ಸಂಜು ಸ್ಯಾಮ್ಸನ್  
ಕ್ರಿಕೆಟ್

ಫೋನ್​ ಸ್ವಿಚ್​ ಆಫ್​... ನ್ಯೂಜಿಲೆಂಡ್​ ವಿರುದ್ಧದ ಫೈನಲ್​ ಪಂದ್ಯಕ್ಕೂ ಮೊದಲೇ ಸ್ಯಾಮ್ಸನ್​ ಅಚ್ಚರಿ ಹೇಳಿಕೆ | Sanju Samson

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್​ ವಿರುದ್ಧ ಭಾರತ ರಣರೋಚಕ ಗೆಲುವು
  • ಆಂಗ್ಲರ ಎದುರು 89 ರನ್​ ಸಿಡಿಸಿದ ಸಂಜು ಸ್ಯಾಮ್ಸನ್​
  • ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್​ ನಿರೀಕ್ಷೆ
ನವದೆಹಲಿ: ನಿನ್ನೆ (ಮಾ.05) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್​ 2026ರ ಸೆಮೀಫೈನಲ್​ ಪಂದ್ಯದಲ್ಲಿ, ಇಂಗ್ಲೆಂಡ್​ ವಿರುದ್ಧ ಭಾರತ ರಣರೋಚಕ ಗೆಲುವು ಸಾಧಿಸಿತು. ಕೊನೆಯ ಓವರ್​ವರೆಗೂ ತಲುಪಿದ ಈ ಪಂದ್ಯದಲ್ಲಿ 7 ರನ್​ಗಳಿಂದ ಭಾರತ ಭರ್ಜರಿ ಜಯ ದಾಖಲಿಸಿ ಈಗ ಫೈನಲ್​ ಪ್ರವೇಶಿಸಿದೆ. ಭಾನುವಾರ (ಮಾ.08) ಅಹಮದಾಬಾದ್​ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್​ ಮತ್ತು ಭಾರತ ನಡುವೆ ಅಂತಿಮ ಹಣಾಹಣಿ ನಡೆಯಲಿದೆ. ಈ ಪಂದ್ಯದ ಮೇಲೆ ಇದೀಗ ಎಲ್ಲರ ಕಣ್ಣು ಬಿದ್ದಿದ್ದು, ಇದಕ್ಕೂ ಮೊದಲೇ ಸಂಜು ಸ್ಯಾಮ್ಸನ್ (Sanju Samson) ನೀಡಿರುವ ಅಚ್ಚರಿ ಹೇಳಿಕೆಗಳು ಸದ್ಯ ಕ್ರಿಕೆಟ್​ ಪ್ರಿಯರ ಹುಬ್ಬೇರಿಸಿದೆ.

ಸ್ಫೋಟಕ ಸಂಜು

ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಇನ್ನಿಂಗ್ಸ್​(42 ಎಸೆತ 89 ರನ್​) ತಂಡದ ಮೊತ್ತವನ್ನು 250ರ ಗಡಿದಾಟಿಸಲು ದೊಡ್ಡ ಕೊಡುಗೆ ನೀಡಿತು. ಆರಂಭದಲ್ಲಿ ಅಭಿಷೇಕ್​ ಶರ್ಮ ಬಹುಬೇಗನೇ ವಿಕೆಟ್​ ಕಳೆದುಕೊಂಡರೂ ತಲೆಕಡಿಸಿಕೊಳ್ಳದೆ, ಕ್ರೀಸ್​ಗೆ ಗಟ್ಟಿಯಾಗಿ ಅಂಟುವ ಮೂಲಕ ತನ್ನ ಇನ್ನಿಂಗ್ಸ್ ಆಡಿದ ಸಂಜುಗೆ ಕ್ರಿಕೆಟ್​ ಪ್ರಿಯರಿಂದ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿವೆ.

ಮೂರನೇ ಅದ್ಭುತ ಇನ್ನಿಂಗ್ಸ್​ಗೆ ಸಜ್ಜು

ಕೊನೆಯ ಸೂಪರ್​-8 ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ 97 ರನ್​ಗಳ ಅದ್ಭುತ ಇನ್ನಿಂಗ್ಸ್ ನೀಡಿದ ಸಂಜು, ತಂಡವನ್ನು ಸೆಮೀಫೈನಲ್​ಗೆ ಕೊಂಡೊಯ್ಯುವಲ್ಲಿ ದೊಡ್ಡ ಪಾತ್ರ ವಹಿಸಿದರು. ಬಹಳ ಕೂಲ್​ ಆಗಿ ತಮ್ಮ ಇನ್ನಿಂಗ್ಸ್ ಆಡಿದ ಸ್ಯಾಮ್ಸನ್​, ಆಂಗ್ಲರ ಎದುರು ಕೂಡ ಅಷ್ಟೇ ಕೂಲ್ ಅಂಡ್​ ಸ್ಮಾರ್ಟ್​ ಆಗಿ ಬ್ಯಾಟಿಂಗ್ ಮಾಡಿದ್ದು ವಿಶೇಷ. ಈ ನಿಟ್ಟಿನಲ್ಲಿ ತಮ್ಮ ಪ್ರದರ್ಶನ ಹಾಗೂ ನೆಗೆಟಿವ್ ವರದಿಗಳ ಬಗ್ಗೆ ಮೌನಮುರಿದ ಸ್ಯಾಮ್ಸನ್​, ಕಳೆದ ಒಂದಷ್ಟು ವರ್ಷಗಳಿಂದ ನನ್ನ ದೇಶಕ್ಕೆ ಇಂತಹ ಕೊಡುಗೆ ಕೊಡಬೇಕು ಎಂದು ತುಂಬ ಶ್ರಮಿಸುತ್ತಿದ್ದೆ ಎಂದಿದ್ದಾರೆ.

ಸೋಷಿಯಲ್​ ಮೀಡಿಯಾದಿಂದ ದೂರ

ತುಂಬ ಖುಷಿ​ ಅನಿಸುತ್ತಿದೆ. ಈ ಒಂದು ಕ್ಷಣಕ್ಕಾಗಿ ಕೆಲವು ವರ್ಷಗಳಿಂದ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದ್ದೆ. ಅದರಲ್ಲೂ, ಭಾರೀ ತಾಳ್ಮೆಯಿಂದಲೇ ನನ್ನ ಗುರಿಯನ್ನು ಸಾಧಿಸುವತ್ತ ಗಮನ ಹರಿಸುತ್ತಿದ್ದೆ. ಇನ್ನೊಂದು ಇನ್ನಿಂಗ್ಸ್​, ಮತ್ತೊಂದು ಪಂದ್ಯ ಖಂಡಿತ ನನ್ನ ಮನಸ್ಸನ್ನು ಹಗುರಗೊಳಿಸುವುದು. ಕಳೆದ ನ್ಯೂಜಿಲೆಂಡ್​ ಸರಣಿಯಲ್ಲಿ ಬಹಳ ಪರದಾಡಿದ್ದೆ. ಹೀಗಾಗಿ, ಫೈನಲ್​ ಪಂದ್ಯದಲ್ಲಿ ಅವರ ವಿರುದ್ಧ ಉತ್ತಮ ರನ್​ ಗಳಿಸುವುದು ಅವಶ್ಯ ಎಂದರು.
ಈ ಫಾರ್ಮೆಟ್​ನಲ್ಲಿ ಸ್ಟಾರ್​ ಆಟಗಾರರೇ ಹಲವು ಬಾರಿ ಎಡವುತ್ತಾರೆ. ಇಲ್ಲಿ, ಆಟವನ್ನು ಮತ್ತು ಆಟಗಾರರನ್ನು ನಾನು ಗೌರವಿಸುತ್ತೇನೆ. ನನ್ನ ಗಮನವನ್ನು ವಾಪಾಸ್​ ಗಳಿಸಲು ಇನ್ನೊಂದು ಮುಖ್ಯ ಕಾರಣನೇ ಸೋಷಿಯಲ್​ ಮೀಡಿಯಾದಿಂದ ದೂರ ಉಳಿದಿದ್ದು. ಎಲ್ಲ ಕಿಟಕಿಗಳನ್ನು ಮುಚ್ಚಿದೆ. ಫೋನ್​ ಅನ್ನು ಸ್ವಿಚ್ ಆಫ್​ ಮಾಡಿದೆ ಮತ್ತು ಜಾಲತಾಣಗಳಿಂದ ತುಂಬ ದೂರ ಸರಿದುಬಿಟ್ಟೆ. ಕಡಿಮೆ ಶಬ್ದವು ನಾನು ಸರಿಯಾದ ಮಾರ್ಗದಲ್ಲಿ ಮರಳಲು ಸಹಾಯ ಮಾಡಿತು ಎಂದು ಹೇಳಿದ್ದಾರೆ,(ಏಜೆನ್ಸೀಸ್).