ಆಫ್ಘನ್ ವಿರುದ್ಧ ಸರಣಿಗೆ ನಾಳೆ ಭಾರತ ತಂಡ ಆಯ್ಕೆ
ಗುವಾಹಟಿ: ಐಪಿಎಲ್ ಬೆನ್ನಲ್ಲೇ ನಡೆಯಲಿರುವ ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ (Afghanistan series) ಏಕೈಕ ಟೆಸ್ಟ್ ಮತ್ತು 3 ಪಂದ್ಯಗಳ ಏಕದಿನ ಸರಣಿಗೆ ಮಂಗಳವಾರ ಗುವಾಹಟಿಯಲ್ಲಿ ಭಾರತ ತಂಡದ ಆಯ್ಕೆ ನಡೆಯಲಿದೆ. ವೇಗಿ ಜಸ್ಪ್ರೀತ್ ಬುಮ್ರಾ ಮೇಲಿನ ಕಾರ್ಯದೊತ್ತಡ ಮತ್ತು ಮಾಜಿ ನಾಯಕ ರೋಹಿತ್ ಶರ್ಮ ಅವರ ಮ್ಯಾಚ್ ಫಿಟ್ನೆಸ್ ಬಗ್ಗೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುವ ನಿರೀಕ್ಷೆ ಇದೆ.
ಮೇ 31ರಂದು ಅಹಮದಾಬಾದ್ನಲ್ಲಿ ಐಪಿಎಲ್ ಫೈನಲ್ ನಡೆದರೆ, ಜೂನ್ 6ರಂದು ಮುಲ್ಲನ್ಪುರದಲ್ಲಿ ಏಕೈಕ ಟೆಸ್ಟ್ ಶುರುವಾಗಲಿದೆ. ಅಂದರೆ ಐಪಿಎಲ್ ಮುಗಿದು ಒಂದು ವಾರಕ್ಕೂ ಕಡಿಮೆ ಸಮಯದಲ್ಲಿ ಟೆಸ್ಟ್ ಆರಂಭವಾಗಲಿದೆ. ಬಳಿಕ ಜೂನ್ 14, 17 ಮತ್ತು 20ರಂದು ಕ್ರಮವಾಗಿ ಧರ್ಮಶಾಲಾ, ಲಖನೌ ಮತ್ತು ಚೆನ್ನೈನಲ್ಲಿ ಏಕದಿನ ಪಂದ್ಯಗಳು ನಡೆಯಲಿವೆ. ಹೀಗಾಗಿ ಬುಮ್ರಾ ಎರಡೂ ಸರಣಿಯಲ್ಲಿ ಆಡುವ ಸಾಧ್ಯತೆ ಇಲ್ಲ. ಅಲ್ಲದೆ 50 ಓವರ್ಗಳ ವಿಶ್ವಕಪ್ಗೆ ಇನ್ನೂ ಒಂದು ವರ್ಷಕ್ಕೂ ಹೆಚ್ಚು ಸಮಯ ಬಾಕಿ ಇರುವುದರಿಂದ, ಏಕದಿನ ತಂಡದಲ್ಲಿ ಅವರು ಸದ್ಯಕ್ಕೆ ಸ್ಥಾನ ಪಡೆಯುವ ಸಾಧ್ಯತೆ ಇಲ್ಲ.
ಮತ್ತೊಂದೆಡೆ 39 ವರ್ಷದ ರೋಹಿತ್ ಶರ್ಮ ಐಪಿಎಲ್ ವೇಳೆ ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲಿದ್ದು, 3 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ನಂತರವೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ಗೆ ಮಾತ್ರ ಮರಳಿದ್ದಾರೆ. ಹೀಗಾಗಿ ಏಕದಿನ ಕ್ರಿಕೆಟ್ನಲ್ಲಿ 100 ಓವರ್ಗಳ ಆಡಲು ಅವರು ಸಂಪೂರ್ಣ ಫಿಟ್ ಆಗಿರುವರೇ ಎಂದು ಆಯ್ಕೆಗಾರರು ಪರಿಶೀಲಿಸಲಿದ್ದಾರೆ.
ಇದೇ ವೇಳೆ 37 ವರ್ಷದ ವಿರಾಟ್ ಕೊಹ್ಲಿ ಸದ್ಯ ಏಕ ಮಾದರಿಯ ಕ್ರಿಕೆಟಿಗ ಆಗಿದ್ದರೂ, ಅವರ ಫಿಟ್ನೆಸ್ ಬಗ್ಗೆ ಯಾವುದೇ ಅನುಮಾನವಿಲ್ಲ. ಹೀಗಾಗಿ ಆಫ್ಘನ್ ವಿರುದ್ಧದ ಎಲ್ಲ 3 ಏಕದಿನಗಳಿಗೂ ಅವರು ಆಡುವ ನಿರೀಕ್ಷೆ ಇದೆ. ಇನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಏಕದಿನ ಸರಣಿಯಲ್ಲಿ ಸ್ಥಾನ ಪಡೆಯುವ ಬಗ್ಗೆ ಅನುಮಾನಗಳಿವೆ.
ನಬಿ, ಪ್ರಿನ್ಸ್ಗೆ ಚಾನ್ಸ್?
ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ 60 ವಿಕೆಟ್ ಕಬಳಿಸಿದ್ದಲ್ಲದೆ, ಜಮ್ಮು&ಕಾಶ್ಮೀರದ ಐತಿಹಾಸಿಕ ರಣಜಿ ಟ್ರೋಫಿ ಗೆಲುವಿಗೂ ನೆರವಾಗಿದ್ದ ವೇಗಿ ಅಕಿಬ್ ನಬಿ ಆಫ್ಘನ್ ವಿರುದ್ಧ ಟೆಸ್ಟ್ನಲ್ಲಿ ಅವಕಾಶ ಪಡೆಯುವ ಸಾಧ್ಯತೆಗಳಿವೆ. ಜತೆಗೆ ಐಪಿಎಲ್ನಲ್ಲಿ ಲಖನೌ ಪರ ತನ್ನ ವೇಗ ಮತ್ತು ನಿಖರತೆಯಿಂದ ಗಮನಸೆಳೆದಿರುವ ಯುವ ವೇಗಿ ಪ್ರಿನ್ಸ್ ಯಾದವ್ ಏಕದಿನ ಸರಣಿಯಲ್ಲಿ ಅವಕಾಶ ಪಡೆಯುವ ನಿರೀಕ್ಷೆ ಇದೆ.
ಭಾರತ ತಂಡದ ಬ್ಯಾಟರ್ಗಳು ಇತ್ತೀಚೆಗೆ ತವರಿನ ಟೆಸ್ಟ್ ಸರಣಿಗಳಲ್ಲಿ ಸ್ಪಿನ್ ಬೌಲಿಂಗ್ ಎದುರು ಪರದಾಡಿದ್ದಾರೆ. ಕಳೆದ ನವೆಂಬರ್ನಲ್ಲಿ ದ. ಆಫ್ರಿಕಾ ಎದುರು ಕಂಡ ಸರಣಿ ಸೋಲು ಇದಕ್ಕೆ ತಾಜಾ ಉದಾಹರಣೆ. ಅಲ್ಲದೆ ಚೇತೇಶ್ವರ ಪೂಜಾರ ನಿರ್ಗಮನದ ಬಳಿಕ ಭಾರತ ಟೆಸ್ಟ್ ತಂಡದ 3ನೇ ಕ್ರಮಾಂಕದಲ್ಲಿ ಯಾರೂ ಸ್ಥಿರ ನಿರ್ವಹಣೆ ತೋರಿಲ್ಲ. ಸಾಯಿ ಸುದರ್ಶನ್ ಇತ್ತೀಚೆಗೆ ಈ ಸ್ಥಾನದಲ್ಲಿ ಹಲವು ಅವಕಾಶ ಪಡೆದರೂ ಯಶಸ್ಸು ಸಾಧಿಸಿಲ್ಲ. ಹೀಗಾಗಿ ಈ ಬಾರಿ ಕನ್ನಡಿಗ ದೇವದತ್ ಪಡಿಕ್ಕಲ್ಗೆ ಈ ಸ್ಥಾನ ಒಲಿಯುವ ನಿರೀಕ್ಷೆ ಇದೆ. ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಉತ್ತಮ ನಿರ್ವಹಣೆ ತೋರಿರುವುದು ಕೂಡ ಅವರಿಗೆ ಬಲ ತುಂಬಲಿದೆ.