ಚೊಚ್ಚಲ ಅಂಧ ಮಹಿಳೆಯರ ಟಿ20 ವಿಶ್ವಕಪ್​ಗೆ ವೇದಿಕೆ ಸಜ್ಜು 
ಕ್ರಿಕೆಟ್

ಚೊಚ್ಚಲ ಅಂಧ ಮಹಿಳೆಯರ ಟಿ20 ವಿಶ್ವಕಪ್​ಗೆ ವೇದಿಕೆ ಸಜ್ಜು; ಆತಿಥೇಯ ಭಾರತ-ಶ್ರೀಲಂಕಾ ನಡುವೆ ಮೊದಲ ಪಂದ್ಯ

ಬೆಂಗಳೂರು: ಚೊಚ್ಚಲ ಆವೃತ್ತಿಯ ಅಂಧರ ಮಹಿಳಾ ಟಿ20 ವಿಶ್ವಕಪ್​ (blind t20 cricket world cup) ಟೂರ್ನಿ ಮಂಗಳವಾರದಿಂದ ನಡೆಯಲಿದ್ದು, ಆತಿಥೇಯ ಭಾರತ ಮತ್ತು ಶ್ರೀಲಂಕಾ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. 

ಭಾರತೀಯ ಅಂಧರ ಕ್ರಿಕೆಟ್​ ಸಂಸ್ಥೆ (ಸಿಎಬಿಐ) ಮತ್ತು ಸಮರ್ಥನಂ ಟ್ರಸ್ಟ್​ ಸಹಯೋಗದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಆಡಲಿವೆ. ಆಸ್ಟ್ರೆಲಿಯಾ, ಪಾಕಿಸ್ತಾನ, ನೇಪಾಳ ಮತ್ತು ಅಮೆರಿಕ ಟೂರ್ನಿಯಲ್ಲಿ ಆಡಲಿರುವ ಇತರ 4 ತಂಡಗಳಾಗಿವೆ. ಹೈಬ್ರಿಡ್​ ಮಾದರಿಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ತನ್ನ ಪಂದ್ಯಗಳನ್ನು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ. ರೌಂಡ್​ ರಾಬಿನ್​ ಲೀಗ್​ ಬಳಿಕ ಅಂಕಪಟ್ಟಿಯ ಅಗ್ರ 4 ತಂಡಗಳು ಸೆಮಿಫೈನಲ್​ಗೇರಲಿವೆ.

ನವದೆಹಲಿಯ ಮಾಡರ್ನ್​ ಸ್ಕೂಲ್​ ಗ್ರೌಂಡ್​ನಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವೆ ಹಾಗೂ ಟೂರ್ನಿಯ ಸಂಘಟನಾ ಸಮಿತಿಯ ಅಧ್ಯೆ ಮೀನಾ ಲೇಖಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾಜಿ ಕ್ರೀಡಾ ಸಚಿವ, ಸಂಸದ ಅನುರಾಗ್​ ಠಾಕೂರ್​ ಕೂಡ ಹಾಜರಿರಲಿದ್ದಾರೆ. 

ನವೆಂಬರ್​ 13ರವರೆಗೆ ನವದೆಹಲಿಯಲ್ಲಿ ಪಂದ್ಯಗಳು ನಡೆದರೆ, ನವೆಂಬರ್​ 14ರಿಂದ 16ರವರೆಗೆ ಬೆಂಗಳೂರಿನ ಸಂಪ್ರಸಿದ್ಧಿ ಸ್ಪೋರ್ಟ್ಸ್​ ಇಸ್ಟಾಡಿಯೋದಲ್ಲಿ 4 ಪಂದ್ಯಗಳು ನಡೆಯಲಿವೆ. ನವೆಂಬರ್​ 15ರಿಂದ 23ರವರೆಗೆ ಕೊಲಂಬೊದಲ್ಲಿ ಸೆಮಿಫೈನಲ್ಸ್​, ಫೈನಲ್​ ಸಹಿತ ಉಳಿದ ಪಂದ್ಯಗಳು ನಡೆಯಲಿವೆ. 

ಆತಿಥೇಯ ಭಾರತ ತಂಡವನ್ನು ಕನ್ನಡತಿ ದೀಪಿಕಾ ಟಿ.ಎಸ್​. (ಬಿ3) ಮುನ್ನಡೆಸಲಿದ್ದು, ಗಂಗಾ ಎಸ್​. ಕದಂ (ಬಿ3) ಉಪನಾಯಕಿಯಾಗಿದ್ದಾರೆ. ಚೊಚ್ಚಲ ಮಹಿಳಾ ಏಕದಿನ ವಿಶ್ವಕಪ್​ ಪ್ರಶಸ್ತಿ ಜಯಿಸಿದ ಭಾರತ ತಂಡದ ಆಟಗಾರ್ತಿ ಜೆಮೀಮಾ ರೋಡ್ರಿಗಸ್​, ಅಂಧ ಮಹಿಳಾ ತಂಡಕ್ಕೆ ಶುಭ ಹಾರೈಸಿದ್ದಾರೆ.