ಟೀಮ್ ಇಂಡಿಯಾ ಕ್ರಿಕೆಟಿಗ ಸಂಜು ಸ್ಯಾಮ್ಸನ್​ ಓಪನ್ ಟಾಕ್​ 
ಕ್ರಿಕೆಟ್

ನನಗೆ ಬ್ಯಾಟಿಂಗ್ ಹೇಗೆ ಮಾಡಬೇಕೆಂದು ಹೇಳಿಕೊಡುವ ಅವಶ್ಯಕತೆಯಿಲ್ಲ! ಸಂಜು ಸ್ಯಾಮ್ಸನ್​ ಓಪನ್ ಟಾಕ್​

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ ಹೀರೋ ಸಂಜು ಸ್ಯಾಮ್ಸನ್​ ಬಿಚ್ಚುನುಡಿ​
  • ನನಗೆ ಯಾರೂ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಹೇಳಿಕೊಡಬೇಕಿಲ್ಲ
  • ವಿರಾಟ್​ ಕೊಹ್ಲಿ ಕೊಟ್ಟ ಸಲಹೆ ಬಗ್ಗೆ ಮನಬಿಚ್ಚಿ ಮಾತನಾಡಿದ ಸ್ಯಾಮ್ಸನ್​
ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್, ವಿಕೆಟ್​ ಕೀಪರ್​ ಸಂಜು ಸ್ಯಾಮ್ಸನ್ ತಮ್ಮ ಕ್ರಿಕೆಟ್ ಪಯಣ ಹಾಗೂ ತೆಗೆದುಕೊಳ್ಳುವ ನಿರ್ಧಾರಗಳ ಕುರಿತು ಮುಕ್ತವಾಗಿ ಮಾತನಾಡಿದ್ದು, ನಾನು ಇನ್ಮುಂದೆ ಇಲಿಗಳ ಓಟದಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ.
ಜಿಯೋ ಸ್ಟಾರ್ ಜತೆಗೆ ಮಾತನಾಡಿದ ಸಂಜು, ಯಾರೋ ಹೇಳಿದಂತೆ ಆಡದೆ ನನ್ನದೇ ಶೈಲಿಯಲ್ಲಿ, ಸ್ವಂತ ನಿರ್ಧಾರಗಳ ಮೇಲೆ ಕ್ರಿಕೆಟ್ ಆಡುವ ವ್ಯಕ್ತಿ ನಾನು. ನನಗೆ ಹೇಗೆ ಬ್ಯಾಟಿಂಗ್ ಮಾಡಬೇಕು ಎಂದು ಯಾರೂ ಹೇಳಿಕೊಡುವ ಅವಶ್ಯಕತೆಯಿಲ್ಲ. ನಮ್ಮ ದೇಶದಲ್ಲಿ ಪ್ರತಿಯೊಂದಕ್ಕೂ ಒಂದು ಸ್ಪರ್ಧೆ ಅಥವಾ ಇಲಿ ಓಟ ಇರುತ್ತದೆ. 2026ರ ಟಿ20 ವಿಶ್ವಕಪ್‌ಗಿಂತ ಮುಂಚೆಯೇ ನಾನು ಈ ಸ್ಪರ್ಧೆಯಿಂದ ಹೊರಬರಲು ನಿರ್ಧರಿಸಿದೆ ಎಂದರು.
ನನಗೆ ಈಗ 31 ವರ್ಷ. ಇನ್ನು ಕೆಲವೇ ವರ್ಷಗಳು ಮಾತ್ರ ಕ್ರಿಕೆಟ್ ಬಾಕಿ ಇದೆ. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಈಗ ನಾನು ಆಟವನ್ನು ಎಂಜಾಯ್​ ಮಾಡಲು ಇಷ್ಟಪಡ್ತೀನಿ. ನನಗೆ ಯಾರೂ ಹೀಗೆ ಬ್ಯಾಟಿಂಗ್ ಮಾಡು ಎಂದು ಹೇಳಿಕೊಡಬೇಕಿಲ್ಲ. ಸಂಜು ಏನು ಮಾಡಬೇಕೆಂದು ಸಂಜುನೇ ನಿರ್ಧರಿಸುತ್ತಾನೆ ಎಂದು ಖಡಕ್ ಆಗಿ ಹೇಳಿದರು. ಅಷ್ಟಕ್ಕೂ, ಇಲ್ಲಿ ಯಾರನ್ನು ಉದ್ದೇಶಿಸಿ ಮಾತನಾಡಿದ್ದು ಎಂಬುದನ್ನು ಸ್ಯಾಮ್ಸನ್​ ಎಲ್ಲಿಯೂ ಉಲ್ಲೇಖಿಸಿಲ್ಲ.

ಕೊಹ್ಲಿ ಕೊಟ್ಟ ಸಲಹೆ

ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಒಮ್ಮೆ ವಿರಾಟ್ ಕೊಹ್ಲಿ ನೀಡಿದ್ದ ಲೈಫ್‌ಸ್ಟೈಲ್ ಹಾಗೂ ಫಿಟ್ನೆಸ್​ ಸಲಹೆಯನ್ನು ನೆನಪಿಸಿಕೊಂಡ ಸಂಜು, ಜಿಮ್‌ನಲ್ಲಿ ಕೊಹ್ಲಿ ಅವರ ಶ್ರಮ ಮತ್ತು ಶಿಸ್ತು ನನಗೆ ತುಂಬ ಇಷ್ಟ. ಅವರ ಬಳಿ ಈ ಕುರಿತಾಗಿ ಒಂದಷ್ಟು ಸಲಹೆಗಳನ್ನು ಸಹ ಪಡೆದುಕೊಂಡಿದ್ದೀನಿ. ನೀನು ಸುದೀರ್ಘ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಬೇಕೆಂದರೆ ನಿನ್ನ ಲೈಫ್‌ಸ್ಟೈಲ್ ಮತ್ತು ಆಹಾರ ಪದ್ಧತಿ ತುಂಬಾನೇ ಮುಖ್ಯ. ಮತ್ತು ಅವು ಬದಲಾಗಬೇಕು ಎಂದು ವಿರಾಟ್ ಭಾಯ್ ಹೇಳಿದ್ದರು ಎಂದರು.
"ಕೊಹ್ಲಿ ಹೇಳಿದ ಶಿಸ್ತನ್ನು ನಾನು ಒಂದು, ಒಂದೂವರೆ ವರ್ಷ ಶ್ರದ್ಧೆಯಿಂದ ಪಾಲಿಸಿದೆ. ಆದರೆ, ಆಮೇಲೆ ನನಗೆ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಅಲ್ಲಿಗೆ, ನಾನು ಅವರ ಮಾತನ್ನು ತಪ್ಪಿದೆ ಎಂದು ಸಂಜು ಪ್ರಾಮಾಣಿಕವಾಗಿ ಒಪ್ಪಿಕೊಂಡರು. ಇತ್ತೀಚೆಗಷ್ಟೇ ಜಿಂಬಾಬ್ವೆ ವಿರುದ್ಧ 3-0 ಅಂತರದಲ್ಲಿ ಟಿ20 ಸರಣಿ ಗೆದ್ದ ಭಾರತ ತಂಡದಲ್ಲಿ ಅವಕಾಶ ಮಿಸ್​ ಮಾಡಿಕೊಂಡ ಸಂಜು, ಮುಂದಿನ ಟೂರ್ನಿಗಳಲ್ಲಿ ತಂಡ ಸೇರುವ ಭರವಸೆಯನ್ನು ಹೊಂದಿದ್ದಾರೆ,(ಏಜೆನ್ಸೀಸ್).