WPL: ಡೆಲ್ಲಿ ಕ್ಯಾಪಿಟಲ್ಸ್​ ಎದುರು ಮುಂಬೈ ಇಂಡಿಯನ್ಸ್ ಜಯಭೇರಿ 
ಕ್ರಿಕೆಟ್

WPL: ಡೆಲ್ಲಿ ಕ್ಯಾಪಿಟಲ್ಸ್​ ಎದುರು ಮುಂಬೈ ಇಂಡಿಯನ್ಸ್ ಜಯಭೇರಿ

ಮುಂಬೈ: ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಸಂಟಿತ ನಿರ್ವಹಣೆ ತೋರಿದ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ (Mumbai Indians) ಡಬ್ಲ್ಯುಪಿಎಲ್ (WPL) 4ನೇ ಆವೃತ್ತಿಯ 3ನೇ ಪಂದ್ಯದಲ್ಲಿ ಹಾಲಿ ರನ್ನರ್​ ಅಪ್​ ಡೆಲ್ಲಿ ಕ್ಯಾಪಿಟಲ್ಸ್​ (Delhi Capitals) ಎದುರು 50  ರನ್​ಗಳ ಗೆಲುವು ಒಲಿಸಿಕೊಂಡಿತು.

ಡಿವೈ ಪಾಟೀಲ್​ ಕ್ರೀಡಾಂಗಣದಲ್ಲಿ ನಡೆದ ದಿನದ 2ನೇ ಪಂದ್ಯದಲ್ಲಿ ಟಾಸ್​ ಗೆದ್ದ ಜೆಮೀಮಾ ರೋಡ್ರಿಗಸ್​ ಬೌಲಿಂಗ್​ ಆಯ್ದುಕೊಂಡರು. ಸಾಧಾರಣ ಆರಂಭ ಪಡೆದ ಮುಂಬೈ ನಾಯಕಿ ಹರ್ಮಾನ್​ಪ್ರೀತ್​ ಕೌರ್​ (74* ರನ್​, 42 ಎಸೆತ, 8 ಬೌಂಡರಿ, 3 ಸಿಕ್ಸರ್​) ಹಾಗೂ ಆಲ್ರೌಂಡರ್​ ನ್ಯಾಟ್​ ಸೀವರ್​ ಬ್ರಂಟ್​ (70 ರನ್​, 46 ಎಸೆತ, 13 ಬೌಂಡರಿ) ಅಬ್ಬರದ ಬ್ಯಾಟಿಂಗ್​ ಹಾಗೂ ನಿಕೊಲ ಕ್ಯಾರಿ (21) ರನ್​ಗಳಿಕೆಗೆ ಉಪಯುಕ್ತ ಆಟದ ನೆರವಿನಿಂದ  4 ವಿಕೆಟ್​ಗೆ 195 ರನ್​ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ನಿಕೊಲ ಕ್ಯಾರಿ (37ಕ್ಕೆ 3) ಹಾಗೂ ನ್ಯಾಟ್​ ಸೀವರ್​ (29ಕ್ಕೆ 2) ದಾಳಿ ಎದುರು ಬ್ಯಾಟರ್​ಗಳ ವೈಫಲ್ಯದಿಂದ 86 ರನ್​ಗಳಿಗೆ ಆರು ವಿಕೆಟ್​ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್​ ಚೇಸಿಂಗ್​ನಲ್ಲಿ ಸಂಕಷ್ಟಕ್ಕೆ ಸಿಲುಕಿತು. ಆಗ ವಿಂಡೀಸ್​ ಆಲ್ರೌಂಡರ್​ ಚಿನೆಲ್ಲೆ ಹೆನ್ರಿ (56 ರನ್​,33 ಎಸೆತ, 5 ಬೌಂಡರಿ, 3 ಸಿಕ್ಸರ್​) ನಡೆಸಿದ ಏಕಾಂಗಿ ಹೋರಾಟ ನಡುವೆಯೂ ಡೆಲ್ಲಿ ತಂಡವನ್ನು 19 ಓವರ್​ಗಳಲ್ಲಿ 145 ರನ್​ಗಳಿಗೆ ನಿಯಂತ್ರಿಸಿದ ಮುಂಬೈ ಗೆಲುವಿನ ಲಯಕ್ಕೆ ಮರಳಿತು. 

ಮುಂಬೈ ಇಂಡಿಯನ್ಸ್​: 4 ವಿಕೆಟ್​ಗೆ 195 (ಅಮೆಲಿಯಾ 0, ಜಿ.ಕಮಲಿನಿ 16, ನ್ಯಾಟ್​ ಸೀವರ್​ 70, ಹರ್ಮಾನ್​ಪ್ರೀತ್​ 74*, ನಿಕೊಲ ಕ್ಯಾರಿ 21, ಸಜೀವನ್​ ಸಜನಾ 5*, ನಂದಿನಿ ಶರ್ಮ 26ಕ್ಕೆ 2). ಡೆಲ್ಲಿ ಕ್ಯಾಪಿಟಲ್ಸ್​: 19 ಓವರ್​ಗಳಲ್ಲಿ 145 (ಲಿಜೆಲ್ಲೆ ಲೀ 10, ಶೆಫಾಲಿ ವರ್ಮ 8, ಲೌರಾ ವೋಲ್ವಾರ್ಡ್​ 9, ಜೆಮೀಮಾ 1, ಮಾರಿಜಾನ್ನೆ 10, ನಿಕಿ ಪ್ರಸಾದ್​ 12, ಚಿನೆಲ್ಲೆ 56, ಸ್ನೇಹಾ 11, ನಿಕೊಲ ಕ್ಯಾರಿ 37ಕ್ಕೆ 3, ನ್ಯಾಟ್​ ಸೀವರ್​ 29ಕ್ಕೆ 2, ಅಮೆಲಿಯಾ 24ಕ್ಕೆ 3).