- ಜಿಟಿ ವಿರುದ್ಧದ ಪಂದ್ಯದಲ್ಲಿ ಕೇವಲ 11 ರನ್ಗೆ ಔಟ್
- 11 ರನ್ ಗಳಿಸಿದ್ರೂ ಐಪಿಎಲ್ನಲ್ಲಿ ಅಪರೂಪದ ದಾಖಲೆ
- 5000 ರನ್ ಪೂರೈಸಿದ ಅತಿ ವೇಗದ ಬ್ಯಾಟರ್ ಸಂಜು
Sanju Samson: ಇಂದು (ಏ.26) ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಸಿಎಸ್ಕೆ ಎಂದಿನಂತೆ ತನ್ನ ಕಳಪೆ ಪ್ರದರ್ಶನವನ್ನು ಮುಂದುವರಿಸಿದೆ. ಗುಜರಾತ್ ಟೈಟನ್ಸ್ ವಿರುದ್ಧ ಉತ್ತಮ ಆಲ್ರೌಂಡ್ ಪ್ರದರ್ಶನ ತೋರುವಲ್ಲಿ ಸಿಎಸ್ಕೆ ಮತ್ತೊಮ್ಮೆ ಮುಗ್ಗರಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್, ಚೆನ್ನೈ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ, ಬ್ಯಾಟಿಂಗ್ಗಿಳಿದ ಚೆನ್ನೈ ಸೂಪರ್ ಕಿಂಗ್ಸ್ ಎಂದಿನಂತೆ ಆರಂಭಿಕ ಹಂತದಲ್ಲೇ ವಿಕೆಟ್ ಕಳೆದುಕೊಳ್ಳುವ ಚಾಳಿಯನ್ನು ಮುಂದುವರಿಸಿತು. ಪವರ್ಪ್ಲೇ ಹಂತದಲ್ಲೇ 4 ವಿಕೆಟ್ ಕಳೆದುಕೊಂಡ ಸಿಎಸ್ಕೆ, 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಈ ಸಾಧಾರಣ ಗುರಿಯನ್ನು ಬೆನ್ನತ್ತಿರುವ ಜಿಟಿಗೆ ಗೆಲುವು ಸನ್ನಿಹಿತವಾಗಿದೆ. ಮತ್ತೊಂದೆಡೆ, ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಸಂಜು ಸ್ಯಾಮ್ಸನ್, ಇಂದಿನ ಮ್ಯಾಚ್ನಲ್ಲಿ ಅಂತಹದ್ದೇ ಅದ್ಭುತ ಪ್ರದರ್ಶನ ತೋರಲಿದ್ದಾರೆ ಎಂದೇ ಕ್ರಿಕೆಟ್ ಪ್ರಿಯರು ನಿರೀಕ್ಷಿಸಿದ್ದರು. ಆದರೆ, ಸಿಎಸ್ಕೆ ಬ್ಯಾಟರ್ನಿಂದ ಮತ್ತೊಮ್ಮೆ ಕಳಪೆ ಬ್ಯಾಟಿಂಗ್ ಬಂದಿತು. ಕೇವಲ 11 ರನ್ಗೆ ಔಟ್ ಆದ ಸ್ಯಾಮ್ಸನ್, ಐಪಿಎಲ್ನಲ್ಲಿ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿರುವುದು ಸದ್ಯ ಕ್ರಿಕೆಟ್ ಪ್ರಿಯರ ಹುಬ್ಬೇರಿಸಿದೆ.
11 ರನ್ ಗಳಿಸುವ ಮೂಲಕ ತಮ್ಮ ಐಪಿಎಲ್ ಕರಿಯರ್ನಲ್ಲಿ ಸ್ಯಾಮ್ಸನ್, 5000 ರನ್‌ಗಳ ಮೈಲಿಗಲ್ಲನ್ನು ತಲುಪಿದ್ದಾರೆ. ಈ ಸಾಧನೆ ಮಾಡಿದ 10ನೇ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಕೇವಲ 3555 ಎಸೆತಗಳಲ್ಲಿ ಈ ದಾಖಲೆಯಲ್ಲಿ ತಮ್ಮ ಹೆಸರನ್ನು ಸೇರಿಸುವ ಮೂಲಕ, ಸಂಜು ಸ್ಯಾಮ್ಸನ್ ಐಪಿಎಲ್ ಇತಿಹಾಸದಲ್ಲಿ 5000 ರನ್‌ಗಳನ್ನು ಪೂರ್ಣಗೊಳಿಸಿದ ಅತ್ಯಂತ ವೇಗದ ಭಾರತೀಯ ಆಟಗಾರರಾಗಿ ಮಿಂಚಿದ್ದಾರೆ.
ಈ ಮೂಲಕ ಐಪಿಎಲ್ ಸ್ಟಾರ್ ಬ್ಯಾಟರ್ಗಳಾದ ಸುರೇಶ್ ರೈನಾ (3620 ಎಸೆತ), ಕೆ.ಎಲ್. ರಾಹುಲ್ (3688 ಎಸೆತ) ಮತ್ತು ಎಂ.ಎಸ್. ಧೋನಿ (3691 ಎಸೆತ) ಅವರ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಒಟ್ಟಾರೆಯಾಗಿ, ಎಬಿ ಡಿವಿಲಿಯರ್ಸ್ (3288 ಎಸೆತ) ಮತ್ತು ಡೇವಿಡ್ ವಾರ್ನರ್ (3554 ಎಸೆತ) ಬಳಿಕ ಈ ಸಾಧನೆಗೈದ ವೇಗದ ಆಟಗಾರರ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಮೂರನೇ ಸ್ಥಾನದಲ್ಲಿದ್ದಾರೆ,(ಏಜೆನ್ಸೀಸ್).