಿ ಸಿಡಿಲಬ್ಬರದ 33 ರನ್ಗಳನ್ನು ಸಿಡಿಸಿ ಭಾರತದ ಬೌಲಿಂಗ್ ವಿಭಾಗವನ್ನು ಸಂಪೂರ್ಣವಾಗಿ ಹೈರಾಣಾಗಿಸಿದರು. ಮತ್ತೊಂದೆಡೆ ಶೆರ್ಫಾನ್ ರುದರ್ಫೋರ್ಡ್ ಕೂಡ ತಮ್ಮ ಎಂದಿನ ಶೈಲಿಯಲ್ಲಿ ಬೌಂಡರಿ ಹಾಗೂ ಸಿಕ್ಸರ್ಗಳ ಸುರಿಮಳೆಗೈದರು.
ವಿಂಡೀಸ್ ತಂಡದ ಈ ಬ್ಯಾಟಿಂಗ್ ಅಬ್ಬರದ ಎದುರು ಭಾರತದ ಬೌಲರ್ಗಳು ರನ್ ತಡೆಯಲು ಪರದಾಡಿದರು. ಯುವ ವೇಗಿ ಪ್ರಿನ್ಸ್ ಯಾದವ್ ಮಾತ್ರ 4 ಓವರ್ಗಳಲ್ಲಿ ಕೇವಲ 36 ರನ್ ನೀಡಿ 1 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಇನ್ನುಳಿದ ಯಾವ ಬೌಲರ್ಗಳು ಇವರಿಗೆ ಸಾಥ್ ನೀಡಲಿಲ್ಲ. ಸರಣಿಯಲ್ಲಿ ಈಗಾಗಲೇ 2-1 ಮುನ್ನಡೆ ಹೊಂದಿರುವ ಟೀಮ್ ಇಂಡಿಯಾಗೆ ಈ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಅವಕಾಶವಿದ್ದು, ಕೆರಿಬಿಯನ್ನರು ನೀಡಿರುವ 248 ರನ್ಗಳ ಬೃಹತ್ ಗುರಿಯನ್ನು ಶ್ರೆಯಸ್ ಪಡೆ ತಲುಪಬೇಕಿದೆ.(ಏಜೆನ್ಸೀಸ್).