ಟೀಮ್ ಇಂಡಿಯಾ ದಿಗ್ಗಜರು, ಸಂಜು ಸ್ಯಾಮ್ಸನ್ ತಂದೆ ಸ್ಯಾಮ್ಸನ್ ವಿಶ್ವನಾಥ್
- ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ
- ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಸ್ಯಾಮ್ಸನ್ ಪಾಲು
- ಮಗನ ಬ್ಯಾಟಿಂಗ್ ಬಗ್ಗೆ ಮನದಾಳದ ಮಾತು ಹಂಚಿಕೊಂಡ ತಂದೆ
- ಈ ಇಬ್ಬರು ದಿಗ್ಗಜ ಕ್ರಿಕೆಟಿಗರೇ ಅವನಿಗೆ ಸ್ಫೂರ್ತಿ ಎಂದ ಸ್ಯಾಮ್ಸನ್ ತಂದೆ
ಕೇರಳ: ನ್ಯೂಜಿಲೆಂಡ್ ಎದುರು 96 ರನ್ಗಳ ಭರ್ಜರಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಮೂರನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿಹಿಡಿದಿದ್ದು ಇತಿಹಾಸ. ಫೈನಲ್ ಪಂದ್ಯದಲ್ಲಿಯೂ ತಂಡದ ಪರ ಅದ್ಭುತ ಇನ್ನಿಂಗ್ಸ್ ನೀಡಿದ ಸಂಜು (Sanju Samson), 46 ಎಸೆತಗಳಲ್ಲಿ 89 ರನ್ಗಳ ಉತ್ತಮ ಕೊಡುಗೆ ನೀಡಿದ್ದು ವಿಶೇಷ. ಸೂಪರ್-8, ಸೆಮಿಫೈನಲ್ ಮತ್ತು ಫೈನಲ್ನಂತಹ ಬಹುಮುಖ್ಯ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ಕೊಟ್ಟ ಸಂಜುಗೆ ಸದ್ಯ ಕ್ರಿಕೆಟ್ ದಿಗ್ಗಜರಿಂದ ಹಿಡಿದು ರಾಜಕೀಯ, ಚಿತ್ರೋದ್ಯಮ ಸೇರಿ ಹಲವು ಕ್ಷೇತ್ರಗಳ ಗಣ್ಯರು ಬೆನ್ನುತಟ್ಟಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಸೂಪರ್-8 ನಿರ್ಣಾಯಕ ಪಂದ್ಯದಲ್ಲಿ 97 ರನ್ ಮತ್ತು ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಕಾಳಗದಲ್ಲಿ 89 ರನ್ ಬಾರಿಸಿದ ಸಂಜು ಸ್ಯಾಮ್ಸನ್, ತಾಳ್ಮೆ ಹಾಗೂ ಲೆಕ್ಕಾಚಾರದ ಬ್ಯಾಟಿಂಗ್ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಇಡೀ ದೇಶವೇ ಸ್ಟಾರ್ ಬ್ಯಾಟರ್ನನ್ನು ಕೊಂಡಾಡುತ್ತಿರುವಾಗ ಸಂಜು ತಂದೆ ಸ್ಯಾಮ್ಸನ್ ವಿಶ್ವನಾಥ್, ಮಗನ ಬ್ಯಾಟಿಂಗ್ ಶೈಲಿ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಸಂಜು ಬ್ಯಾಟಿಂಗ್ ಕಲಿಕೆ ಯಾವಾಗ ಶುರುವಾಯಿತೋ, ಅಂದಿನಿಂದಲೂ ಅವನು ಟೀಮ್ ಇಂಡಿಯಾ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಸರ್ ಅವರ ಬ್ಯಾಟಿಂಗ್ ಶೈಲಿಯನ್ನು ಅನುಕರಿಸಲು ಪ್ರಾರಂಭಿಸಿದ. ಆತ ನಾಲ್ಕು ವರ್ಷದ ಮಗುವಿದ್ದಾಗ, ಮನೆಯಲ್ಲಿ ನಾನು ಭಾರತದ ಪಂದ್ಯಗಳನ್ನು ಅವರಿಗೂ ತೋರಿಸುತ್ತಿದ್ದೆ. ನನ್ನ ಜೊತೆ ಮಕ್ಕಳೊಂದಿಗೆ ಕೂತು ಪಂದ್ಯ ನೋಡ್ತಿದ್ದ ಸಂಜುಗೆ ನೋಡಿ ಸಚಿನ್ ಮತ್ತು ದ್ರಾವಿಡ್ ಅವರ ಬ್ಯಾಟಿಂಗ್ ಎಷ್ಟು ಅದ್ಭುತವಾಗಿದೆ ಎಂದು ಮೆಚ್ಚಿ, ಹೊಗಳುತ್ತಿದ್ದೆ. ಅದನ್ನು ಮನಸ್ಸಿಗೆ ತೆಗೆದುಕೊಂಡ ಮಗ, ಕಲಿಕೆಗೆ ಬಂದಾಗ ಅವರಿಬ್ಬರಂತೆ ಆಡಲು ಆರಂಭಿಸಿದ ಎಂದು ಹೇಳಿದ್ದಾರೆ.
ಮೂರು ಇನ್ನಿಂಗ್ಸ್ನಲ್ಲಿಯೂ ಸಂಜು ಬಹಳ ಕೂಲ್ ಆಗಿ ಬ್ಯಾಟ್ ಮಾಡಿದ. ಯಾವುದೇ ಬಾಲ್ಗೂ ಅನವಶ್ಯಕವಾಗಿ ಆಡಲಿಲ್ಲ. ಎಲ್ಲಾ ಶಾಟ್ಸ್ಗಳನ್ನು ಯೋಚಿಸಿ ಆಡಿದ. ಇದೇ ರೀತಿ ಅವನು ಬಾಲ್ಯದಲ್ಲಿ ಆಡುತ್ತಿದ್ದ. ಕಳೆದ ವರ್ಷಗಳಲ್ಲಿ, ಅದೆಷ್ಟೋ ಬಾರಿ ನೀನು ನಿನ್ನ ಹಳೆಯ ಸ್ಟೈಲ್ಗೆ ಹಿಂತಿರುಗು ಎನ್ನುತ್ತಿದ್ದೆ. ಆದರೆ, ನನ್ನ ಮಾತನ್ನೇ ಕೇಳ್ತಿರಲಿಲ್ಲ ಸ್ಯಾಮ್ಸನ್. ಯಾವಾಗ ಜನರು ಟೀಕಿಸಿದರೋ, ಆಗ ಅವರಿಂದ ಬಂದ ಸಲಹೆ, ಬುದ್ಧಿ ಮಾತುಗಳನ್ನು ಕೇಳಬೇಕಾಯಿತು ಅವನು ಎಂದಿದ್ದಾರೆ,(ಏಜೆನ್ಸೀಸ್).