ಟೀಮ್ ಇಂಡಿಯಾದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್
- ಟೀಮ್ ಇಂಡಿಯಾದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ವಿಶೇಷ ಸಾಧನೆ
- ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1000 ರನ್‌ಗಳ ಮೈಲಿಗಲ್ಲನ್ನು ಪೂರ್ಣಗೊಳಿಸಿದ ಸಂಜು
- ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಿದ 14ನೇ ಭಾರತೀಯ ಆಟಗಾರ
ನವದೆಹಲಿ: ಟೀಮ್ ಇಂಡಿಯಾದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ( Sanju Samson ), ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1000 ರನ್‌ಗಳ ಮೈಲಿಗಲ್ಲನ್ನು ಪೂರ್ಣಗೊಳಿಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 5ನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ 5 ರನ್ ಗಳಿಸುತ್ತಿದ್ದಂತೆ ಈ ಮೈಲಿಗಲ್ಲನ್ನು ತಲುಪಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಸ್ಯಾಮ್ಸನ್ ಆಯ್ಕೆಯಾದರು ಕೂಡ ಮೊದಲ ನಾಲ್ಕ ಪಂದ್ಯಗಳಲ್ಲಿ ಅವಕಾಶ ಸಿಗಲಿಲ್ಲ. ಮೂರು ಪಂದ್ಯಗಳಲ್ಲಿ ಗಿಲ್ ಆಡಿದ ಕಾರಣ ಸಂಜು ಅವಕಾಶ ದೊರೆಯಲಿಲ್ಲ. ನಾಲ್ಕನೇ ಪಂದ್ಯದಲ್ಲಿ ಆಡುವ ಅವಕಾಶವಿತ್ತು ಆದರೆ, ಮಂಜಿನಿಂದಾಗಿ ಪಂದ್ಯ ರದ್ದಾದ ಕಾರಣ ಅವಕಾಶ ಮಿಸ್ ಆಯಿತು. ಕೊನೆಯ ಹಾಗೂ ಐದನೇ ಟಿ20 ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಸ್ಯಾಮ್ಸನ್ ಕೇವಲ 22 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 37 ರನ್ ಗಳಿಸಿ, ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.
ಸ್ಯಾಮ್ಸನ್ ವೈಯಕ್ತಿಕವಾಗಿ 1000 ರನ್ ಗಡಿ ದಾಟಿದ ಸಾಧನೆ ಮಾಡಿದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಿದ 14ನೇ ಭಾರತೀಯ ಆಟಗಾರ ಎನಿಸಿಕೊಂಡರು. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಶಿಖರ್ ಧವನ್, ಎಂಎಸ್ ಧೋನಿ, ಸುರೇಶ್ ರೈನಾ, ರಿಷಬ್ ಪಂತ್, ಯುವರಾಜ್ ಸಿಂಗ್, ತಿಲಕ್ ವರ್ಮ, ಶ್ರೇಯಸ್ ಅಯ್ಯರ್ ಮತ್ತು ಅಭಿಷೇಕ್ ಶರ್ಮ ಅವರ ಸಾಲಿಗೆ ಸ್ಯಾಮ್ಸನ್ ಕೂಡ ಸೇರಿದ್ದಾರೆ.
2015ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸಂಜು ಸ್ಯಾಮ್ಸನ್, ಇದುವರೆಗೆ 52 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 44 ಇನ್ನಿಂಗ್ಸ್‌ಗಳಲ್ಲಿ 25.8 ಸರಾಸರಿಯಲ್ಲಿ 1032 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕಗಳು ಮತ್ತು 3 ಅರ್ಧಶತಕಗಳು ಸೇರಿವೆ.
ಗಂಭೀರ್ ರಿಯಾಕ್ಷನ್ ವೈರಲ್
ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮೊದಲ ಸಿಕ್ಸರ್ ಬಾರಿಸಿದಾಗ ಟೀಮ್ ಇಂಡಿಯಾದ ಹೆಡ್ ಕೋಚ್ ಗಂಭೀರ್ ಕೊಟ್ಟ ರಿಯಾಕ್ಷನ್ ವೈರಲ್ ಆಗಿದೆ. ಸಂಜು ಅವರು ಯಾವುದೇ ಶ್ರಮವಿಲ್ಲದೇ ಸುಲಭವಾಗಿ ಮಾರ್ಕೋ ಯಾನ್ಸನ್ ಅವರ ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸಿದರು. ಈ ವೇಳೆ ಕ್ರೀಡಾಂಗಣದಲ್ಲಿದ್ದ ಕ್ರೀಡಾಭಿಮಾನಿಗಳು ಜೋರಾಗಿ ಕೂಗಿ ಹುರಿದುಂಬಿಸಿದರು. ಡಗೌಟ್ನಲ್ಲೂ ಸಹ ಆಟಗಾರರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಆದರೆ, ಗಂಭೀರ್ ಮಾತ್ರ ಏನೂ ಪ್ರತಿಕ್ರಿಯೆ ನೀಡದೇ ಎಂದಿನಂತೆ ತಮ್ಮ ಗಂಟು ಮುಖ ಹಾಕಿಕೊಂಡು ಸುಮ್ಮನೇ ಕುಳಿತರು. ಅಂಥಾ ಸೊಗಸಾದ ಸಿಕ್ಸರ್ ಬಾರಿಸಿದರೂ ಗಂಭೀರ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಕ್ಕೆ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಗಂಭೀರ್ ಅವರು ಸಂಜು ಕಡೆ ಪಕ್ಷಪಾತದ ನಿಲುವು ಹೊಂದಿದ್ದಾರೆ. ಸಂಜು ಚೆನ್ನಾಗಿ ಆಡುವುದು ಗಂಭೀರ್ಗೆ ಇಷ್ಟವಿಲ್ಲ ಏಕೆಂದರೆ, ಗಿಲ್ ಮೇಲೆ ಗಂಭೀರ್ಗೆ ಒಲವಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ಕೆಲವರು ಗಂಭೀರ್ ಪರ ಬ್ಯಾಟ್ ಬೀಸಿದ್ದಾರೆ. ಪೂರ್ತಿ ಪಂದ್ಯ ನೋಡಿ ಗಂಭೀರ್ ಅವರು ಸಂಜು ಬೆನ್ನು ತಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತು. ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ತಿಲಕ್ ವರ್ಮಾ (73 ರನ್, 42 ಎಸೆತ, 10 ಬೌಂಡರಿ, 1 ಸಿಕ್ಸರ್) ಮತ್ತು ಹಾರ್ದಿಕ್ ಪಾಂಡ್ಯ (63 ರನ್, 25 ಎಸೆತ, 5 ಬೌಂಡರಿ, 5 ಸಿಕ್ಸರ್) ಮಿಂಚಿನ ಅರ್ಧಶತಕ ಗಳಿಸಿದರು. ಸಂಜು ಸ್ಯಾಮ್ಸನ್ (37) ಮತ್ತು ಅಭಿಷೇಕ್ ಶರ್ಮಾ (34) ಉತ್ತಮ ಪ್ರದರ್ಶನ ನೀಡಿದರು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಕಾರ್ಬಿನ್ ಬಾಷ್ ಎರಡು ವಿಕೆಟ್ ಪಡೆದರು. ಒಟ್ನೀಲ್ ಬಾರ್ಟ್‌ಮನ್ ಮತ್ತು ಜಾರ್ಜ್ ಲಿಂಡೆ ತಲಾ ಒಂದು ವಿಕೆಟ್ ಪಡೆದರು.
ನಂತರ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ (65 ರನ್, 35 ಎಸೆತ, 9 ಬೌಂಡರಿ, 3 ಸಿಕ್ಸರ್) ಅರ್ಧಶತಕ ಗಳಿಸಿದರು ಮತ್ತು ಡೆವಾಲ್ಡ್ ಬ್ರೆವಿಸ್ (31 ರನ್, 17 ಎಸೆತ, 3 ಬೌಂಡರಿ, 2 ಸಿಕ್ಸರ್) ಅತ್ಯುತ್ತಮ ಪ್ರದರ್ಶನ ನೀಡಿದರು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಕೈಕೊಟ್ಟರು. ಇದರಿಂದಾಗಿ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 201 ರನ್ ಗಳಿಸಿತು. ಇದರಿಂದ ಭಾರತ 30 ರನ್‌ಗಳಿಂದ ಗೆದ್ದು, ಟಿ20 ಸರಣಿಯನ್ನು ಗೆದ್ದುಕೊಂಡಿತು. ಭಾರತ ಪರ ವರುಣ್ ಚಕ್ರವರ್ತಿ ನಾಲ್ಕು ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಎರಡು ವಿಕೆಟ್ ಪಡೆದರು. ಅರ್ಶದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು,