- ಮುಂಬೈ ವಿರುದ್ಧ 103 ರನ್‌ಗಳ ದಾಖಲೆಯ ಗೆಲುವು ಸಾಧಿಸಿದ ಚೆನ್ನೈ
- 54 ಎಸೆತಗಳಲ್ಲಿ 101* ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ಸಂಜು
- ಸಿಎಸ್‌ಕೆ ದಿಗ್ಗಜರೇ ಮಾಡದ ಸಾಧನೆಯನ್ನು ತನ್ನದಾಗಿಸಿಕೊಂಡ ಸಂಜು ಸ್ಯಾಮ್ಸನ್
Sanju Samson: ನಿನ್ನೆ (ಏ.22) ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 103 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಸಂಜು ಸ್ಯಾಮ್ಸನ್ ಅವರ ಅಜೇಯ ಶತಕದ (54 ಎಸೆತಗಳಲ್ಲಿ 101*) ನೆರವಿನಿಂದ 6 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಕೇವಲ 104 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಹೀನಾಯ ಸೋಲನ್ನು ಅನುಭವಿಸಿತು. ಸಿಎಸ್‌ಕೆ ಪರ ಎರಡನೇ ಶತಕ ಬಾರಿಸಿದ ಸಂಜು, ತಮ್ಮ ಐಪಿಎಲ್ ಕರಿಯರ್ನಲ್ಲಿ ಒಟ್ಟು ಐದು ಸೆಂಚುರಿ ಹೊಡೆದಿದ್ದಾರೆ.
10 ಬೌಂಡರಿ ಮತ್ತು 6 ಸಿಕ್ಸರ್ ಸಹಾಯದಿಂದ 101 ರನ್ ಬಾರಿಸಿದ ಸಂಜು ಸ್ಯಾಮ್ಸನ್, ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಹೊಡೆದ ಮೊದಲ ಸಿಎಸ್‌ಕೆ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಇದರೊಟ್ಟಿಗೆ, ಶೇನ್ ವ್ಯಾಟ್ಸನ್ ಅವರ ದಾಖಲೆಯನ್ನೂ ಸರಿಗಟ್ಟಿದ್ದಾರೆ. ತಮ್ಮ ಫ್ರಾಂಚೈಸಿ ಪರ ಒಂದೇ ಆವೃತ್ತಿಯಲ್ಲಿ ಎರಡು ಶತಕಗಳನ್ನು ಬಾರಿಸಿದ ಎರಡನೇ ಬ್ಯಾಟರ್ ಆಗಿ ಸಂಜು ಸ್ಥಾನ ಪಡೆದಿದ್ದಾರೆ.
ಇದೇ ಸಿಎಸ್‌ಕೆ ಎದುರು ಸನತ್ ಜಯಸೂರ್ಯ (2008ರಲ್ಲಿ ಅಜೇಯ 114 ರನ್) ಮತ್ತು ರೋಹಿತ್ ಶರ್ಮ (2024ರಲ್ಲಿ ಅಜೇಯ 105 ರನ್) ಮುಂಬೈ ಇಂಡಿಯನ್ಸ್ ಪರ ಶತಕಗಳನ್ನು ಬಾರಿಸಿದ್ದಾರೆ. ಚೆನ್ನೈ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಂಜು, ಎಂದಿನಂತೆ ತಮ್ಮ ತಂಡದ ಇತರೆ ಬ್ಯಾಟರ್ಗಳು ವಿಕೆಟ್ ಕಳೆದುಕೊಂಡು ಪೆವಿಲಿಯನ್ನತ್ತ ಮುಖಮಾಡುತ್ತಿದ್ದರೂ ಸಹ ಎಲ್ಲಿಯೂ ಗಮನ ಕಳೆದುಕೊಳ್ಳದೆ, ಕೊನೆಯ ಓವರ್ವರೆಗೂ ನಿಂತು ಶತಕದಾಟ ತೋರಿದ್ದು ನಿಜಕ್ಕೂ ಗಮನಾರ್ಹ.
ಅಕಸ್ಮಾತ್, ಸಂಜು ಏನಾದೂ ಮಿಡಲ್ ಓವರ್ಗಳಲ್ಲಿ ವಿಕೆಟ್ ಕಳೆದುಕೊಂಡಿದ್ದರೆ, ಖಂಡಿತ ಚೆನ್ನೈ ಪಡೆಯ ಇನ್ಯಾವ ಬ್ಯಾಟರ್ ಕೂಡ ಹೆಚ್ಚು ಕಾಲ ನಿಂತು ಆಡುತ್ತಿರಲಿಲ್ಲ. ಮತ್ತು ತಂಡದ ಒಟ್ಟು ಮೊತ್ತವನ್ನು 200ರ ಗಡಿದಾಟಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಇಲ್ಲಿ ಸ್ಪಷ್ಟ. ಪ್ರಸ್ತುತ, ಸಿಎಸ್‌ಕೆ ತಂಡಕ್ಕೆ ಬ್ಯಾಟಿಂಗ್ ಯೂನಿಟ್ನಲ್ಲಿ ಆನೆಬಲ ತುಂಬಿರುವ ಸ್ಯಾಮ್ಸನ್, ಉಳಿದ ಬ್ಯಾಟರ್ಗಳಿಂದಲೂ ಅದನ್ನೇ ನಿರೀಕ್ಷಿಸುತ್ತಿದ್ದಾರೆ. ಆದರೆ, ಕ್ಯಾಪ್ಟನ್ ರುತುರಾಜ್ರಿಂದ ಹಿಡಿದು ಯಾರಿಂದಲೂ ಅವರಿಗೆ ಉತ್ತಮ ಸಾಥ್ ಸಿಗದಿರುವುದು ದುರಂತ.