ಗೌತಮ್ ಗಂಭೀರ್ (ಎಡ), ಸರ್ಫರಾಜ್ ಖಾನ್ (ಬಲ)
- ಆಗಸ್ಟ್ 15ರಿಂದ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆರಂಭ
- ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಸರ್ಫರಾಜ್ ಖಾನ್ ಕೈಬಿಟ್ಟ ಮ್ಯಾನೇಜ್ಮೆಂಟ್
- ಬಹುಶಃ ನಾನು ಫಿಟ್ ಆಗುವುದಿಲ್ಲ ಅನಿಸುತ್ತೆ ಎಂಬ ಭಾವುಕ ಪೋಸ್ಟ್
Sarfaraz Khan: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಈಗಾಗಲೇ ಭರ್ಜರಿ ತಯಾರಿ ನಡೆಸುತ್ತಿರುವ ಭಾರತ ತಂಡದಲ್ಲಿ ಮತ್ತೊಮ್ಮೆ ಅವಕಾಶದಿಂದ ವಂಚಿತರಾದ ಸ್ಟಾರ್ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್, ತಮ್ಮನ್ನು ಆಯ್ಕೆ ಪ್ರಕ್ರಿಯೆಯಿಂದ ಕೈಬಿಟ್ಟವರ ವಿರುದ್ಧ ಭಾರಿ ಬೇಸರ ಹೊರಹಾಕಿದ್ದಾರೆ.
ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಹಾಕಿರುವ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರೇಮಿಗಳ ಚರ್ಚೆಗೆ ಕಾರಣವಾಗಿದೆ. ಇಲ್ಲಿ ಯಾರನ್ನೂ ನೇರವಾಗಿ ಉಲ್ಲೇಖಿಸದಿದ್ದರೂ, ಪರೋಕ್ಷವಾಗಿ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಮ್ಯಾನೇಜ್ಮೆಂಟ್ ವಿರುದ್ಧ ಕುಟುಕಿರುವುದಂತು ಸ್ಪಷ್ಟ ಎಂದೇ ಹೇಳಬಹುದು.
ಏನಿದೆ ಅವರ ಹೇಳಿಕೆಯಲ್ಲಿ?
"ಬಹುಶಃ ನಾನು ಫಿಟ್ ಆಗುವುದಿಲ್ಲ ಅನಿಸುತ್ತೆ. ಆದರೂ, ನನ್ನಿಂದ ಎಷ್ಟು ಸಾಧ್ಯವೋ, ನನ್ನೆಲ್ಲ ಶಕ್ತಿ ಮೀರಿ ಹೋರಾಡುತ್ತೇನೆ" ಎಂಬ ಭಾವುಕ ಸಂದೇಶವನ್ನು ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಅಸಲಿಗೆ, ಯಾರ ಹೆಸರನ್ನೂ ಅವರು ನೇರವಾಗಿ ಹೇಳದಿದ್ದರೂ, ಪದೇ ಪದೇ ಟೆಸ್ಟ್ ಸರಣಿಗೆ ಆಯ್ಕೆ ಮಾಡುವ ತಂಡದಿಂದ ಅವರನ್ನು ಕಡೆಗಣಿಸುತ್ತಿರುವುದು ಸರ್ಫರಾಜ್ಗೆ ತೀವ್ರ ನೋವುಂಟು ಮಾಡಿದೆ ಎಂಬುದಂತು ಖಚಿತ.
ಶ್ರೀಲಂಕಾ ಟೆಸ್ಟ್
ಪ್ರಸ್ತುತ ಶ್ರೀಲಂಕಾದಲ್ಲಿ ಎರಡು ಟೆಸ್ಟ್‌ಗಳ ಸರಣಿಯನ್ನು ಆಡಲಿರುವ ಟೀಮ್ ಇಂಡಿಯಾ, ಮೊದಲ ಟೆಸ್ಟ್ ಅನ್ನು ಆಗಸ್ಟ್ 15ರಂದು ಗಾಲೆಯಲ್ಲಿ ಆರಂಭಿಸಲಿದೆ. ಈ ಸರಣಿಗೆ ಸರ್ಫರಾಜ್ ಆಯ್ಕೆಯಿಂದ ದೂರ ಉಳಿದರೆ, ಮತ್ತೊಂದೆಡೆ ಸಾಯಿ ಸುದರ್ಶನ್ ಫಿಟ್ನೆಸ್ ಸಮಸ್ಯೆಯಿಂದ ಹೊರಬಿದ್ದಿದ್ದಾರೆ. ಟೆಸ್ಟ್‌ನಲ್ಲಿ ಅದ್ಭುತ ಇನ್ನಿಂಗ್ಸ್, ಉತ್ತಮ ಫಾರ್ಮ್ ಹೊಂದಿದ್ದರೂ ಅವರನ್ನು ತಂಡದಿಂದ ಕೈಬಿಟ್ಟಿರುವುದು ಸದ್ಯ ಕ್ರಿಕೆಟ್ ಪ್ರಿಯರಿಗೂ ಬೇಸರ ತಂದಿದೆ.
ಹೀಗಿದೆ ಸರ್ಫರಾಜ್ ಟೆಸ್ಟ್ ಕರಿಯರ್...
ಫೆಬ್ರವರಿ 2024ರಲ್ಲಿ ಇಂಗ್ಲೆಂಡ್ ವಿರುದ್ಧದ ರಾಜ್‌ಕೋಟ್ ಟೆಸ್ಟ್‌ನಲ್ಲಿ ಭಾರತೀಯ ತಂಡಕ್ಕೆ ಪಾದಾರ್ಪಣೆ ಮಾಡಿದ ಸರ್ಫರಾಜ್ ಖಾನ್, ಇಲ್ಲಿಯವರೆಗೆ ಆರು ಟೆಸ್ಟ್‌ಗಳಲ್ಲಿ 371 ರನ್ ಗಳಿಸಿದ್ದಾರೆ. ಅದು ಸರಾಸರಿ 37.10 ರಲ್ಲಿ. ಅವರ ಹೆಸರಿನಲ್ಲಿ ಒಂದು ಶತಕ ಮತ್ತು ಮೂರು ಅರ್ಧ ಶತಕಗಳಿವೆ. ನವೆಂಬರ್ 2024ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಮುಂಬೈ ಟೆಸ್ಟ್‌ನಲ್ಲಿ ಕೊನೆಯದಾಗಿ ಟೀಮ್ ಇಂಡಿಯಾ ಪರ ಆಡಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.
ದೇಶೀಯ ಕ್ರಿಕೆಟ್‌ನಲ್ಲಿ ಅವರ ದಾಖಲೆಯು ಗಮನ ಸೆಳೆಯುವಂತಿದೆ. 62 ಪ್ರಥಮ ದರ್ಜೆ ಪಂದ್ಯಗಳಲ್ಲಿ 5,114 ರನ್, 43 ಲಿಸ್ಟ್-ಎ ಪಂದ್ಯಗಳಲ್ಲಿ 932 ರನ್ ಮತ್ತು 111 ಟಿ20 ಮ್ಯಾಚ್ನಲ್ಲಿ 1,678 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಸರಾಸರಿ 65 ರಷ್ಟಿದೆ. ಇಷ್ಟೆಲ್ಲ ಉತ್ತಮ ಇನ್ನಿಂಗ್ಸ್, ದಾಖಲೆಗಳನ್ನು ಹೊಂದಿದ್ದರೂ ಸಹ ಸರ್ಫರಾಜ್ರನ್ನು ಟೆಸ್ಟ್ ಸರಣಿಯಿಂದ ಪದೇ ಪದೇ ಕೈಬಿಡುತ್ತಿರುವುದು ಮ್ಯಾನೇಜ್ಮೆಂಟ್ ಅನ್ನು ಪ್ರಶ್ನಿಸುವಂತಿದೆ,(ಏಜೆನ್ಸೀಸ್).