ಎರಡನೇ ಆವೃತ್ತಿಯ ಕೋಲಾರ ಓಪನ್ ಆಗಸ್ಟ್ 18ರಿಂದ 21ರವರೆಗೆ: ₹1 ಕೋಟಿ ಬಹುಮಾನ ಮೊತ್ತ 
ಕ್ರಿಕೆಟ್

ಎರಡನೇ ಆವೃತ್ತಿಯ ಕೋಲಾರ ಓಪನ್ ಆಗಸ್ಟ್ 18 ರಿಂದ 21ರವರೆಗೆ: ₹1 ಕೋಟಿ ಬಹುಮಾನ ಮೊತ್ತ

ಕೋಲಾರ: ಭಾರತದ ವೃತ್ತಿಪರ

ಗಾಲ್ಫ್

ಅಧಿಕೃತ ಮಾನ್ಯತಾ ಸಂಸ್ಥೆಯಾದ ಡಿಪಿ ವರ್ಲ್ಡ್ ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ (ಡಿಪಿ ವರ್ಲ್ಡ್ ಪಿಜಿಟಿಐ) ಮತ್ತು ಜಿಯಾನ್ ಹಿಲ್ಸ್ ಗಾಲ್ಫ್ ಕೌಂಟಿ ಜಂಟಿಯಾಗಿ 2ನೇ ಆವೃತ್ತಿಯ ಕೋಲಾರ್ ಓಪನ್ ಪಂದ್ಯಾವಳಿಯನ್ನು ಆಯೋಜಿಸುವುದಾಗಿ ಘೋಷಿಸಿವೆ. ಜಿಯಾನ್ ಹಿಲ್ಸ್ ಗಾಲ್ಫ್ ಕೌಂಟಿಯಲ್ಲಿ ಆಗಸ್ಟ್ 18ರಿಂದ 21ರವರೆಗೆ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಒಟ್ಟು ₹1 ಕೋಟಿ ಬಹುಮಾನ ಮೊತ್ತ ನೀಡಲಾಗುತ್ತದೆ.

ಭಾರತದ ಪ್ರಮುಖ ವೃತ್ತಿಪರ ಗಾಲ್ಫ್ ಆಟಗಾರರಾದ ಡಿಪಿ ವರ್ಲ್ಡ್ ಪಿಜಿಟಿಐ ಆರ್ಡರ್ ಆಫ್ ಮೆರಿಟ್ನ ಅಗ್ರಸ್ಥಾನಿ ಸಪ್ತಕ್ ತಲ್ವಾರ್, ವೀರ್ ಅಹ್ಲಾವತ್, ಓಂ ಪ್ರಕಾಶ್ ಚೌಹಾಣ್, ಮನು ಗಾಂದಾಸ್, ಶೌರ್ಯ ಭಟ್ಟಾಚಾರ್ಯ, ಶುಭಂ ಜಗ್ಲಾನ್ ಹಾಗೂ ಹಾಲಿ ಚಾಂಪಿಯನ್ ಕ್ಷಿತಿಜ್ ನವೀದ್ ಕೌಲ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಕಣಕ್ಕಿಳಿಯಲಿದ್ದಾರೆ.
ವಿದೇಶಿ ಆಟಗಾರರ ಪೈಕಿ ಶ್ರೀಲಂಕಾದ ಎನ್. ಥಂಗರಾಜಾ ಮತ್ತು ಮಿಥುನ್ ಪೆರೇರಾ, ಬಾಂಗ್ಲಾದೇಶದ ಜಮಾಲ್ ಹೊಸೈನ್ ಮತ್ತು ಬಾದಲ್ ಹೊಸೈನ್, ನೇಪಾಳದ ಸುಭಾಷ್ ತಮಾಂಗ್, ಜೆಕಿಯಾದ ಸ್ಟೆಪನ್ ಡ್ಯಾನೆಕ್, ಅಮೆರಿಕದ ಕೊಯಿಚಿರೋ ಸಾಟೊ ಮತ್ತು ಡೊಮಿನಿಕ್ ಪಿಸಿರಿಲ್ಲೊ, ಜಪಾನ್ನ ಕೊಯಿಚಿರೋ ಇಶಿಕಾ ಮತ್ತು ತೈಗಾ ತನಕಾ, ಉಗಾಂಡಾದ ಜೋಶುವಾ ಸೀಲ್ ಮತ್ತು ಮಾರ್ವಿನ್ ಕಿಬಿರಿಗೆ ಹಾಗೂ ಕೆನಡಾದ ಸುಖರಾಜ್ ಸಿಂಗ್ ಗಿಲ್ ಸ್ಪರ್ಧಿಸಲಿದ್ದಾರೆ.
ಬೆಂಗಳೂರಿನ ಪ್ರಮುಖ ವೃತ್ತಿಪರ ಆಟಗಾರರಾದ ಮನೋಜ್ ಎಸ್., ಚಿಕ್ಕರಂಗಪ್ಪ ಎಸ್., ರಹಿಲ್ ಗಾಂಗ್ಜೀ, ಮಾರಿ ಮುತ್ತು ಆರ್., ಅಕ್ಷಯ್ ನೆರಂಜನ್ ಮತ್ತು ವರುಣ್ ಮುತ್ತಪ್ಪ ಕೂಡ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.
ಜಿಯಾನ್ ಹಿಲ್ಸ್ ಗಾಲ್ಫ್ ಕೌಂಟಿಯ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಮೆನೊಂಪರಂಪಿಲ್ ಮಾತನಾಡಿ, “ಜಿಯಾನ್ ಹಿಲ್ಸ್ ಗಾಲ್ಫ್ ಕೌಂಟಿ ಪ್ರಸ್ತುತಪಡಿಸುವ ಕೋಲಾರ್ ಓಪನ್ನ ಎರಡನೇ ಆವೃತ್ತಿಯನ್ನು ಆಯೋಜಿಸುತ್ತಿರುವುದು ನಮಗೆ ಸಂತಸ ತಂದಿದೆ.
ಕಳೆದ ವರ್ಷ ನಮ್ಮ ಸಂಪೂರ್ಣ 18-ಹೋಲ್ ಕೋರ್ಸ್ ಆರಂಭಗೊಂಡು ಮೊದಲ ಕೋಲಾರ್ ಓಪನ್ ನಡೆದಿತ್ತು. ಇದೀಗ ಪಂದ್ಯಾವಳಿ ಮತ್ತೆ ನಮ್ಮ ಕೋರ್ಸ್ಗೆ ಮರಳುತ್ತಿರುವುದು ಉತ್ಸಾಹ ಮೂಡಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೆಲವು ಹೊಸ ಟೀಸ್ಗಳನ್ನು ಸೇರ್ಪಡೆಗೊಳಿಸಲಾಗಿದೆ. ಬಲವಾದ ಗಾಳಿಯ ನಿರೀಕ್ಷೆಯಿರುವುದರಿಂದ ಆಟಗಾರರಿಗೆ ಮತ್ತಷ್ಟು ಸವಾಲು ಎದುರಾಗಲಿದೆ. ದೇಶದ ಅತ್ಯುತ್ತಮ ಗಾಲ್ಫ್ ಪ್ರತಿಭೆಗಳನ್ನು ಮತ್ತೆ ಜಿಯಾನ್ ಹಿಲ್ಸ್ಗೆ ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ,” ಎಂದರು.
ಡಿಪಿ ವರ್ಲ್ಡ್ ಪಿಜಿಟಿಐನ ಸಿಇಒ ಅಮಂದೀಪ್ ಜೋಹಲ್ ಮಾತನಾಡಿ, “ದೇಶದ ಹೊಸ ಹೊಸ ಸ್ಥಳಗಳಿಗೆ ವೃತ್ತಿಪರ ಗಾಲ್ಫ್ ಅನ್ನು ಕೊಂಡೊಯ್ಯುವ ಡಿಪಿ ವರ್ಲ್ಡ್ ಪಿಜಿಟಿಐನ ಪ್ರಯತ್ನದಲ್ಲಿ ಕೋಲಾರ್ ಓಪನ್ ಪ್ರಮುಖ ಪಾತ್ರ ವಹಿಸುತ್ತದೆ. ಕಳೆದ ವರ್ಷದ ಮೊದಲ ಆವೃತ್ತಿಯ ಯಶಸ್ಸು ಜಿಯಾನ್ ಹಿಲ್ಸ್ ಗಾಲ್ಫ್ ಕೌಂಟಿಯು ಪ್ರಮುಖ ಚಾಂಪಿಯನ್ಶಿಪ್ ವೇದಿಕೆಯಾಗಿ ಹೊಂದಿರುವ ಸಾಮರ್ಥ್ಯವನ್ನು ತೋರಿಸಿತು. ಈ ವರ್ಷವೂ ನಮ್ಮೊಂದಿಗೆ ಕೈಜೋಡಿಸಿರುವ ಜಿಯಾನ್ ಹಿಲ್ಸ್ ಗಾಲ್ಫ್ ಕೌಂಟಿಗೆ ಧನ್ಯವಾದಗಳು.
ಭಾರತದ ಅಗ್ರ ವೃತ್ತಿಪರ ಆಟಗಾರರು ಡಿಪಿ ವರ್ಲ್ಡ್ ಪಿಜಿಟಿಐ ಆರ್ಡರ್ ಆಫ್ ಮೆರಿಟ್ನಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಪೈಪೋಟಿ ನಡೆಸಲಿರುವುದರಿಂದ ಮತ್ತೊಂದು ರೋಚಕ ಸ್ಪರ್ಧೆಗೆ ವೇದಿಕೆ ಸಿದ್ಧವಾಗಿದೆ,” ಎಂದರು.
ಪ್ರಸಿದ್ಧ ಗಾಲ್ಫ್ ಕೋರ್ಸ್ ವಿನ್ಯಾಸಕಾರ ರೊನಾಲ್ಡ್ ಫ್ರೀಮ್ ವಿನ್ಯಾಸಗೊಳಿಸಿರುವ ಅತ್ಯಂತ ಸವಾಲಿನ, ಚಾಂಪಿಯನ್ಶಿಪ್ ಮಟ್ಟದ 18-ಹೋಲ್ ಗಾಲ್ಫ್ ಕೋರ್ಸ್ ಜಿಯಾನ್ ಹಿಲ್ಸ್ನ ಪ್ರಮುಖ ಆಕರ್ಷಣೆಯಾಗಿದೆ.
ವಿಶಾಲವಾದ ಗ್ರಾನೈಟ್ ಶಿಲಾ ಪ್ರದೇಶಗಳು, ಕಂದು ಬಣ್ಣದ ಬಂಡೆಗಳು ಮತ್ತು ಅನೇಕ ಕೆರೆಗಳು, ಅಲೆಗಳಂತಿರುವ ಹಸಿರು ಮೈದಾನಗಳೊಂದಿಗೆ ಬೆಸೆದುಕೊಂಡಿದ್ದು, ಅನುಭವಿ ಆಟಗಾರರಿಗೆ ಸವಾಲು ಒಡ್ಡುವಂತೆಯೂ, ಹೊಸಬರನ್ನು ಉತ್ತೇಜಿಸುವಂತೆಯೂ ಕೋರ್ಸ್ ರೂಪುಗೊಂಡಿದೆ.
ಈ ಪಂದ್ಯಾವಳಿಗೆ ಟೈಟಲ್ ಪಾರ್ಟ್ನರ್ ಜಿಯಾನ್ ಹಿಲ್ಸ್ ಗಾಲ್ಫ್ ಕೌಂಟಿ, ಡಿಪಿ ವರ್ಲ್ಡ್ ಪಿಜಿಟಿಐನ ಅಂಬ್ರೆಲ್ಲಾ ಪಾರ್ಟ್ನರ್ ಡಿಪಿ ವರ್ಲ್ಡ್ ಹಾಗೂ ಆಕ್ಸಿಸ್ ಬ್ಯಾಂಕ್, ಅಮೂಲ್, ಅಮೃತಾಂಜನ್ ಎನರ್ಲೈಟ್, ಏರ್ ಇಂಡಿಯಾ ಮಹಾರಾಜಾ ಕ್ಲಬ್, ಕ್ಯಾಂಪಾ ಮತ್ತು ಕಲ್ಯಾಣಿ ಟೂರ್ ಪಾರ್ಟ್ನರ್ಗಳಾಗಿ ಬೆಂಬಲ ನೀಡುತ್ತಿದ್ದಾರೆ.